ಬನವಾಸಿ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ

| Published : Jul 21 2024, 01:23 AM IST

ಬನವಾಸಿ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾಹ ಪೀಡಿತ ಸ್ಥಳಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ರೈತರ ಜತೆ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿರಸಿ

ಸತತ ಮಳೆ ಸುರಿದ ಪರಿಣಾಮ ವರದಾ ನದಿಯಲ್ಲಿ ಪ್ರವಾಹ ಉಂಟಾಗಿ ತಾಲೂಕಿನ ಭಾಶಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿಭೂಮಿ ಜಲಾವೃತಗೊಂಡಿದೆ. ಪ್ರವಾಹ ಪೀಡಿತ ಸ್ಥಳಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ರೈತರ ಜತೆ ಚರ್ಚೆ ನಡೆಸಿದರು.

ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿದ ಪರಿಣಾಮ ತಾಲೂಕಿನ ಪೂರ್ವ ಭಾಗವಾದ ಅಜ್ಜರಣಿ, ಬಾಶಿ, ತಿಗಣಿ, ಮತ್ತಗುಣಿ, ಮೊಗವಳ್ಳಿ, ಯಡಗೊಪ್ಪ, ಯಡ್ರಬೈಲ್, ಹೊಸಕೇರಿ ಭಾಗದ ಸುಮಾರು ೧,೩೦೦ ಎಕರೆ ಜಮೀನು ಮುಳುಗಡೆಯಾಗಿದೆ. ನದಿ ನೀರು ಏರಿಕೆಯಾದ ಕಾರಣ ಅಜ್ಜರಣಿ ಸೇತುವೆ ಜಲಾವೃತವಾಗಿದೆ. ಇದರಿಂದ ಸಂಚಾರ ಸ್ಥಗಿತವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಮೊಗವಳ್ಳಿಗೆ ತೆರಳಿ ರೈತರ ಜೊತೆಗೆ ಚರ್ಚಿಸಿ ಶಾಶ್ವತ ಪರಿಹಾರ ದೊರಕಿಸಲು ಪ್ರಯತ್ನಿಸುವ ಕುರಿತು ಸ್ಥಳೀಯರ ಜತೆ ಚರ್ಚಿಸಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಶಿವರಾಮ ಹೆಬ್ಬಾರ್, ಶಿವಮೊಗ್ಗ, ಸಾಗರ ಭಾಗದಲ್ಲಿ ವಿಪರೀತ ಮಳೆಯಾದರೆ ವರದಾ ನದಿಯಲ್ಲಿ ಪ್ರವಾಹ ಉಂಟಾಗಿ, ಭಾಶಿ ಗ್ರಾಪಂ ವ್ಯಾಪ್ತಿಯ ಸುಮಾರು ಗ್ರಾಮಗಳ ಕೃಷಿ ಜಮೀನುಗಳಿಗೆ ನೀರು ನುಗ್ಗುತ್ತದೆ. ಮೊಗವಳ್ಳಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಇದು ನಿನ್ನೆ, ಮೊನ್ನೆಯ ಸಮಸ್ಯೆಯಲ್ಲ. ಹಲವಾರು ದಶಕಗಳ ನಿರಂತರ ಸಮಸ್ಯೆಯಾಗಿದ್ದು, ಈ ಭಾಗದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲು ಪ್ರಯತ್ನಿಸುತ್ತೇನೆ. ಹಿಂದೆ ೫೦ ರಿಂದ ೭೦ ಎಕರೆ ಕಂದಾಯ ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರವಾಗಿದೆ. ಅವರಿಗೆ ಜಾಗ ನೀಡಿ, ಸುಮಾರು ೧೫ ಎಕರೆ ಎತ್ತರದ ಸ್ಥಳದಲ್ಲಿ ಜಾಗ ಪಡೆದುಕೊಂಡು ರೈತರಿಗೆ ಹಸ್ತಾಂತರ ಮಾಡಲು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದರು.

ಮೊಗವಳ್ಳಿ ಸದ್ಯಕ್ಕೆ ಇರುವ ದೋಣಿ ದುರಸ್ತಿಯಲ್ಲಿದ್ದು, ಈ ಕಾರಣಕ್ಕೆ ಹೊಸ ಯಾಂತ್ರೀಕರಣ ದೋಣಿ ಒದಗಿಸಲು ಜಿಲ್ಲಾಧಿಕಾರಿ ಜತೆ ಮಾತನಾಡುತ್ತೇನೆ. ಎನ್‌ಡಿಆರ್‌ಎಫ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನುದಾನವಿದೆ. ಹಣದ ಕೊರತೆಯಿಲ್ಲ ಎಂದು ಹೇಳಿದರು.

ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ತಾಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ, ಆರ್‌ಎಫ್‌ಒ ವರದರಂಗನಾಥ, ಜಿಪಂ ಮಾಜಿ ಸದಸ್ಯ ಬಸವರಾಜ ದೊಡ್ಮನಿ, ಸಿಪಿಐ ಶಶಿಕಾಂತ ವರ್ಮಾ, ಬನವಾಸಿ ಠಾಣೆ ಪಿಎಸ್‌ಐಗಳಾದ ಯಲ್ಲಾಲಿಂಗ ಕುನ್ನೂರ, ಸುನೀಲಕುಮಾರ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಅರವಿಂದ ತೆಲಗುಂದ ಮತ್ತಿತರರು ಇದ್ದರು.ರೈತ ಜತೆ ಚರ್ಚಿಸಿದ ಶಾಸಕ:ಜಲಾವೃತಗೊಂಡ ಕೃಷಿ ಭೂಮಿಗೆ ರೈತರ ಜತೆ ತೆರಳಿದ ಶಾಸಕ ಶಿವರಾಮ ಹೆಬ್ಬಾರ್, ಅರ್ಧ ದಿನ ರೈತರ ಜತೆ ಇದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ಕುರಿತು ಚರ್ಚಿಸಿದರು. ಅಲ್ಲದೇ, ರೈತರ ಅಹವಾಲುಗಳನ್ನು ಸ್ವೀಕರಿಸಿ, ಸೂಕ್ತ ಭರವಸೆ ನೀಡಿದರು.ವೈಜ್ಞಾನಿಕ ಅಧ್ಯಯನ

ಜಿಲ್ಲೆಯಲ್ಲಿ ನಡೆಯುತ್ತಿರುವ ಭೂ ಕುಸಿತದ ಕಾರಣಕ್ಕೆ ವಿಜ್ಞಾನಿಗಳಿಂದ ಭವಿಷ್ಯದ ದೃಷ್ಟಿಯಿಂದ ವೈಜ್ಞಾನಿಕ ಅಧ್ಯಯನ ಅವಶ್ಯಕತೆಯಿದೆ. ಕಳಚೆ ಗುಡ್ಡ ಕುಸಿತ ಸಮಸ್ಯೆಗೆ ಪರಿಹಾರ ಒದಗಿಸಲು ಕಾನೂನಿನ ಸಮಸ್ಯೆಯಿದೆ. ಹಾನಿಯಾಗಿರುವುದಕ್ಕೆ ಮಾತ್ರ ಪರಿಹಾರ ಒದಗಿಲು ಅವಕಾಶವಿದ್ದು, ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಗಟ್ಟಿ ನಿರ್ಣಯ ಕೈಗೊಳ್ಳುವ ಅವಶ್ಯಕತೆಯಿದೆ.

ಶಿವರಾಮ ಹೆಬ್ಬಾರ್, ಶಾಸಕ