ಅತಿಕ್ರಮಣದಾರರನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ಕಾಂಗ್ರೆಸ್ ಸರಕಾರ ಮಾಡುತ್ತಿದೆ.
ಯಲ್ಲಾಪುರ: ಹಿರಿಯ ಶಾಸಕ ಎಚ್.ಕೆ.ಪಾಟೀಲ್ ತನ್ನ ಕ್ಷೇತ್ರವನ್ನು ಬರಗಾಲ ಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದಿದ್ದಾರೆ. ಆದರೆ ಶೇ.೭೦ ರಷ್ಟು ಮತದಾರರಿಗೆ ಸರಕಾರದ ಈಗಿನ ಸುತ್ತೋಲೆಯಿಂದ ತೀವ್ರ ತೊಂದರೆ ಉಂಟುಮಾಡಿದೆ. ಇಂತಹ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಶಾಸಕರು ವಿಧಾನಸಭೆಯಲ್ಲಿ ತಮ್ಮ ರಾಜೀನಾಮೆ ಪ್ರಕಟಿಸಬೇಕಿತ್ತು ಎಂದು ಬಿಜೆಪಿ ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಹೇಳಿದರು.
ಅವರು, ಆನಗೋಡ ಮತ್ತು ದೇಹಳ್ಳಿ ಪಂಚಾಯತದ ಎದುರುಗಡೆ ನಮ್ಮ ಮನೆ ನಮ್ಮ ಹಕ್ಕು ಜನಾಂದೋಲನದಲ್ಲಿ ಶಾಸಕರ ರಾಜೀನಾಮೆಗೆ ಆಗ್ರಹಿಸಿ ಮಾತನಾಡಿ, ರಾಜೀನಾಮೆ ನೀಡಿ ಕ್ಷೇತ್ರದ ಜನರ ಜತೆ ನಿಂತಿದ್ದರೆ ಶಾಸಕರ ಜನಸ್ಪಂದನೆ ಬಗ್ಗೆ ಕ್ಷೇತ್ರಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಆದರೆ ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಆ ವಿಷಯ ಅಲ್ಲೇ ಬಿಟ್ಟಿರುವುದು ಮತದಾರರಿಗೆ ಮಾಡಿದ ಅನ್ಯಾಯ ಎಂದರು.ಹಿರಿಯ ನಾಯಕ ಉಮೇಶ್ ಭಾಗ್ವತ ಮಾತನಾಡಿ, ಅತಿಕ್ರಮಣದಾರರನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಇದಕ್ಕೆ ಯಲ್ಲಾಪುರದ ಶಾಸಕರು ಸಂಪೂರ್ಣ ಹೊಣೆ ಹೊತ್ತು ಈ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಗಣಪತಿ ಮಾನಿಗದ್ದೆ ಮಾತನಾಡಿ, ಸರಕಾರದ ಪ್ರತಿ ಆದೇಶಗಳು ಜನರಿಗೆ ಉರುಳಾಗುತ್ತಿದೆ. ಒಂದು ದಿನ ಗುಟ್ಕಾ ನಿಷೇಧ, ಒಂದು ದಿನ ಕರ ಸ್ವೀಕರಿಸಬಾರದೆಂಬ ಸರಕಾರದ ಆದೇಶಗಳು ಜನಸಾಮಾನ್ಯರ ಬಾಳಿನ ಜೊತೆಗೆ ಚೆಲ್ಲಾಟ ವಾಡುತ್ತಿವೆ ಎಂದು ಆರೋಪಿಸಿದರು.ದೇಹಳ್ಳಿಯಲ್ಲಿ ಗಣಪತಿ ಮುದ್ದೇಪಾಲ ಮಾತನಾಡಿ, ಕಾಂಗ್ರೆಸ್ ನಮಗೆಲ್ಲರಿಗೂ ಮಾರಕ. ಜನಸಾಮಾನ್ಯರ ಆಶೋತ್ತರಗಳನ್ನು ಧಿಕ್ಕರಿಸಿ ತಮ್ಮ ಮನಸ್ಸಿಗೆ ಬಂದ ಹಾಗೆ ಆಡಳಿತ ನಡೆಸುತ್ತಿರುವುದು ಮುಂದಿನ ದಿನಗಳಲ್ಲಿ ಜನಸಾಮಾನ್ಯರು ದಂಗೆ ಏಳಲು ಕಾರಣವಾಗುತ್ತದೆ ಎಂದರು.
ವಿಶ್ವನಾಥ ಹಳೇಮನೆ ಕಸ್ತೂರಿ ರಂಗನ ವರದಿ ಸಮಸ್ಯೆ ಬಗ್ಗೆ ಮಾತನಾಡಿ, ಗಾಂವಠಾಣ ಸಮಸ್ಯೆ, ಇ ಸ್ವತ್ತು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಶ್ರೀಪತಿ ಮುದ್ದೇಪಾಲ, ರಾಮಣ್ಣ ಚಿಕ್ಯಾನಮನೆ, ರಾಮಕೃಷ್ಣ ಅಳ್ವಗದ್ದೆ ಮಾತನಾಡಿದರು. ಸತ್ಯನಾರಾಯಣ ಹೆಗಡೆ, ಕೆ.ಟಿ.ಹೆಗಡೆ, ಗಣಪತಿ ಕೊಂಬೆ, ದತ್ತಣ್ಣ ಬೋಳಗುಡ್ಡೆ, ಕೀರ್ತಿರಾಜ ಕೋಟೆಮನೆ, ಮಹೇಶ ಕುಣಬಿ, ಕುಸುಮಾ ಸಿದ್ದಿ ಉಪಸ್ಥಿತರಿದ್ದರು.