ಸಾರಾಂಶ
ಬೇಲೂರು: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಚನ್ನಕೇಶವ ದೇಗುಲದ ಮುಂಭಾಗ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ದೇಗುಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ಎಚ್. ಕೆ ಸುರೇಶ್ ಹಾಗೂ ಪುರಸಭೆ ಅಧ್ಯಕ್ಷ ಅಶೋಕ್ ನಡುವೆ ಮಾತಿನ ಚಕಮಕಿ ನಡೆಯಿತು.
ಚನ್ನಕೇಶವ ದೇಗುಲ ಸಮೀಪದಲ್ಲಿರುವ ನವರಂಗ ಮಂಟಪ ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು ಕುಸಿದು ಬೀಳುವ ಹಂತದಲ್ಲಿದೆ. ಕಟ್ಟಡ ಕೆಳಗೆ ಬೀಳುವ ಮೊದಲು ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಿ ಎಂದು ಪುರಸಭೆ ಅಧ್ಯಕ್ಷ ಕೆ. ಆರ್ ಅಶೋಕ್ ಹಾಗೂ ಕೋಟೆ ಶ್ರೀನಿವಾಸ್ ಶಾಸಕರನ್ನು ಒತ್ತಾಯಿಸಿದರು. ಈ ಬಗ್ಗೆ ಶಾಸಕ ಎಸ್. ಕೆ ಸುರೇಶ್ ಸ್ಥಳದಲ್ಲೇ ಇದ್ದ ಕೇಂದ್ರ ಪುರಾತತ್ವ ಇಲಾಖೆ ಗೌತಮ್ ಅವರಿಗೆ ಕಾಮಗಾರಿ ಆರಂಭಿಸಲು ಸೂಚಿಸಿದರು.ಇದಕ್ಕೆ ಗೌತಮ್ ಅವರು ನಮ್ಮ ಸುಪರ್ದಿಗೆ ಬರುವುದಿಲ್ಲ. ರಾಜ್ಯ ಪುರಾತತ್ವ ಇಲಾಖೆಗೆ ಬರುತ್ತದೆ ಎಂದರು. ರಾಜ್ಯ ಪುರಾತತ್ವ ಇಲಾಖೆ ಕುಮಾರ್ ಅವರನ್ನು ಕೇಳಿದಾಗ ಇದು ಮುಜರಾಯಿಗೆ ಬರುತ್ತದೆ ಎಂದರು. ಅಧಿಕಾರಿಗಳ ಈ ಹಾರಿಕೆ ಉತ್ತರ ಕೇಳಿ ಕೆರಳಿಕೆಂಡವಾದ ಶಾಸಕರು ಸ್ಥಳೀಯರು ರೊಚ್ಚಿಗೆದ್ದು ಕ್ರಮ ಕೈಗೊಳ್ಳುವ ಮೊದಲೇ ನಿಮ್ಮಲ್ಲೇ ಒಡಂಬಡಿಕೆ ಮಾಡಿಕೊಂಡು ನವರಂಗ ಮಂಟಪ ಜೀರ್ಣೋದ್ಧಾರಕ್ಕೆ ಮುಂದಾಗುವಂತೆ ತಿಳಿಸಿದರು.
ಪುರಸಭೆ ಅಧ್ಯಕ್ಷ ಎ. ಆರ್ ಅಶೋಕ್ ಮಾತನಾಡಿ, ದೇಗುಲ ಪಾರ್ಕಿಂಗ್ ಟೆಂಡರ್ ನಲ್ಲಿ ಅವ್ಯವಹಾರ ನಡೆದಿದ್ದು ಪ್ರವಾಸೋದ್ಯಮ ಇಲಾಖೆ ಹಾಗೂ ಶಾಸಕರು ಅವರ ಹಿಂಬಾಲಕರಿಗೆ ಸಹಕರಿಸಿದ್ದು, ದೇವಸ್ಥಾನಕ್ಕೆ ಬರುವ ಆದಾಯಕ್ಕೆ ನಷ್ಟ ಮಾಡಿದ್ದಾರೆ. ವರ್ಷಕ್ಕೆ 80 ಲಕ್ಷ ರು. ಆದಾಯ ಬರುತ್ತಿತ್ತು. ಈ ಆದಾಯದಿಂದ ಭಕ್ತಾದಿಗಳಿಗೆ ದಾಸೋಹ ನಡೆಸುತ್ತಿದ್ದರು. ಈಗ ವರ್ಷಕ್ಕೆ ಕೇವಲ ಎರಡು ಲಕ್ಷಕ್ಕೆ ಮಾಡಿಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಶಾಸಕರು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದೇ ಮೊದಲ ಕೆಲಸವೆಂದು ಎಲ್ಲಾ ಕಾರ್ಯಕ್ರಮ, ಸಭೆಗಳಲ್ಲಿ ಹೇಳುತ್ತಿದ್ದಾರೆ. ಆದರೆ ಕಣ್ಣಿಗೆ ಕಾಣುತ್ತಿರುವ ಟೆಂಡರ್ ಬಗ್ಗೆ ಮೌನವಹಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು.ಇದಕ್ಕೆ ಶಾಸಕರು ಉತ್ತರಿಸಿ, ಮಾಹಿತಿ ಇಲ್ಲದೆ ಏನೇನೋ ಹೇಳಬೇಡಿ. ಮುಜರಾಯಿ ಇಲಾಖೆಯಿಂದ ಟೆಂಡರ್ ಕರೆದಿದ್ದು ಇದನ್ನು ವಿರೋಧಿಸಿ ಜಿಲ್ಲಾಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ . ಸೂಕ್ತ ಸಾಕ್ಷಿ, ಆಧಾರವಿಲ್ಲದೆ ಆರೋಪ ಮಾಡಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಸ್ಥಳದಲ್ಲಿ ಇದ್ದ ಸಬ್ ಇನ್ಸ್‌ಪೆಕ್ಟರ್ ಅವರಿಗೆ ದೇಗುಲ ಮುಂಭಾಗ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವ ವಾಹನಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ದೇಗುಲದ ಸುತ್ತಮುತ್ತಲಿನ ಅಭಿವೃದ್ಧಿ ಕೆಲಸಕ್ಕೆ ಈಗಾಗಲೇ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿರುವುದಾಗಿ ತಿಳಿಸಿ ಅಲ್ಲಿಂದ ಹೊರ ನಡೆದರು.