ಯುವಕನ ಮೇಲೆ ಹಲ್ಲೆ ಮಾಡಿದ ಅಧಿಕಾರಿ ವಜಾಗೊಳಿಸಲು ಶಾಸಕ ಸಿಸಿಪಾ ಆಗ್ರಹ

| Published : May 18 2025, 11:55 PM IST

ಯುವಕನ ಮೇಲೆ ಹಲ್ಲೆ ಮಾಡಿದ ಅಧಿಕಾರಿ ವಜಾಗೊಳಿಸಲು ಶಾಸಕ ಸಿಸಿಪಾ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ತಹಸೀಲ್ದಾರ ಕಚೇರಿಯಲ್ಲಿಯೇ ಅಮಾಯಕ ಯುವಕನ ಮೇಲೆ ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಉಪ ತಹಸೀಲ್ದಾರ್ ಸೇರಿ ಹಲ್ಲೆ ಮಾಡಿದ್ದು, ಕೂಡಲೇ ಆ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಒತ್ತಾಯಿಸಿದರು.

ಗದಗ: ಗದಗ ತಹಸೀಲ್ದಾರ ಕಚೇರಿಯಲ್ಲಿಯೇ ಅಮಾಯಕ ಯುವಕನ ಮೇಲೆ ಕಾಂಗ್ರೆಸ್ ಪ್ರಭಾವಿ ಮುಖಂಡ ಹಾಗೂ ಉಪ ತಹಸೀಲ್ದಾರ್ ಸೇರಿ ಹಲ್ಲೆ ಮಾಡಿದ್ದು, ಕೂಡಲೇ ಆ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಒತ್ತಾಯಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಉತ್ತರ ಕೊಡಬೇಕು ಎಂದರು. ಅಧಿಕಾರಿಯನ್ನು ಕೇವಲ ಸಸ್ಪೆಂಡ್ ಅಷ್ಟೆ ಅಲ್ಲ, ಅವರನ್ನು ಸೇವೆಯಿಂದ ತೆಗೆದು ಹಾಕಬೇಕು. ಇಲ್ಲದಿದ್ದರೆ ಡಿಸಿ ಕಚೇರಿ ಎದುರು ಬಿಜೆಪಿಯಿಂದ ಧರಣಿ ಮಾಡಲಾಗುವುದು. ಉಪ ತಹಸೀಲ್ದಾರ್ ಚೇರ್ ಎತ್ತಿಕೊಂಡು ಹೊಡೆಯುವುದನ್ನು ವಿಡಿಯೋದಲ್ಲಿ ನೋಡಿದ್ದೇವೆ. ಉಪ ತಹಸೀಲ್ದಾರ್ ಗೂಂಡಾ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ವರ್ತನೆ ಅವರು ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿ ನೋಡಿದಾಗ ಅವರೊಬ್ಬ ಅಧಿಕಾರಿಯೇ ಎಂದು ಅನುಮಾನ ಹುಟ್ಟುತ್ತದೆ. ಈ ಘಟನೆ ನೋಡಿದರೆ ಕಾನೂನು ಸಚಿವರ ತವರಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ ಅನ್ನೋ ಪ್ರಶ್ನೆ ಕಾಡುತ್ತದೆ? ಇಂಥ ಅಧಿಕಾರಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಏನು ಹೇಳುತ್ತಾರೆ? ಜಿಲ್ಲಾ ಉಸ್ತುವಾರಿ ಸಚಿವರ ಆಪ್ತರಿಂದಲೇ ಈ ರೀತಿಯ ಕಾನೂನು ಕೈಗೆತ್ತಿಕೊಳ್ಳುವ ಘಟನೆ ನಡೆದರೆ ಹೇಗೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕಳೆದ ಒಂದು ವರ್ಷದಿಂದ ಜನರಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ರಾಜ್ಯಾದ್ಯಂತ ಇಂತಹದೇ ರೀತಿಯಲ್ಲಿ ಹಲವಾರು ಘಟನೆ ನಡೆದರೂ ಯಾರ ಮೇಲೂ ನಿರ್ದಿಷ್ಟ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಗೃಹ ಸಚಿವ ಪರಮೇಶ್ವರ ಒಳ್ಳೆಯ ವ್ಯಕ್ತಿಯಾಗಿದ್ದರೂ ಗೃಹ ಇಲಾಖೆ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ಗದಗ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಹಲ್ಲೆ ಗಮನಿಸಿದಾಗ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಅನ್ನೋದನ್ನ ಸಾಬೀತಾಗುತ್ತದೆ. ಕಾಂಗ್ರೆಸ್ ಪ್ರಭಾವಿ ಮುಖಂಡರು, ತಹಸೀಲ್ದಾರ್ ಕಚೇರಿಗೆ ಕರೆದು ಹೊಡೆಯುತ್ತಾರೆ. ಕಾನೂನು ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಹೀಗಾದರೆ ಸಾರ್ವಜನಿಕರು ಮತ್ತು ಸಾಮಾನ್ಯರ ಕಥೆ ಏನು ಎಂದು ಸಿ. ಸಿ ಪಾಟೀಲ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಡಾ. ಚಂದ್ರು ಲಮಾಣಿ, ಎಂ.ಎಂ. ಹಿರೇಮಠ, ಎಂ.ಎಸ್. ಕರಿಗೌಡ್ರ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ಮಹೇಶ ದಾಸರ, ಸಿದ್ದಣ್ಣ ಪಲ್ಲೇದ ಉಪಸ್ಥಿತರಿದ್ದರು.ಕಾಂಗ್ರೆಸ್‌ನವರಿಗೆ ಖಾತ್ರಿಯಾಗಿಲ್ಲ: ಆಪರೇಷನ್ ಸಿಂದೂರ ಬಗ್ಗೆ ಪಾಕಿಸ್ತಾನ ಪ್ರಧಾನಿ, ಸೇನಾ ಮುಖ್ಯಸ್ಥರೇ ಹೇಳಿಕೊಂಡಿದ್ದಾರೆ. ಭಾರತೀಯ ಸೇನಾ ನಾಯಕರು ಸಾಕ್ಷ್ಯಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ, ಕಾಂಗ್ರೆಸ್‌ನವರಿಗೆ ಇನ್ನೂ ಖಾತ್ರಿಯಾಗುತ್ತಿಲ್ಲ. ಕಾಂಗ್ರೆಸ್‌ನವರು ಪಾಕಿಸ್ತಾನದ ದೂತಾವಾಸದ ಅಧಿಕಾರಿಗಳಂತೆ ಮಾತನಾಡುತ್ತಿದ್ದಾರೆ. ಪ್ರಿಯಾಂಕ ಖರ್ಗೆ, ಕೃಷ್ಣ ಬೈರೇಗೌಡ, ಗುಂಡೂರಾವ್, ಸಂತೋಷ ಲಾಡ್ ಒಂದೊಂದು ರೀತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಿ.ಸಿ. ಪಾಟೀಲ್‌ ಹೇಳಿದರು.

ಅದರಲ್ಲಿಯೂ ಕೊತ್ತೂರು ಮಂಜುನಾಥ ಏನ್ ಸಾಕ್ಷಿ ಇದೆ ಅಂತಾ ಕೇಳುತ್ತಾರೆ. ಕಾಂಗ್ರೆಸ್ ದೇಶಪ್ರೇಮವನ್ನು ಪ್ರಶ್ನೆ ಮಾಡಬೇಕಾದ ಪರಿಸ್ಥಿತಿ ಇದ್ದು, ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಸಿಎಂ ಗಡಸು ಧ್ವನಿಯಲ್ಲಿ ಮಾತಾಡ್ತಾರೆ. ಅದರೆ, ನಿಮ್ಮ ಶಾಸಕರನ್ನು ನಿಯಂತ್ರಣದಲ್ಲಿ ಇಡುವ ಸಾಮರ್ಥ್ಯ ನಿಮಗಿಲ್ಲವೇ? ಅಥವಾ ನೀವು ಪಾಕಿಸ್ತಾನದ ಪರವಾಗಿ ಇದ್ದೀರಾ? ಸೈನ್ಯದ ಆತ್ಮಸ್ಥೈರ್ಯ ಕುಗ್ಗಿಸಬಾರದು ಅಂತಾ ಹೇಳೋದಕ್ಕೆ ಆಗಲ್ವಾ ಎಂದು ಸಿಎಂ ವಿರುದ್ಧೂವೂ ತೀವ್ರ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸುಪುತ್ರ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರಿಗೆ ಅಧಿಕಾರ ಸಿಕ್ಕರೆ ಮತ್ತೊಮ್ಮೆ ಭಾಷಾವಾರು, ಜಾತಿವಾರು ವಿಭಜನೆ ಮಾಡುತ್ತಾರೆ. ದೇಶದ್ರೋಹಿ ಹೇಳಿಕೆ ನೀಡುವ ಶಾಸಕರ ಮೇಲೆ ಏನ್ ಕ್ರಮ ಕೈಗೊಳ್ಳುತ್ತೀರಿ ಅಂತಾ ಯು.ಟಿ. ಖಾದರ್ ಸ್ಪಷ್ಟಪಡಿಸಬೇಕು. ಪಾಕಿಸ್ತಾನದ ವಾಯುನೆಲೆಯ ದುರಸ್ತಿಗೆ ಟೆಂಡರ್ ಕರೆದಿದ್ದಾರೆ. ಯಾರ್ಯಾರಿಗೆ ದಾಳಿಯ ಬಗ್ಗೆ ಸಂಶಯ ಇದೆಯೋ ಅವರು ಪಾಕಿಸ್ತಾನಕ್ಕೆ ಹೋಗಿ ಟೆಂಡರ್‌ನಲ್ಲಿ ಭಾಗಿಯಾಗಿ, ತಮ್ಮ ಬೆಂಬಲಿಗರಿಂದ ಟೆಂಡರ್ ಹಾಕಿಸಲಿ ಎಂದು ಶಾಸಕ ಸಿ.ಸಿ. ಪಾಟೀಲ ಆಗ್ರಹಿಸಿದರು.