ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಗಂಡಸಿ ಹೋಬಳಿ ವೃತ್ತದಲ್ಲಿ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಪುತ್ಥಳಿಯನ್ನು ಸ್ಥಾಪನೆ ಮಾಡುವ ವಿಚಾರ ಬಂದರೆ, ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನು ಸ್ವತಃ ಹೊತ್ತು ನಿರ್ಮಾಣ ಮಾಡುತ್ತೇನೆ; ಅದಕ್ಕಾಗಿ ಯಾರ ಮನವಿಯೂ ಅಗತ್ಯವಿಲ್ಲ ಎಂದು ಶಾಸಕ ಕೆ. ಎಂ. ಶಿವಲಿಂಗೇಗೌಡ ಸ್ಪಷ್ಟಪಡಿಸಿದರು. ಜೆಡಿಎಸ್ ಮುಖಂಡ ಎನ್. ಆರ್‌. ಸಂತೋಷ್ ಅವರ ಇತ್ತೀಚಿನ ಮನವಿಗೆ ಅವರು ಬಹಿರಂಗ ಸಭೆಯಲ್ಲೇ ತಿರುಗೇಟು ನೀಡಿದರು.

ನಗರದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಸಮೀಪ ಶ್ರೀ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ ಸಮಿತಿ ವತಿಯಿಂದ ಸ್ಥಾಪಿಸಲಾದ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹನೀಯರ ಪುತ್ಥಳಿ ವಿಚಾರದಲ್ಲೂ ಕೆಲವರು ರಾಜಕೀಯ ಮಾಡಲು ಮುಂದಾಗಿರುವುದು ದುಃಖಕರ ಎಂದರು. ಪುತ್ಥಳಿ ನಿರ್ಮಾಣದಿಂದ ಹಣ ಮಾಡುವ ಮನಸ್ಥಿತಿ ನನಗಿಲ್ಲ. ಮಹನೀಯರ ತತ್ವ-ಸಿದ್ಧಾಂತಗಳನ್ನು ನನ್ನ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡು ನಡೆದುಕೊಳ್ಳುತ್ತಿದ್ದೇನೆ. ಪ್ರತಿಮೆಗಳನ್ನು ನಿರ್ಮಿಸುವುದರ ಜೊತೆಗೆ ಅವರ ಆದರ್ಶಗಳನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿದರು.

ಇತ್ತೀಚೆಗೆ ಬಸವಣ್ಣನವರ ಪುತ್ಥಳಿ ಹಾಗೂ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಲೋಕಾರ್ಪಣೆ ಸಂದರ್ಭಗಳಲ್ಲಿ ಕೆಲವರ ವರ್ತನೆ ಜನರಲ್ಲಿ ಅಸಮಾಧಾನ ಮೂಡಿಸಿದೆ. ಕಾರ್ಯಕ್ರಮದ ವೇಳೆ ಪಟಾಕಿ ಸಿಡಿಸುವುದು, ಅಸಂಬದ್ಧ ವರ್ತನೆ ತೋರುವುದು ಸರಿಯಲ್ಲ. ಬಸವಣ್ಣನವರ ಪುತ್ಥಳಿ ಅನಾವರಣದ ಸಮಯದಲ್ಲೂ ಅನಗತ್ಯ ಊಹಾಪೋಹಗಳನ್ನು ಸೃಷ್ಟಿಸಲಾಗಿತ್ತು, ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅರಸೀಕೆರೆ ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಯಾರಿಂದಲೂ ಕದಡಲು ಬಿಡುವುದಿಲ್ಲ. ಪುತ್ಥಳಿ ನಿರ್ಮಾಣದ ಹೆಸರಿನಲ್ಲಿ ದುಡ್ಡು ಮಾಡುವ ಮನಸ್ಥಿತಿ ನನಗಿಲ್ಲ. ಅಂತಹ ಪರಿಸ್ಥಿತಿ ಬಂದರೆ ರಾಜಕೀಯವನ್ನೇ ತೊರೆಯುತ್ತೇನೆ ಎಂದು ಕಿಡಿಕಾರಿದರು. ಬಸವಣ್ಣ, ಸಂಗೊಳ್ಳಿ ರಾಯಣ್ಣ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಅವರಂತಹ ಮಹನೀಯರ ಪ್ರತಿಮೆಯನ್ನು ನೋಡುವುದಷ್ಟೇ ಸಾಕಾಗುವುದಿಲ್ಲ; ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅವರು ಸಮಾಜಕ್ಕೆ ಕರೆ ನೀಡಿದರು.


ಕೆ. ಆರ್‌. ಪೇಟೆ ಕಾಗಿನೆಲೆ ಶಾಖ ಮಠದ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಕನಕದಾಸರ ಭಕ್ತಿ ಮಾರ್ಗ ಹಾಗೂ ಸಂಗೊಳ್ಳಿ ರಾಯಣ್ಣ ತೋರಿದ ಕ್ರಾಂತಿ ಮಾರ್ಗವು ಕೇವಲ ಒಂದು ಸಮುದಾಯಕ್ಕಷ್ಟೇ ಸೀಮಿತವಲ್ಲ; ಇಡೀ ಸಮಾಜವನ್ನು ಜಾಗೃತಿಗೊಳಿಸಿದ ಮಹತ್ವದ ದಾರಿಗಳು ಎಂದು ಬಣ್ಣಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಕುರುಬ ಸಮಾಜದ ಮುಖಂಡ ಬಿಳಿ ಚೌಡಯ್ಯ ಮಾತನಾಡಿ, ಪುತ್ಥಳಿ ನಿರ್ಮಾಣದಿಂದ ಹಿಡಿದು ಅನಾವರಣದವರೆಗೆ ಯುವಕರು ತೋರಿದ ಶ್ರಮ ಶ್ಲಾಘನೀಯ. ಟ್ರ್ಯಾಕ್ಟರ್‌ ಪುನೀತ್ ಸೇರಿದಂತೆ ಅನೇಕ ಯುವಕರು ಸ್ವಯಂಪ್ರೇರಿತರಾಗಿ ಜೆಸಿಬಿ ಹಾಗೂ ಇತರ ಉಪಕರಣಗಳನ್ನು ಒದಗಿಸಿ ಯಾವುದೇ ಅಪೇಕ್ಷೆಯಿಲ್ಲದೆ ಕೆಲಸ ಮಾಡಿರುವುದು ಮಾದರಿಯಾಗಿದೆ. ಇದೇ ರೀತಿಯಲ್ಲಿ ಸಮಾಜದ ಯುವಕರು ಒಂದಾಗಿ ಮುಂದುವರಿಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹೂಡಾ ಅಧ್ಯಕ್ಷ ಗೊಲ್ಲರಹಳ್ಳಿ ಪಟೇಲ್ ಶಿವಣ್ಣ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್‌, ಕಾಂಗ್ರೆಸ್ ಮುಖಂಡರಾದ ಶಶಿಧರ್, ಗಂಜಿಗೆರೆ ಚಂದ್ರಶೇಖರ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಮತ್ತು ಮೆಟ್ರೋ ಬಾಬು, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ, ಆಚರಣೆ ಸಮಿತಿ ಅಧ್ಯಕ್ಷ ಹರೀಶ್ ಸೇರಿದಂತೆ ಕುರುಬ ಸಮಾಜದ ಮುಖಂಡರಾದ ಪರಮೇಶ್, ಮಂಜುನಾಥ್, ಲೋಕೇಶ್, ಸಂತೋಷ್, ವಿದ್ಯಾ ರಾಘವೇಂದ್ರ ಮತ್ತು ಇತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆಗೆ ಮೊದಲು ಹಾಸನ ವೃತ್ತದಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ಹಾಗೂ ಪಿ.ಪಿ. ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗಳಿಗೆ ಶಾಸಕ ಶಿವಲಿಂಗೇಗೌಡ ಮತ್ತು ಕುರುಬ ಸಮಾಜದ ಮುಖಂಡರು ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಪಿ.ಪಿ. ವೃತ್ತದಿಂದ ಮೆರವಣಿಗೆಯೊಂದಿಗೆ ಆಗಮಿಸಿದ ಶಿವಾನಂದಪುರಿ ಸ್ವಾಮೀಜಿ ಹಾಗೂ ಶಾಸಕ ಶಿವಲಿಂಗೇಗೌಡರನ್ನು ಕುರುಬ ಸಮಾಜದ ಮಹಿಳೆಯರು ಪೂರ್ಣಕುಂಭ ಸ್ವಾಗತದ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.