ಅತೀವೃಷ್ಟಿಯಿಂದ ಮನೆ ಹಾನಿಗೆ ಪರಿಹಾರ ಹೆಚ್ಚಿಸಲು ಶಾಸಕ ಶಿವಣ್ಣನವರ ಆಗ್ರಹ

| Published : Dec 18 2024, 12:46 AM IST

ಸಾರಾಂಶ

ಅತೀವೃಷ್ಟಿಯಿಂದ ಹಾನಿಯಾಗಿರುವ ಮನೆಗಳಿಗೆ ನೀಡುತ್ತಿರುವ ಪರಿಹಾರ ಏತಕ್ಕೂ ಸಾಲುವುದಿಲ್ಲ ಕೂಡಲೇ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡುವಂತೆ ಶಾಸಕ ಬಸವರಾಜ ಶಿವಣ್ಣನವರ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದಲ್ಲಿ ಆಗ್ರಹಿಸಿದರು.

ಬ್ಯಾಡಗಿ: ಅತೀವೃಷ್ಟಿಯಿಂದ ಹಾನಿಯಾಗಿರುವ ಮನೆಗಳಿಗೆ ನೀಡುತ್ತಿರುವ ಪರಿಹಾರ ಏತಕ್ಕೂ ಸಾಲುವುದಿಲ್ಲ ಕೂಡಲೇ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡುವಂತೆ ಶಾಸಕ ಬಸವರಾಜ ಶಿವಣ್ಣನವರ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದಲ್ಲಿ ಆಗ್ರಹಿಸಿದರು.

ಕಲಾಪದಲ್ಲಿನ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ಬ್ಯಾಡಗಿ ಮತಕ್ಷೇತ್ರದಲ್ಲಿ ಒಟ್ಟು 214 ಮನೆಗಳು ಬಿದ್ದಿವೆ. ಶೇ. 20ರಷ್ಟು ಹಾನಿಗೆ ₹6500 ನೀಡುತ್ತಿದೆ, ಶೇ. 50ರಷ್ಟು ಹಾನಿಗೆ ₹70 ಸಾವಿರ ಹಾಗೂ ಭಾಗಶಃ ಹಾನಿಗೆ ₹1.20 ಲಕ್ಷ ನೀಡುತ್ತಿದೆ. ಹಣ ಏತಕ್ಕೂ ಸಾಲುವುದಿಲ್ಲ. ಹೀಗಾಗಿ, ಕೂಡಲೇ ಕಳೆದ ಸರ್ಕಾರದ ಮಾದರಿಯಲ್ಲಿ ₹5 ಲಕ್ಷಕ್ಕೆ ಹೆಚ್ಚಿಸಬೇಕು ಮತ್ತು ಕಳೆದ ಸರ್ಕಾರದ ಅವಧಿಯಲ್ಲಿ ಪರಿಹಾರ ನಿಡದೇ ಸ್ಥಗಿತಗೊಂಡಿರುವ 179 ಮನೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.

ಬ್ಯಾಡಗಿ ಪಟ್ಟಣಕ್ಕೆ ರಿಂಗ್ ರೋಡ್

ಬ್ಯಾಡಗಿ ಮಾರುಕಟ್ಟೆ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಆದರೆ, ಮಾರುಕಟ್ಟೆ ಪ್ರಾಂಗಣಕ್ಕೆ ಪ್ರವೇಶಕ್ಕಾಗಿ ಸೂಕ್ತವಾದ ರಸ್ತೆ ಇಲ್ಲದಿರುವುದು ದುರದೃಷ್ಟಕರ ಈ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆ ಪ್ರವೇಶಕ್ಕೆ ಸುಸಜ್ಜಿತವಾದ ವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಾಣಕ್ಕೆ ಒತ್ತಾಯಿಸಿದರು.

ತಳಿ ಸಂಶೋಧನಾ ಘಟಕ ನಿರ್ಮಾಣ

ಮೊದಲೆಲ್ಲ ಬ್ಯಾಡಗಿ ಮೆಣಸಿನಕಾಯಿಯನ್ನು ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಹಲವು ರೋಗಗಳ ಹಾವಳಿಯಿಂದ ಮೂಲ ತಳಿ ನಾಶವಾಗುತ್ತ ಸಾಗಿ, ಮೆಣಸಿನಕಾಯಿ ಬೆಳೆ ಬೆಳೆಯುವುದು ಇದೀಗ ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಮೂಲ ತಳಿ ಸಂರಕ್ಷಣೆಗೆ ಒತ್ತು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಎಎಸ್‌ಐ ಆಸ್ಪತ್ರೆ ಮಂಜೂರ ಮಾಡಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬ್ಯಾಡಗಿ ಮೆಣಸಿಕಾಯಿ ಮಾರುಕಟ್ಟೆ ಖ್ಯಾತಿ ಗಳಿಸಲು ಪ್ರತಿಯೊಬ್ಬರೂ ಕೊಡುಗೆ ನೀಡಿದ್ದಾರೆ. ಇದರಲ್ಲಿ ಪ್ರತಿದಿನ ಹಮಾಲಿ ಮಾಡುವ 4 ಸಾವಿರಕ್ಕೂ ಅಧಿಕ ಇರುವ ಹಮಾಲರ ಕೊಡುಗೆ ಸಹ ಅಪಾರವಾಗಿದೆ. ಇಂತಹ ಹಮಾಲರ ಆರೋಗ್ಯ ರಕ್ಷಣೆ ಸಹ ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಅವರಿಗೆ ಎಪಿಎಂಸಿ ಆವರಣದಲ್ಲಿ ಒಂದು ಎಎಸ್‌ಐ ಆಸ್ಪತ್ರೆ ಮಂಜೂರು ಮಾಡುವಂತೆ ಕೋರಿದರು.

ಔದ್ಯೋಗಿಕ ಕಾರಿಡಾರ ಪ್ರಾರಂಭಿಸಿ

ಹಾವೇರಿ ಜಿಲ್ಲೆ ಹಿಂದುಳಿದಿರುವ ಕಾರಣ ಔದ್ಯೋಗಿಕವಾಗಿ ಮುಂದುವರೆದಿಲ್ಲ. ಕೈಗಾರಿಕಾ ಕ್ರಾಂತಿಯಾಗಿಲ್ಲ, ಇದರಿಂದ ಉದ್ಯೋಗಾವಕಾಶಗಳು ಅತ್ಯಂತ ಕಡಿಮೆಯಿದ್ದು, ವಿದ್ಯಾವಂತರು ಉದ್ಯೋಗ ಅರಸಿ ಬೆಂಗಳೂರು, ಪೂನಾ, ಮುಂಬೈ ಸೇರಿದಂತೆ ಹಲವು ನಗರಗಳಿಗೆ ತೆರಳುತ್ತಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ವಿಶೇಷವಾಗಿ ಔದ್ಯೋಗಿಕ ಕಾರಿಡಾರ್ ಪ್ರಾರಂಭ ಮಾಡುವಂತೆ ಒತ್ತಾಯಿಸಿದರು.

ರೈತರ ಬೇಡಿಕೆ ಈಡೇರಿಸಿ

ನಮ್ಮ ಜಿಲ್ಲೆಯಲ್ಲಿ ಮಳೆ ಆದರೂ ಕಷ್ಟ ಮಳೆ ಬರದಿದ್ದರೂ ಕಷ್ಟ. ಏನೇ ಆದರೂ ಇಲ್ಲಿನ ರೈತರ ಬಾಳು ಹಸನಾಗುತ್ತಿಲ್ಲ. ಅತೀವೃಷ್ಟಿ ಅನಾವೃಷ್ಟಿಯಿಂದ ರೈತರು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ 12 ದಿನದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದು ಸಂಬಂಧಿಸಿದ ರೈತರಿಗೆ ಬೆಳೆವಿಮೆ, ಬೆಳೆ ಪರಿಹಾರ ಸೂಕ್ತವಾಗಿ ಒದಗಿಸುವುದು ಸೇರಿದಂತೆ ವರದಾ ಮತ್ತು ಬೇಡ್ತಿ ನದಿಗಳ ಜೋಡಣೆ ಮಾಡುವ ಮೂಲಕ ಹಾವೇರಿ ಹಾಗೂ ಗದಗ ಜಿಲ್ಲೆಗೆ ಶಾಶ್ವತ ನೀರಾವರಿ ಒದಗಿಸುವಂತೆ ಆಗ್ರಹಿಸಿದರು.

ಡಿಸಿಸಿ ಬ್ಯಾಂಕ್ ಮಂಜೂರು ಮಾಡಿ

ಅಖಂಡ ಧಾರವಾಡ ಜಿಲ್ಲೆಯಿಂದ ಹಾವೇರಿ ಜಿಲ್ಲೆಯಾಗಿ 25 ವರ್ಷಗಳು ಕಳೆದಿವೆ. ಇಷ್ಟಾದರೂ ಇಲ್ಲಿ ವರೆಗೂ ಸಹ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗಿಲ್ಲ. ಈ ಕುರಿತಂತೆ ಹಲವಾರು ಹೋರಾಟಗಳು ನಡೆದಿದ್ದು, ಇನ್ನು ನಡೆಯತ್ತಲೇ, ರೈತರ ಹಿತ ದೃಷ್ಟಿಯಿಂದ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಂಜೂರು ಮಾಡಿಸುವಂತೆ ಆಗ್ರಹಿಸಿದರು.