ಸಾರಾಂಶ
ಹಾನಗಲ್ಲ: ಶಾಸಕರ ಅನುದಾನದಡಿ ಸ್ಥಳೀಯ ಪೊಲೀಸ್ ಠಾಣೆಗೆ ಒದಗಿಸಿದ ನೂತನ ವಾಹನಕ್ಕೆ ಶಾಸಕ ಶ್ರೀನಿವಾಸ ಮಾನೆ ಮಂಗಳವಾರ ಹಸಿರು ನಿಶಾನೆ ತೋರಿದರು.ಇಲ್ಲಿನ ಪೊಲೀಸ್ ಠಾಣೆಗೆ ಕಳೆದ ಕೆಲ ತಿಂಗಳಿನಿಂದ ವಾಹನ ಇಲ್ಲದೇ ತುರ್ತು ಸಂದರ್ಭದಲ್ಲಿ ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆ ನೂತನ ವಾಹನ ಒದಗಿಸಲಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸರ ಸಮಸ್ಯೆಗಳಿಗೂ ಪ್ರಾಮಾಣಿಕವಾಗಿ ಸ್ಪಂದಿಸಲಾಗಿದ್ದು, ಅಗತ್ಯ ಸೌಲಭ್ಯ ದೊರಕಿಸಲಾಗಿದೆ. ಜನಸ್ನೇಹಿಯಾಗಿ ಪೊಲೀಸರು ಕರ್ತವ್ಯ ನಿರ್ವಹಿಸಲಿ. ಪೊಲೀಸರೆಂದರೆ ಭಯ ಅಲ್ಲ, ಭರವಸೆ ಮೂಡಲಿ ಎಂದು ಇದೇ ಸಂದರ್ಭದಲ್ಲಿ ಶಾಸಕ ಮಾನೆ ಹೇಳಿದರು.ಶಿಗ್ಗಾಂವಿ ಡಿವೈಎಸ್ಪಿ ಗುರುಶಾಂತಪ್ಪ, ಸಿಪಿಐ ಆಂಜನೇಯ ಎನ್.ಎಚ್., ಪಿಎಸ್‌ಐ ಸಂಪತ್ ಆನಿಕಿವಿ, ಪುರಸಭೆ ಸದಸ್ಯ ನಾಗಪ್ಪ ಸದವತ್ತಿ, ಮುಖಂಡರಾದ ಆದರ್ಶ ಶೆಟ್ಟಿ, ರಾಜೂ ಗುಡಿ, ನಿವೃತ್ತ ಶಿಕ್ಷಕ ಕೆ.ಎಲ್. ದೇಶಪಾಂಡೆ, ತಾಪಂ ಮಾಜಿ ಸದಸ್ಯ ರಾಮಣ್ಣ ಶೇಷಗಿರಿ ಇದ್ದರು.ಜಗಜೀವನರಾಂ, ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆಗೆ ಸಜ್ಜಾಗಿ
ಹಾವೇರಿ: ಜಿಲ್ಲಾ ಮಟ್ಟದಲ್ಲಿ ಡಾ. ಬಾಬು ಜಗಜೀವನರಾಂ ಅವರ 118ನೇ ಜನ್ಮದಿನಾಚರಣೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಅವರ 134ನೇ ಜನ್ಮ ದಿನಾಚರಣೆ ವಿಜೃಂಭಣೆ ಹಾಗೂ ಅರ್ಥಪೂರ್ಣ ಆಚರಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಏ. 5ರಂದು ಡಾ. ಬಾಬು ಜಗಜೀವನರಾಂ ಅವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುವುದು. ಏ. 14ರಂದು ಉಭಯ ನಾಯಕರ ಜಯಂತಿಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಲಾಗುವುದು ಎಂದರು.ಏ. 14ರಂದು ಬೆಳಗ್ಗೆ 9 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸಾರೋಟಿನಲ್ಲಿ ಉಭಯ ನಾಯಕರ ಭಾವಚಿತ್ರ ಮೆರವಣಿಗೆ ಹೊರಟು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಾ. ಬಿ.ಆರ್. ಅಂಬೇಡ್ಕರ ಭವನ ಸೇರಲಿದೆ. ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದರು.
ಮೆರವಣಿಗೆಗೆ ಕಲಾ ತಂಡ, ವೇದಿಕೆ ಅಲಂಕಾರ, ಆಸನ, ಆಮಂತ್ರಣ ಪತ್ರಿಕೆ, ಉಪನ್ಯಾಸಕ ಆಯ್ಕೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಮಾಡಬೇಕು ಎಂದು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಮಾಜದ ಮುಖಂಡರ ಮನವಿಯಂತೆ ಕಾರ್ಯಕ್ರಮದಲ್ಲಿ ಎಸ್ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲಾಗುವುದು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್, ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಉಪವಿಭಾಗಾಧಿಕಾರಿ ಚೆನ್ನಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.