ಕನ್ನಡಪ್ರಭವಾರ್ತೆ ಹುಳಿಯಾರು

ಮನೆ ಬಾಗಿಲಿಗೆ ಮನೆ ಮಗ ಕಾರ್ಯಕ್ರಮದ ಸಂದರ್ಭದಲ್ಲಿ ನನಗೊಂದು ಸೂರು ನೀಡಿ ಎಂಬ ವಯೋವೃದ್ಧೆಯ ಮನವಿಗೆ ಮಿಡಿದ ಶಾಸಕ ಸುರೇಶ್ ಬಾಬು ಶೀಟಿನ ಮನೆ ನಿರ್ಮಿಸಿಕೊಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹುಳಿಯಾರು ಸಮೀಪದ ಬರಗೀಹಳ್ಳಿಯಲ್ಲಿ 29ನೇ ವಾರದ ಮನೆ ಬಾಗಿಲಿಗೆ ಮನೆಮಗ ಕಾರ್ಯಕ್ರಮದ ಪ್ರಯುಕ್ತ ಕಾಲೋನಿಗೆ ಭೇಟಿ ನೀಡಿದ ವೇಳೆ ಸುಮಾರು 80 ವರ್ಷ ವಯಸ್ಸಿನ ಅಜ್ಜಿ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ನಮಗೆ ಒಂದು ಮನೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿದ್ದರು. ಅಜ್ಜಿಯ ದುಸ್ಥಿತಿಯನ್ನು ಕಂಡು ತಕ್ಷಣ ಸ್ಪಂದಿಸಿ, ಕೇವಲ ಮೂರು ದಿನಗಳೊಳಗೆ ಪುಟ್ಟ ಸೀಟಿನ ಮನೆಯನ್ನು ನಿರ್ಮಿಸಿ ಕೊಡುವ ಮೂಲಕ ನೀಡಿದ ಭರವಸೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇದರೊಂದಿಗೆ ವಯೋವೃದ್ಧ ಅಜ್ಜಿಯ ಕನಸಿನ ಮನೆಯ ಆಸೆಯನ್ನು ಈಡೇರಿಸಿ ಮಾನವೀಯತೆ ಮತ್ತು ಜನಪರ ಕಾಳಜಿಯ ಅಪೂರ್ವ ಉದಾಹರಣೆಯನ್ನು ನಿರ್ಮಿಸಲಾಯಿತು. ಬಡವರ ನೋವಿಗೆ ಸ್ಪಂದಿಸಿ ಅವರ ಬದುಕಿನಲ್ಲಿ ಆಶಾಕಿರಣವಾಗಿರುವ ಈ ಸೇವೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಜನಸೇವೆಯ ನಿಜವಾದ ಮಾದರಿಯಾಗಿದೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಮಾನವೀಯತೆ ಹಾಗೂ ಜನಪರ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವುದು ಸಮಾಜಕ್ಕೆ ಸ್ಪೂರ್ತಿದಾಯಕವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮಸ್ಥರು, ಮುಖಂಡರು ಹಾಗೂ ಆತ್ಮೀಯರು ಉಪಸ್ಥಿತರಿದ್ದರು.