ಶಾಸಕ ಟಿ.ರಘುಮೂರ್ತಿಗೆ 2ನೇ ಬಾರಿಗೆ ನಿಗಮ ಸ್ಥಾನ

| Published : Jan 27 2024, 01:16 AM IST

ಸಾರಾಂಶ

ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರಿಗೆ ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಅವರಿಗೆ ಇದು ಎರಡನೇ ಬಾರಿಗೆ ನಿಗಮ ಮಂಡಳಿ ಸ್ಥಾನ ದೊರೆತಿದೆ.

- ಕರ್ನಾಟಕ ರಾಜ್ಯ ಕೈಗಾರಿಕಾ ಮಂಡಳಿ ಅಧ್ಯಕ್ಷರಾಗಿ ನೇಮಿಸಿ ಸರ್ಕಾರ ಆದೇಶ ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಸುಮಾರು ಮೂರು ತಿಂಗಳಿನಿಂದ ರಾಜ್ಯ ಸರ್ಕಾರ ಶಾಸಕರು ಹಾಗೂ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಆಶ್ವಾಸನೆ ನೀಡಿದ್ದು, ಗಣರಾಜ್ಯೋತ್ಸವ ದಿನದಂದೇ ಕಾಂಗ್ರೆಸ್ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರಿಗೆ ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಇನ್ನು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ನವರಿಗೆ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇಬ್ಬರೂ ಶಾಸಕರಿಗೆ ನಿಗಮ ಅಧ್ಯಕ್ಷ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಬೆಂಬಲಿಗರು ಸನ್ಮಾನಿಸಿ, ಶುಭಾಶಯ ಕೋರಿದರು.

ಕ್ಷೇತ್ರದ ಶಾಸಕ ಟಿ.ರಘುಮುರ್ತಿ ಮೂರನೇ ಬಾರಿಗೆ ಶಾಸಕರಾಗಿದ್ದು, ಅಭಿವೃದ್ಧಿ ಕಾಮಗಾರಿಗಳ ಮೂಲಕವೇ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದು, ೨೦೧೩-೧೮ರ ಅವಧಿಯಲ್ಲಿ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ತದನಂತರ ೨೦೧೯-೨೩ರ ತನಕ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆಗ ರಾಜ್ಯದಲ್ಲಿ ಆಡಳಿತ ದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರದಲ್ಲಿ ಹಟ್ಟಿ ಚಿನ್ನಗಣಿ ನಿಗಮದ ಅಧ್ಯಕ್ಷರಾಗಿ ಕೆಲವು ತಿಂಗಳು ಕಾರ್ಯ ನಿರ್ವಹಿಸಿದ ನಂತರ ಸರ್ಕಾರ ಪತನಗೊಂಡಿತು. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರೂ ಮೇ. ೨೦೨೩ರಲ್ಲಿ ಮಂತ್ರಿಮಂಡಲ ರಚನೆ ಸಂದರ್ಭದಲ್ಲಿ ಸಚಿನ ಸ್ಥಾನ ಲಭ್ಯವಾಗುವ ಬಗ್ಗೆ ದಟ್ಟವಾದ ಸುದ್ದಿಗಳು ಹರಡಿದ್ದರೂ ಕಾಂಗ್ರೆಸ್ ಸರ್ಕಾರ ಹಿರಿಯೂರು ಕ್ಷೇತ್ರದ ಶಾಸಕ ಡಿ.ಸುಧಾಕರ್‌ಗೆ ಮಂತ್ರಿಸ್ಥಾನ ನೀಡಿತು.

ಮಂಡಳಿ ಅಧ್ಯಕ್ಷ ಸ್ಥಾನ ಬೇಡ ಎಂದು ಪತ್ರ ಬರೆದಿದ್ದ ಶಾಸಕ

ಹಿಂದೆ ಸಚಿವ ಸ್ಥಾನ ಕೈ ತಪ್ಪಿದರೂ ಶಾಸಕ ಟಿ.ರಘುಮೂರ್ತಿ ನಾನು ಪಕ್ಷದ ಕಟ್ಟುನಿಟ್ಟಿನ ಆದೇಶ ಪಾಲಿಸುವೆ, ಯಾವುದೇ ಕಾರಣಕ್ಕೂ ಯಾವುದೇ ಸ್ಥಾನ ನೀಡಲಿ ಎಂದು ಒತ್ತಡ ಹೇರುವುದಿಲ್ಲ. ನಿಮಗ ಮಂಡಳಿ ಅಧ್ಯಕ್ಷ ಸ್ಥಾನ ನನಗೆ ಬೇಡವೆಂದು ಕೆಪಿಸಿಸಿಗೆ ಪತ್ರ ಬರೆದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಪ್ರತ್ಯೇಕವಾಗಿ ಮನವಿಯನ್ನೂ ಸಹ ಮಾಡಿದ್ದರು. ಆದರೆ, ಸರ್ಕಾರ ಮತ್ತೆ ರಘುಮೂರ್ತಿಯವರಿಗೆ ಎರಡನೇ ಬಾರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿದೆ. ಈ ಬಗ್ಗೆ ಶಾಸಕರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.