ಶಾಸಕ ಶಿವಗಂಗಾ ರಾಜಕೀಯದ ಇತಿಮಿತಿ ಅರಿಯಲಿ

| Published : Dec 24 2024, 12:50 AM IST

ಸಾರಾಂಶ

ಮೂರು ದಶಕಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ನಾಲ್ಕು ಸಲ ಶಾಸಕರಾಗಿ, ಮೂರು ಸಲ ಸಚಿವರಾಗಿ ನಗರ, ಜಿಲ್ಲೆ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಬಗ್ಗೆ ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ ನೀಡಿದ ಹೇಳಿಕೆ ಖಂಡನೀಯ. ಅವರು ತಮ್ಮ ಇತಿಮಿತಿ ಅರಿತು, ರಾಜಕಾರಣದಲ್ಲಿ ಮುಂದುವರಿಯಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ ಮೂರು ದಶಕಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ನಾಲ್ಕು ಸಲ ಶಾಸಕರಾಗಿ, ಮೂರು ಸಲ ಸಚಿವರಾಗಿ ನಗರ, ಜಿಲ್ಲೆ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಬಗ್ಗೆ ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ ನೀಡಿದ ಹೇಳಿಕೆ ಖಂಡನೀಯ. ಅವರು ತಮ್ಮ ಇತಿಮಿತಿ ಅರಿತು, ರಾಜಕಾರಣದಲ್ಲಿ ಮುಂದುವರಿಯಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಶಿವಗಂಗಾ ಬಸವರಾಜ ಚನ್ನಗಿರಿ ಕ್ಷೇತ್ರ ಅಭಿವೃದ್ಧಿ ಬಗ್ಗೆ ಶ್ರಮಿಸಬೇಕು. ಪಕ್ಷದ ನಾಯಕರ ಬಗ್ಗೆ ಅದರಲ್ಲೂ ಅಭಿವೃದ್ಧಿ, ದೂರದೃಷ್ಟಿಯ ನಾಯಕತ್ವಕ್ಕೆ ಹೆಸರಾದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಬಗ್ಗೆ ಆಡಿರುವ ಮಾತು ಸರಿಯಲ್ಲ. ಹೀಗೆ ದೊಡ್ಡವರ ಬಗ್ಗೆ ವಿರುದ್ಧ ಹೇಳಿಕೆ ನೀಡಿದ ಮಾತ್ರಕ್ಕೆ ಯಾರೂ ದೊಡ್ಡವರಾಗುವುದಿಲ್ಲ ಎಂದರು.

ರಾಜ್ಯಸಭೆಯಲ್ಲಿ ಕಳೆದ ವಾರ ಕೇಂದ್ರ ಅಮಿತ್ ಶಾ ಡಾ.ಬಿ.ಆರ್. ಅಂಬೇಡ್ಕರ್ ಕುರಿತಂತೆ ಅಂಬೇಡ್ಕರ್ ಅಂತಾ ಹೇಳುವುದು ಫ್ಯಾಷನ್ ಆಗಿದೆ. ಅಂಬೇಡ್ಕರ್ ಹೆಸರೇಳುವ ಬದಲು ದೇವರ ಹೆಸರು ಹೇಳಿದ್ದರೆ ಏಳು ಬಾರಿ ಸ್ವರ್ಗ ಸಿಗುತ್ತಿತ್ತು ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್‌ನ ಕೈವಾಡ ಇದೆ ಎಂದು ಅವರು ದೂರಿದರು.

ಆರೆಸ್ಸೆಸ್ ಸ್ಥಾಪನೆಯಾಗಿ 2025ಕ್ಕೆ ಸರಿಯಾಗಿ 100 ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಗಲಭೆ ಸೃಷ್ಟಿಸುವ ಕಾರಣದಿಂದಲೇ ಅಮಿತ್ ಶಾ ದುರುದ್ದೇಶದಿಂದ ಅಂಬೇಡ್ಕರ್‌ರ ಬಗ್ಗೆ ಪ್ರಜ್ಞಾಪೂರ್ವಕವಾಗಿಯೇ ಹೀಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಮಿತ್ ಶಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.ಪಕ್ಷದ ಮುಖಂಡರಾದ ಕೆ.ಎಂ. ಮಂಜುನಾಥ, ಎಂ.ಕೆ. ಲಿಯಾಖತ್ ಅಲಿ, ನಿಟುವಳ್ಳಿ ಎಸ್. ಪ್ರವೀಣಕುಮಾರ, ಬಿ.ಎಚ್. ಉದಯಕುಮಾರ, ಡಿ. ಶಿವಕುಮಾರ, ಗಿರಿಧರ್ ಸತೊಳ್‌, ಬಿ.ಎಸ್. ಸುರೇಶ, ಆನಗೋಡು ನಾಗರಾಜ, ಸಿ. ರಮೇಶ ಅರಸೀಕೆರೆ, ರವಿನಂದನ್ ಇತರರು ಇದ್ದರು.

ಡಿ.26ರಿಂದ ಬೆಳಗಾವಿಯಲ್ಲಿ ಎಐಸಿಸಿ ಸಮಾವೇಶ

ದಾವಣಗೆರೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 26-12-1924ರಂದು 2 ದಿನಗಳ ಕಾಲ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧಿವೇಶನ ನಡೆದು 100 ವರ್ಷವಾದ ಹಿನ್ನೆಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಭಾರತ ಹೆಸರಿನಡಿ ಐತಿಹಾಸಿಕ ಎಐಸಿಸಿ ಅಧಿವೇಶನವನ್ನು ಬೆಳಗಾವಿಯಲ್ಲಿ ಡಿ.26 ಮತ್ತು 27ರಂದು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.26ರ ಮಧ್ಯಾಹ್ನ 3ಕ್ಕೆ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ನಾಯಕರು, ಎಐಸಿಸಿ ಸದಸ್ಯರು, ಕೆಪಿಸಿಸಿ ಅಧ್ಯಕ್ಷರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ಪದಾಧಿಕಾರಿಗಳು, 150 ಸಂಸದರು ಪಾಲ್ಗೊಳ್ಳುವರು ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಡಿ.27ರಂದು ಬೃಹತ್ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪಕ್ಷದ ನಾಯಕರು, ಜನ ಪ್ರತಿನಿಧಿಗಳು, ಮುಖಂಡರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುವರು. ಡಿ.27ರ ಸಮಾವೇಶಕ್ಕೆ ದಾವಣಗೆರೆ ಜಿಲ್ಲೆಯಿಂದ ಎಲ್ಲಾ ಹಂತದ ಚುನಾಯಿತ ಜನ ಪ್ರತಿನಿಧಿಗಳು, ಕೆಪಿಸಿಸಿ, ಡಿಸಿಸಿ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಜಿಲ್ಲಾಧ್ಯಕ್ಷರು, ಪಕ್ಷದ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಡಿ.ಬಸವರಾಜ ಮನವಿ ಮಾಡಿದರು.