ಹಗರಣ ಖಂಡಿಸಿ ಇಂದು ಎಂಡಿಎ ಕಚೇರಿಗೆ ಬಿಜೆಪಿ ಮುತ್ತಿಗೆ

| Published : Jul 12 2024, 01:36 AM IST

ಸಾರಾಂಶ

ಪ್ರತಿಭಟನಾ ಸಭೆಯ ನಂತರ ಪಾದಯಾತ್ರೆ ಮೂಲಕ ಎಂಡಿಎ ಕಚೇರಿ ಆವರಣಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 50:50 ಅನುಪಾತ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿ ಜು. 12 ರಂದು ಮೈಸೂರಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಟಿ.ಎಸ್‌‍. ಶ್ರೀವತ್ಸ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಿಂದ ಸುಮಾರು 10 ಸಾವಿರು ಜನರು ಭಾಗವಹಿಸುವುದಾಗಿ ಹೇಳಿದರು.

ಪ್ರತಿಭಟನಾ ಸಭೆಯ ನಂತರ ಪಾದಯಾತ್ರೆ ಮೂಲಕ ಎಂಡಿಎ ಕಚೇರಿ ಆವರಣಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌, ಶಾಸಕ ಸಿ.ಎನ್‌‍. ಅಶ್ವತ್ಥ ನಾರಾಯಣ್‌, ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಸೇರಿ ಪ್ರಮುಖ ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಅವರು ಹೇಳಿದರು.

ನಗರದ ಹೃದಯ ಭಾಗದ ಡಿ. ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್‌ ರಸ್ತೆಯ ವ್ಯಾಪಾರಿಗಳು 2 ಗಂಟೆಯ ಕಾಲ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಅವರಲ್ಲಿ ಮನವಿ ಮಾಡಿದ ಅವರು, ನಿವೇಶನಾಂಕ್ಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಕೈ ಬಲಪಡಿಸಬೇಕು ಎಂದು ಕೋರಿದರು.

ಜನರಿಂದ ಮುತ್ತಿಗೆ

ನಾವು ಪ್ರತಿಭಟನೆ ಮಾಡುತ್ತೇವೆ. ಪ್ರತಿಭಟನೆ ವೇಳೆ ಜನರು ಆಕ್ರೋಶಗೊಂಡು ಎಂಡಿಎಗೆ ಮುತ್ತಿಗೆ ಹಾಕಬಹುದು. ಅವರನ್ನು ತಡೆಯಲಾಗುವುದಿಲ್ಲ. ಪ್ರತಿಭಟನೆಗೆ ಅವಕಾಶ ನೀಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದೇವೆ ಎಂದು ನಗರ ಬಿಜೆಪಿ ಅಧ್ಯಕ್ಷ ಎಲ್‌. ನಾಗೇಂದ್ರ ಹೇಳಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್‌‍.ಟಿ. ಸೋಮಶೇಖರ್‌ ಸರಿಯಾಗಿ ಕೆಲಸ ಮಾಡದಿದ್ದರಿಂದ ಈ ಸಮಸ್ಯೆ ಉದ್ಭವಾಗಿವೆ. ಬಿಜೆಪಿಯಿಂದ ಗೆದ್ದು ಕಾಂಗ್ರೆಸ್‌‍ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಏಜೆಂಟ್‌‍ ರೀತಿ ವರ್ತನೆ ಮಾಡುತ್ತಿದ್ದಾರೆ. ಅವರ ಮಾತಿಗೆ ಮಾನ್ಯತೆ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜೋಗಿ ಮಂಜು, ಮೋಹನ್‌, ದೇವರಾಜ್‌, ಮಹೇಶ್‌ ರಾಜ್‌ ಅರಸ್‌ ಇದ್ದರು.