ಸಾರಾಂಶ
ಗುಬ್ಬಿ: ಕಳೆದ ಬಜೆಟ್‌ನಲ್ಲಿ ಗುಬ್ಬಿ ತಾಲೂಕಿಗೆ ಆದ್ಯತೆ ನೀಡಲಾಗಿತ್ತು, ಈ ಬಾರಿ ಬೇರೆ ತಾಲೂಕಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ಹೇಳಿದರು. ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ 50 ಲಕ್ಷ ರುಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಕಳೆದ ಹಿನ್ನೆಲೆ ಭೋಜನ ಕೂಟದ ವ್ಯವಸ್ಥೆ ಮಾಡಿದ್ದರು, ಅದರಲ್ಲಿ ಒಂದಷ್ಟು ಜನ ಶಾಸಕರು ಬಂದಿಲ್ಲ ಎಂದರೆ ಅದಕ್ಕೆ ತಪ್ಪು ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಕ್ಷೇತ್ರದಲ್ಲಿ ಕೆಲಸವಿದ್ದಾಗ ಎಲ್ಲರೂ ಬರಲು ಸಾಧ್ಯವಿಲ್ಲ ಎಂದರು. ಜೊತೆಗೆ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಹುತೇಕ ಮೇ ತಿಂಗಳಿನಲ್ಲಿ ಬರುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾವುದೇ ಒಂದು ಪಕ್ಷ ಅಧಿಕಾರದಲ್ಲಿ ಇದ್ದಾಗ ಅವರ ಕಾರ್ಯಕರ್ತರಿಗೆ ಹಲವು ಹುದ್ದೆಗಳನ್ನು ನೀಡುವುದು ಸಾಮಾನ್ಯ, ಅದರಂತೆ ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ, ಸದಸ್ಯರನ್ನಾಗಿ ಮಾಡಿ ಅವರಿಗೆ ಸಂಭಾವನೆ ನೀಡುತ್ತಿರುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು. ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಂಗಳ ನಾಗರಾಜು, ಮುಖಂಡರಾದ ದೇವರಾಜು, ನಿಟ್ಟೂರು ರಂಗಸ್ವಾಮಿ, ಕನ್ನಿಗಪ್ಪ, ಕಿಟ್ಟದಕುಪ್ಪೆ ನಾಗರಾಜು, ಜಗದೀಶ್, ಮೋಹನ್, ಚಂದ್ರಯ್ಯ, ಸಿದ್ದರಾಮೆಗೌಡ, ಕಿರಣ್, ಬೊಮ್ಮೇನಹಳ್ಳಿ ಶಿವಶಂಕರ್ ಸೇರಿ ಇನ್ನಿತರರು ಭಾಗಿಯಾಗಿದ್ದರು.