ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಹಳೇಬೀಡು ಹೋಬಳಿ ವ್ಯಾಪ್ತಿಯಲ್ಲಿ ಜೋಳದ ಬೆಳೆಗೆ ಮಾರಕವಾಗಿರುವ ಬಿಳಿ ಸುಳಿ ರೋಗ ತಗುಲಿದ್ದು ಶಾಸಕ ಎಚ್. ಕೆ. ಸುರೇಶ್ ಭೇಟಿ ನೀಡಿ, ಬೆಳೆ ವೀಕ್ಷಣೆ ನಡೆಸಿದರು.​ ಈ ಸಂದರ್ಭದಲ್ಲಿ ಸುರೇಶ್ ಮಾತನಾಡಿ, ಕ್ಷೇತ್ರದಲ್ಲಿ ಈಗಾಗಲೇ ಭೀಕರ ಬರಗಾಲದ ಪರಿಸ್ಥಿತಿ ಇದೆ. ಇಂತಹ ಕಠಿಣ ಸನ್ನಿವೇಶದಲ್ಲೂ ರೈತರು ಲಭ್ಯವಿರುವ ಅಲ್ಪಸ್ವಲ್ಪ ನೀರಾವರಿ ಸೌಲಭ್ಯವನ್ನು ಬಳಸಿಕೊಂಡು ಜೋಳದ ಬೆಳೆಯನ್ನು ಸಾಕಿ ಬೆಳೆಸಿದ್ದರು. ಆದರೆ, ದುರದೃಷ್ಟವಶಾತ್ ಈಗ ಇಡೀ ಬೆಳೆಗೆ ಬಿಳಿ ಸುಳಿ ರೋಗ ಆವರಿಸಿದೆ.ಈ ರೋಗದ ತೀವ್ರತೆ ಎಷ್ಟಿದೆಯೆಂದರೆ, ಈ ಜೋಳದ ದಂಟನ್ನು ದನಕರುಗಳೂ ಸಹ ತಿನ್ನಲು ಸಾಧ್ಯವಾಗದಷ್ಟು ಸಂಪೂರ್ಣವಾಗಿ ಬೆಳೆ ಹಾಳಾಗಿದೆ. ಇತ್ತ ದನಕರುಗಳಿಗೂ ಬಳಕೆಯಾಗುತ್ತಿಲ್ಲ, ಅತ್ತ ಫಸಲೂ ಕೈಗೆ ಸಿಗುತ್ತಿಲ್ಲ. ಇದು ರೈತರ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ ಎಂದರು. ವಿಧಾನಸಭಾ ​ಕ್ಷೇತ್ರದಲ್ಲಿ ಸುಮಾರು 10,000 ಹೆಕ್ಟೇರ್‌ ಪ್ರದೇಶದಲ್ಲಿ ಜೋಳದ ಬೆಳೆ ಈ ರೋಗದಿಂದಾಗಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರವು ಕೂಡಲೇ ಈ ವಿಷಯಕ್ಕೆ ಸ್ಪಂದಿಸಿ, ಬಾಧಿತ ಪ್ರದೇಶಗಳಿಗೆ ಕೃಷಿ ಅಧಿಕಾರಿಗಳನ್ನು ಕಳುಹಿಸಬೇಕು. ರೋಗ ತಗುಲಿರುವ ಜೋಳದ ಬೆಳೆ ಹಾನಿಯನ್ನು ಅಧಿಕಾರಿಗಳು ಸ್ಥಳದಲ್ಲೇ ಸಮಗ್ರವಾಗಿ ಪರಿಶೀಲಿಸಬೇಕು.ಮುಖ್ಯಮಂತ್ರಿಗಳು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಹಾನಿಗೊಳಗಾದ ರೈತರಿಗೆ ಸೂಕ್ತ ಆರ್ಥಿಕ ನೆರವು ಘೋಷಿಸಬೇಕು. ಬೆಳೆಬೆಳೆದು ಜೀವನ ಮಾಡುವುದೊಂದೇ ರೈತರಿಗಿರುವ ದಾರಿ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ಪ್ರತಿ ಹೆಕ್ಟೇರ್‌ಗೆ 5 ಲಕ್ಷ ರುಪಾಯಿ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ಎಚ್. ಕೆ. ಸುರೇಶ್ ಅವರು ಸರ್ಕಾರದ ಗಮನ ಸೆಳೆದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿ ಕಾಂತರಾಜು, ರೈತ ಮುಖಂಡರು ಹಾಗೂ ಹಳೇಬೀಡು ಹೋಬಳಿ ಕೃಷಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.