ವಾಸವಾಂಬೆ ದರ್ಶನ ಪಡೆದ ಶಾಸಕ ಟಿ.ರಘುಮೂರ್ತಿ

| Published : May 19 2024, 01:56 AM IST

ಸಾರಾಂಶ

ಜಿಲ್ಲೆಯ ವಿವಿಧೆಡೆ ಸಂಭ್ರಮದ ವಾಸವಿ ಜಯಂತಿ ಆಚರಿಸಲಾಯಿತು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ಸೇರಿದಂತೆ ಅಲ್ಲಲ್ಲಿ ಆರ್ಯ ವೈಶ್ಯ ಸಮಾಜದವರು ಸಡಗರದಿಂದ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ / ಹಿರಿಯೂರು/ ಹೊಸದುರ್ಗ

ದೇವರ ಮೇಲೆ ಅಪಾರವಾದ ಭಕ್ತಿಶ್ರದ್ಧೆಯನ್ನಿಟ್ಟು ನಿರಂತರ ಪೂಜಿಸುವ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿರುವ ಆರ‍್ಯವೈಶ್ಯ ಸಮಾಜದ ಬಂಧುಗಳು ಉತ್ತಮ ಜೀವನ ರೂಪಿಸಿಕೊಂಡಿದ್ದು, ಸಮಾಜದಲ್ಲಿ ಅವರಿಗೆ ಎಲ್ಲರಿಂದಲೂ ಹೆಚ್ಚಿನ ಗೌರವವಿದೆ ಎಂದು ಕ್ಷೇತ್ರದ ಶಾಸಕ, ಕರ್ನಾಟಕ ರಾಜ್ಯ ಸಣ್ಣಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಶನಿವಾರ ಇಲ್ಲಿನ ವಾಸವಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಸವಿ ಜಯಂತಿ ಹಿನ್ನೆಲೆಯಲ್ಲಿ ದೇವಿಯ ದರ್ಶನ ಪಡೆದು ಪೂಜಾಕಾರ್ಯ ನೆರವೇರಿಸಿ ನೆರೆದಿದ್ದ ಭಕ್ತರೊಂದಿಗೆ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ವಾಸವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಮಾತೆ ವಾಸವಾಂಬೆ ನನಗೆ ಕರುಣಿಸಿದ್ದು, ನಾನು ಸಹ ನಿಮ್ಮ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆಂದರು.

ರ‍್ಯವೈಶ್ಯ ಸಂಘದ ಅಧ್ಯಕ್ಷ ಬಿ.ಎಂ.ಕೃಷ್ಣಮೂರ್ತಿ, ಯುವ ಘಟಕದ ಅಧ್ಯಕ್ಷ ಆರ್.ಚೇತನ್‌ಕುಮಾರ್, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಜ್ಯೋತಿ ನಾಗರಾಜು, ವಾಸವಿ ವನಿತಾ ಮಂಡಳಿ ಅಧ್ಯಕ್ಷೆ ಕಲ್ಪನಾ ಮಧುಸೂದನ್, ಸಮಾಜದ ಮುಖಂಡರಾದ ಸಿ.ಎಸ್.ಪ್ರಸಾದ್, ಸಿ.ಬಿ.ಆದಿ ಭಾಸ್ಕರಶೆಟ್ಟಿ, ಪಿ.ಆರ್.ಪದ್ಮನಾಭ, ನಾಗಭೂಷಣ್, ಎಂ.ಆರ್.ಮಧು, ರಮೇಶ್ ಮುಂತಾದವರಿದ್ದರು.ಹಿರಿಯೂರಿನಲ್ಲೂ 31ನೇ ವಾಸವಿ ಜಯಂತಿ

ಹಿರಿಯೂರು: ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಶ್ರೀ ವಾಸವಿ ಯುವಜನ ಸಂಘದ ವತಿಯಿಂದ 31ನೇ ವರ್ಷದ ವಾಸವಿ ಜಯಂತಿಯನ್ನು ಮರಡಿಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮಾಜದವರು ಆಚರಿಸಿದರು. ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವರ ಫೋಟೋವನ್ನು ಕಳಸ ದೊಂದಿಗೆ ಪೂಜೆ ಮಾಡಿ ಕುಂಕುಮಾರ್ಚನೆಯ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಶ್ರೀರಾಮ ದೇವಸ್ಥಾನದವರೆಗೆ ಮೇರವಣಿಗೆ ಮೂಲಕ ಸಾಗಿ ಗಂಗಾಪೂಜೆ ನೆರವೇರಿಸಿದರು. ಈ ವೇಳೆ ದೊಡ್ಡಸಿದ್ದವನಹಳ್ಳಿ, ಕ್ಯಾದಿಗ್ಗೆರೆ, ಜೆ ಎನ್ ಕೋಟೆ, ಸಜ್ಜನಕೆರೆ, ಮರಡಿಹಳ್ಳಿ,ಐಮಂಗಲ , ವದ್ದೀಕೆರೆ ಮತ್ತು ದಾಸಣ್ಣನ ಮಾಳಿಗೆ ಗ್ರಾಮದ ಆರ್ಯವೈಶ್ಯ ಬಂಧುಗಳು ಹಾಜರಿದ್ದರು.ಹೊಸದುರ್ಗದಲ್ಲೂ ವಾಸವಿ ಜಯಂತಿ ಸಂಭ್ರಮ

ಹೊಸದುರ್ಗ: ಪಟ್ಟಣ ಸೇರಿದಂತೆ ಹೊಸದುರ್ಗ ತಾಲೂಕಿನಾದ್ಯಂತ ಶನಿವಾರ ವಾಸವಿ ಜಯಂತಿಯನ್ನು ಆರ್ಯ ವೈಶ್ಯ ಸಮಾಜದವರು ಸಂಭ್ರಮ ಸಡಗರದಿಂದ ಆಚರಿಸಿದರು.ಈ ಸಂಬಂಧ ಪಟ್ಟಣದ ವಾಸವಿ ದೇವಾಲಯದಲ್ಲಿ ಬೆಳಿಗ್ಗೆ ಅಭಿಷೇಕ, ಪೂಜೆ, ಹೋಮ ಹವನ ನಡೆದವು. ಮಧ್ಯಾಹ್ನ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ಅಲಂಕೃತ ವಾಹನದಲ್ಲಿ ವಾಸವಿ ದೇವಿಯವರ ರಾಜಬೀದಿ ಉತ್ಸವ ವಿವಿಧ ಜಾನಪದ ಕಲಾಪ್ರಕಾರ ಗಳೊಂದಿಗೆ ನಡೆಸಲಾಯಿತು. ತಾಲೂಕಿನ ಬೆಲಗೂರು, ಶ್ರೀರಾಂಪುರ ಗ್ರಾಮಗಳಲ್ಲಿರುವ ವಾಸವಿ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೂ ವಿಶೇಷ ಪೂಜಾ, ಅಲಂಕಾರ ಕಾರ್ಯಕ್ರಮಗಳು ನಡೆದವು. ಸಂಜೆ ಅಲಂಕೃತ ವಾಹನದಲ್ಲಿ ವಾಸವಿದೇವಿಯವರ ಉತ್ಸವ ನಡೆಸಲಾಯಿತು.

ಇನ್ನು, ಹೊಸದುರ್ಗ ಪಟ್ಟಣದ ವಾಸವಿ ದೇವಾಲಯದಲ್ಲಿ ಮೂಲದೇವರಿಗೆ ನೋಟು, ಚಿಲ್ಲರೆ, ನವಧಾನ್ಯ, ಡ್ರೈ ಫ್ರೂಟ್ಸ್‌ಗಳಿಂದ ಮಾಡಿದ ಹಾರಗಳಿಂದ ಅಲಂಕಾರ ಮಾಡಲಾಗಿತ್ತು.