ಪ್ರಿಯಾಂಕ್‌ ಖರ್ಗೆ ಫ್ಯಾನ್ಸಿ ಹೇಳಿಕೆಗೆ ಪಾಟೀಲ್‌ ಲೇವಡಿ

| Published : Apr 16 2024, 01:05 AM IST

ಪ್ರಿಯಾಂಕ್‌ ಖರ್ಗೆ ಫ್ಯಾನ್ಸಿ ಹೇಳಿಕೆಗೆ ಪಾಟೀಲ್‌ ಲೇವಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಪ್ರಣಾಳಿಕೆ ಪಿಕ್‌ನಿಕ್‌ ಅಲ್ಬಮ್‌ ಎಂದು ಹೇಳಿಕೆ ನೀಡಿದ್ದ ಸಚಿವರ ವಿರುದ್ಧ ಶಾಸಕ ಡಾ.ಶಿವರಾಜ ಪಾಟೀಲ್‌ ತಿರುಗೇಟು. ದೇಶದಲ್ಲಿ 60 ವರ್ಷ ಆಡಳಿತ ನಡೆಸಿ ಕಾಂಗ್ರೆಸ್‌ ಮತ್ತು 10 ವರ್ಷ ಆಡಳಿತ ನಡೆಸಿ ಬಿಜೆಪಿ ಏನು ಮಾಡಿದೆ ಎನ್ನುವುದನ್ನು ತುಲನೆ ಮಾಡಿ ನೋಡಲಿ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬರೀ ಫ್ಯಾನ್ಸಿ ಹೇಳಿಕೆ ನೀಡುವ ಕೆಲಸವನ್ನೇ ಮಾಡುತ್ತಾರೆ ಎಂದು ಶಾಸಕ ಡಾ.ಶಿವರಾಜ ಪಾಟೀಲ್‌ ಲೇವಡಿ ಮಾಡಿದರು.

ಸೋಮವಾರ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೊರಡಿಸಿರುವ ಪ್ರಣಾಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಪಿಕ್‌ನಿಕ್‌ ಅಲ್ಬಮ್ ಎಂದು ಹೇಳಿಕೆ ನೀಡಿರುವ ಪ್ರಿಯಾಂಕ್‌ ಖರ್ಗೆ ದೊಡ್ಡ ನಾಯಕರಾಗಿದ್ದಾರೆ. ಈ ಜಗತ್ತು ಕಂಡಂತಹ ಅತ್ಯಂತ ದೊಡ್ಡ ನಾಯಕರಾಗಿದ್ದಾರೆ. ಮೋದಿಗಿಂತ ಅವರೇ ದೊಡ್ಡ ನಾಯಕರು ಇರಬಹುದು ಅದಕ್ಕಾಗಿಯೇ ಸಣ್ಣ ನಾಯಕರಾದ ಪ್ರಧಾನ ಮಂತ್ರಿ ಮೋದಿ ಹೊರಡಿಸಿರುವ ಬಿಜೆಪಿ ಪ್ರಣಾಳಿಕೆ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಇದು ಅವರಿಗೆ ಸಮಂಜಸ ಅನ್ನಿಸುತ್ತದೆಯೇ ಎಂದು ತಿರುಗೇಟು ನೀಡಿದರು.

ದೇಶದಲ್ಲಿ 60 ವರ್ಷ ಆಡಳಿತ ನಡೆಸಿ ಕಾಂಗ್ರೆಸ್‌ ಮತ್ತು 10 ವರ್ಷ ಆಡಳಿತ ನಡೆಸಿ ಬಿಜೆಪಿ ಏನು ಮಾಡಿದೆ ಎನ್ನುವುದನ್ನು ತುಲನೆ ಮಾಡಿ ನೋಡಲಿ. ಯಾವ ಪಕ್ಷದವರು ಹೆಚ್ಚಾಗಿ ಸಾರ್ವಜನಿಕರಿಗೆ ಮನೆ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎನ್ನುವುದನ್ನು ತೋರಿಸಲಿ ಎಂದು ಸವಾಲು ಹಾಕಿದರು.

ಜನಸಾಮಾನ್ಯರಿಗೆ ಮೂಲಭೂತ ಸವಲತ್ತುಗಳನ್ನು ಒದಗಿಸುವುದನ್ನು ಬಿಟ್ಟು ಜನರ ತೆರಿಗೆಯಿಂದ ಗ್ಯಾರಂಟಿ ರೂಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಕಾಂಗ್ರೆಸ್‌ನವರು ಕೊಡುತ್ತಾರೆಯೇ? 1 ಲಕ್ಷ 95 ಸಾವಿರ ಕೋಟಿ ಸಾಲವು ಜನರ ತಲೆಗೆ ಕಟ್ಟಿದ್ದಾರೆ. ಸಾಲದ ಹೊರೆಯ ಗ್ಯಾರಂಟಿಯನ್ನು ಕಾಂಗ್ರೆಸ್‌ ತೆಗೆದುಕೊಳ್ಳುತ್ತದೆಯೇ? ಆ ಸಾಲವನ್ನು ನೀವು ಕಟ್ಟುತ್ತೀರಾ? ಆ ಸಾಲವನ್ನು ಜನರೇ ಕಟ್ಟಬೇಕು. ಇದೀಗ ಜನರಿಗೆ ಎಲ್ಲವೂ ಅರಿವಿಗೆ ಬರುತ್ತಿವೆ. ಪ್ರಿಯಾಂಕ್‌ ಖರ್ಗೆ ಅವರಿಗೂ ಎಲ್ಲವೂ ಗೊತ್ತಾಗಿದೆ. ಏನು ಟೀಕೆ ಮಾಡಲು ಬಾರದಕ್ಕೆ ಫ್ಯಾನ್ಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.ಈ ವೇಳೆ ಶಾಸಕ ಹಾಗೂ ಪಕ್ಷ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್‌, ವಕ್ತಾರ ಕೆ.ಎಂ.ಪಾಟೀಲ್‌, ಶಂಕರರೆಡ್ಡಿ, ರವೀಂದ್ರ ಜಲ್ದಾರ್‌, ರಾಘವೇಂದ್ರ ಊಟ್ಕೂರು, ಮಲ್ಲಿಕಾರ್ಜುನ ಹಳ್ಳೂರು ಇದ್ದರು.

ಮೋದಿ ಗ್ಯಾರಂಟಿಯಡಿ ಚುನಾವಣೆ: ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿಯಡಿ ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದು, ಬಿಜೆಪಿ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ರೈತರ,ಮಹಿಳೆಯರ,ಯುವಸಮುದಾಯ ಹಾಗೂ ಬಡಜನರ ಸಮಗ್ರ ಅಭಿವೃದ್ಧಿಯ ಅಂಶಗಳು ಅಡಗಿವೆ ಎಂದು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಸರ್ವರ ಸಮಗ್ರ ಅಭಿವೃದ್ಧಿಯೊಂದಿಗೆ ಹಳೆ ಯೋಜನೆ, ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಾರ್ಯಕ್ರಮಗಳನ್ನು ಸೇರಿಸಿ ಬಿಜೆಪಿ ಪ್ರಣಾಳಿಕೆಯನ್ನು ರೂಪಿಸಲಾಗಿದೆ ಎಂದರು.