ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಶಿವಗಂಗಾ ತರಾಟೆ

| Published : Aug 20 2024, 12:45 AM IST

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಶಿವಗಂಗಾ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಬಸವರಾಜು ವಿ.ಶಿವಗಂಗಾ ಅಧ್ಯಕ್ಷತೆಯಲ್ಲಿ ಮೊದಲ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.

ಕನ್ನಡಪ್ರಭವಾರ್ತೆ, ಚನ್ನಗಿರಿ

ಕೆಡಿಪಿ ಸಭೆಗೆ ಹಾಜರಾದ ಅಧಿಕಾರಿಗಳು ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ ಸಿಬ್ಬಂದಿ ಸಭೆಗೆ ಕಳುಸಿದ ಅಧಿಕಾರಿಗಳ ಮಾಹಿತಿ ಪಡೆದ ಶಾಸಕ ಬಸವರಾಜು ವಿ. ಶಿವಗಂಗಾ, ಸಭೆಗೆ ಬಾರದ ಅಧಿಕಾರಿಗಳಿಗೆ ಈ ದಿನವೇ ನೋಟಿಸ್ ನೀಡಬೇಕು ಎಂದು ತಾಪಂ ಕಾರ್ಯನಿರ್ವಣಾಧಿಕಾರಿ ಬಿ.ಕೆ. ಉತ್ತಮ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಚನ್ನಗಿರಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಥಮ ತ್ರೈಮಾಸಿಕ ಕೆ.ಡಿ.ಪಿ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಸಭೆ ಪ್ರಾರಂಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎ.ಸಿ.ಎಫ್) ರತ್ನಪ್ರಭ ಅವರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು ಚನ್ನಗಿರಿ ಕ್ಷೇತ್ರವ್ಯಾಪ್ತಿಯಲ್ಲಿ ಎಷ್ಟು ಅರಣ್ಯ ಪ್ರದೇಶವಿದೆ, ಆನೆದಾಳಿ ನಡೆಯುವ ಪ್ರದೇಶಗಳಾವುವು, ಆನೆದಾಳಿಗೆ ಒಳಗಾದ ರೈತರಿಗೆ ಎಷ್ಟು ಪರಿಹಾರ ನೀಡಿದ್ದೀರಿ, ಚಿರತೆಗಳನ್ನು ಸೆರೆಹಿಡಿಯಲು ಎಷ್ಟು ಬೋನುಗಳಿವೆ ಎಂಬ ಮಾಹಿತಿಯನ್ನು ಕೇಳಿದಾಗ ತಡಬಡಿಸಿದ ಎಸಿಎಫ್‌ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ನೀವು ಚನ್ನಗಿರಿಯಲ್ಲಿರುವ ಕಚೇರಿಗೆ ಬರುವುದೇ ಇಲ್ಲ. ಚನ್ನಗಿರಿ ತಾಲೂಕು ವ್ಯಾಪ್ತಿಯಲ್ಲಿ ಎಷ್ಟು ಅರಣ್ಯ ಪ್ರದೇಶವಿದೆ ಎಂಬುವುದೇ ತಿಳಿದಿಲ್ಲ ನೀವು ಏನು ಕೆಲಸ ಮಾಡುತ್ತೀರಿ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.

ನೀವು ಚನ್ನಗಿರಿಗೆ ವರ್ಗಾವಣೆಗೊಂಡು ಬಂದ ದಿನದಿಂದ ಇಲ್ಲಿಯ ವರೆಗೆ ಹಾಜರಾತಿ ತೆಗೆದುಕೊಂಡು ಬನ್ನಿ. ಈ ರೀತಿ ಬೇಜವಾಬ್ದಾರಿಯಿಂದ ಕೆಲಸ ಮಾಡುವುದಾದರೆ ಬೇರೆಡೆ ವರ್ಗಾವಣೆಮಾಡಿಸಿಕೊಳ್ಳಿ ಎಂದು ತಾಕೀತು ಮಾಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್, ತಾಲೂಕಿನಲ್ಲಿ 39ಸಾವಿರ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದ್ದು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದುವರೆಗೆ 32,365 ಹೆಕ್ಟೇರ್ ಬಿತ್ತನೆಯಾಗಿದೆ. 286 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಹಾನಿಗೊಳಗಾದ ಬೆಳೆ ಸಮೀಕ್ಷೆ ನಡೆಸಲಾಗಿದೆ ಎಂದರು.

ಪ್ರತಿಕ್ರಿಯಿಸಿದ ಶಾಸಕರು, ಕಳೆದ ವರ್ಷದಲ್ಲಿ ಬೆಳೆ ಪರಿಹಾರವನ್ನು ನೀಡುವಲ್ಲಿ ತಾರತಮ್ಯಗಳಾಗಿದ್ದು ಈ ವರ್ಷ ಪರಿಹಾರ ವಿತರಣೆ ಮಾಡುವಲ್ಲಿ ಅಕ್ರಮಗಳು ನಡೆದರೆ ನಾನು ಸಹಿಸುವುದಿಲ್ಲ ಎಂದು ಸೂಚಿಸಿದರು.

ಸಿಡಿಪಿಒ ನಿರ್ಮಲಾ ಮಾಹಿತಿ ನೀಡಿ, ತಾಲೂಕಿನಲ್ಲಿ ಒಟ್ಟು 403ಅಂಗನವಾಡಿ ಕೇಂದ್ರಗಳಿದ್ದು 314 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿವೆ. 18 ಅಂಗನವಾಡಿ ಶಾಲಾ ಕಟ್ಟಡಗಳಲ್ಲಿ, 48 ಕೇಂದ್ರ ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ ಎಂದರು. ಶಾಸಕರು ಪ್ರತಿಕ್ರಿಯಿಸಿ, ಅದಷ್ಟು ಶೀಘ್ರ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಅಂಗನವಾಡಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಇದನ್ನು ರದ್ದು ಪಡಿಸಿ, ಮೀಸಲಾತಿಗೆ ಅನುಗುಣ ಅರ್ಜಿ ಆಹ್ವಾನಿಸಿ ಎಂದು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ ಇಲಾಖೆಯ ಪ್ರಗತಿ ವರದಿ ನೀಡುತ್ತಿದ್ದಾಗ ಪ್ರಶ್ನಿಸಿದ ಶಾಸಕರು, ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚನ್ನಗಿರಿ ಆಸ್ಪತ್ರೆ ಕೆಲ ವೈದ್ಯರು ಸಮಯಕ್ಕೆ ಸರಿಯಾಗಿ ಕೆಲಸ ಬಾರದೆ ಖಾಸಗಿ ಕ್ಲಿನಿಕ್ ನಲ್ಲಿ ಇರುತ್ತಾರೆ. ಪಟ್ಟಣದ ಆಸ್ಪತ್ರೆ ಒಬ್ಬ ವೈದ್ಯರು ಕೆಲಸದ ಸಮಯದಲ್ಲಿ ಗುಟ್ಕಾ ಹಾಕಿರುತ್ತಾರೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದರು. ಸ್ವಚ್ಛತೆಗೆ ಕ್ರಮ ಈ ದಿನವೇ ಕ್ರಮಕೈಗೊಳ್ಳಲಿದ್ದು ಖಾಸಗಿ ಕ್ಲಿನಿಕ್ ಗಳಲ್ಲಿ ಕೆಲಸ ಮಾಡುವ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ನೋಟಿಸ್ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ಬೆಸ್ಕಾಂ, ಆಹಾರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ತಮ್ಮ-ತಮ್ಮ ಇಲಾಖೆಯ ಪ್ರಗತಿ ವಿವರವನ್ನು ಮಂಡಿಸಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಉತ್ತಮ, ತಹಸೀಲ್ದಾರ್ ರುಕ್ಮಿಣಿಬಾಯಿ, ಜಿಲ್ಲಾ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಹಾಜರಿದ್ದರು.