ಮಧ್ಯರಾತ್ರಿ ಸರ್ಕಾರಿ ಆಸ್ಪತ್ರೆಗೆ ಶಾಸಕ ಸಲಗರ ಹಠಾತ್‌ ಭೇಟಿ, ತರಾಟೆ

| Published : Jan 15 2024, 01:46 AM IST

ಮಧ್ಯರಾತ್ರಿ ಸರ್ಕಾರಿ ಆಸ್ಪತ್ರೆಗೆ ಶಾಸಕ ಸಲಗರ ಹಠಾತ್‌ ಭೇಟಿ, ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ರಾತ್ರಿ ಪಾಳಿಯಲ್ಲಿ ಆಸ್ಪತ್ರೆಯಲ್ಲಿರಬೇಕಾದ ವೈದ್ಯರು ಮನೆಯಲ್ಲಿ ನಿದ್ರೆಗೆ ಜಾರಿದ್ದ ವೇಳೆ ಕರೆ ಮಾಡಿ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ನಗರದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ, ವೈದ್ಯಾಧಿಕಾರಿಗಳ ನಿರ್ಲಕ್ಷ್ಯ, ರಾತ್ರಿ ಪಾಳಿಯಲ್ಲಿ ಸಿಬ್ಬಂದಿಯಷ್ಟೇ ಅಲ್ಲ ವೈದ್ಯರ ಗೈರು ಹಾಜರಿ, ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ರವಾನಿಸುವ ಪದ್ಧತಿಯ ವಿರುದ್ಧ ಶಾಸಕ ಶರಣು ಸಲಗರ ಹಠಾತ್ತಾಗಿ ಆಸ್ಪತ್ರೆಗೆ ಭೇಟಿ ನೀಡಿ ಕಿಡಿ ಕಾರಿದರು.

ಶನಿವಾರ ಮಧ್ಯರಾತ್ರಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಗು ಆಸ್ಪತ್ರೆಗೆ ಧಿಡೀರ್‌ ಭೇಟಿ ನೀಡಿ, ರಾತ್ರಿ ಪಾಳಿಯಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದ ವೈದ್ಯರು ಮನೆಯಲ್ಲಿಯೇ ನಿದ್ರೆಗೆ ಜಾರಿದ್ದನ್ನು ಅರಿತು ಕೆಂಡಾಮಂಡಲವಾದರು.

ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಪಾತ್ರಿ ಪಾಳಿ ಹಾಜರಿರಬೇಕಿದ್ದ ಡಾ. ವೈಶಾಲಿಯವರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರಲ್ಲದೆ ಮುಖ್ಯ ವೈದಾಧಿಕಾರಿ ಅಪರ್ಣಾ ಮಹಾನಂದ ಅವರನ್ನೂ ಸಂಪರ್ಕಿಸಿ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಕ್ರಮ ಕೈಗೊಳ್ಳಬೇಕಾದೀತು ಹಾಗೂ ವೈದ್ಯರ ಹಾಜರಾತಿ, ರೋಗಿಗಳ ತಪಾಸಣೆಯ ವಿವರಗಳನ್ನು ದಾಖಲಿಸಿಟ್ಟುಕೊಳ್ಳುವಂತೆ ತಾಕೀತು ಮಾಡಿದರು.

ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಹೆದರಿಸಿ, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸುವಲ್ಲಿ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಮಾಡುತ್ತಿರುವುದು ತಿಳಿದುಬಂದಿದೆ. ಬಡ ರೋಗಿಗಳ ಪಾಲಿಗೆ ಸರ್ಕಾರಿ ಆಸ್ಪತ್ರೆ ಕಂಟಕವಾಗಿ ಪರಿಣಮಿಸುತ್ತಿದ್ದು, ಈ ವ್ಯವಸ್ಥೆ ಬದಲಾಗಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿ ಆಸ್ಪತ್ರೆಯಲ್ಲಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು.