ಕೊಪ್ಪ ತಾಲೂಕಿನ ಭಂಡಿಗಡಿ, ನಿಲುವಾಗಿಲು ಹಾಗೂ ಶಾನುವಳ್ಳಿ ಭಾಗದ ರೈತರು ಹಲವು ವರ್ಷಗಳಿಂದ ಅನುಭವಿಸುತ್ತಿದ್ದ ವಿದ್ಯುತ್ ಸರಬರಾಜು ತೊಂದರೆಗೆ ಇದೀಗ ಶಾಶ್ವತ ಪರಿಹಾರ ದೊರೆತಿದೆ.
ರೈತರ ಹಲವು ವರ್ಷಗಳ ನಿರತಂರ ಬೇಡಿಕೆಗೆ ಸ್ಪಂದನೆ
ಕನ್ನಡಪ್ರಭ ವಾರ್ತೆ, ಕೊಪ್ಪತಾಲೂಕಿನ ಭಂಡಿಗಡಿ, ನಿಲುವಾಗಿಲು ಹಾಗೂ ಶಾನುವಳ್ಳಿ ಭಾಗದ ರೈತರು ಹಲವು ವರ್ಷಗಳಿಂದ ಅನುಭವಿಸುತ್ತಿದ್ದ ವಿದ್ಯುತ್ ಸರಬರಾಜು ತೊಂದರೆಗೆ ಇದೀಗ ಶಾಶ್ವತ ಪರಿಹಾರ ದೊರೆತಿದೆ. ಶಾಸಕ ಟಿ.ಡಿ. ರಾಜೇಗೌಡ ಅವರ ವಿಶೇಷ ಮುತುವರ್ಜಿಯಿಂದ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ಮಂಜೂರು ಮಾಡಿಸಿ, ಮೆಸ್ಕಾಂ ಇಲಾಖೆಯ ಸಹಯೋಗದೊಂದಿಗೆ ಇಡೀ ಗ್ರಾಮಕ್ಕೆ ನೂತನ ವಿದ್ಯುತ್ ಮಾರ್ಗವನ್ನು ಅಳವಡಿಸಲಾಗಿದೆ. ಶಾಸಕ ರಾಜೇಗೌಡ ಅವರು ಸ್ಥಳೀಯ ಪ್ರಮುಖರು, ರೈತರು ಹಾಗೂ ಕೂಲಿ ಕಾರ್ಮಿಕರ ಸಮ್ಮುಖದಲ್ಲಿ ಮಂಗಳವಾರ ನೂತನ ವಿದ್ಯುತ್ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು.ಭಂಡಿಗಡಿ, ನಿಲುವಾಗಿಲು, ಶಾನುವಳ್ಳಿ ಭಾಗದಲ್ಲಿ ಕಡಿಮೆ ವೋಲ್ಟೇಜ್, ಪದೇ ಪದೇ ವಿದ್ಯುತ್ ವ್ಯತ್ಯಯ, ಹಳೆಯ ಲೈನ್ ತುಂಡಾಗುವುದು ರೈತರನ್ನು ಕಾಡುತ್ತಿತ್ತು. ಕೃಷಿ ಪಂಪ್‌ಸೆಟ್‌ಗಳು ಸುಟ್ಟು ಹೋಗುವುದು, ನೀರಾವರಿಗೆ ತೊಂದರೆ ಯಾಗುವುದು ಸಾಮಾನ್ಯವಾಗಿತ್ತು. ಜಮೀನಿನಲ್ಲಿ ಹಾದುಹೊಗಿರುವ ವಿದ್ಯುತ್ ಲೈನ್‌ನಿಂದ ಮುಂದಿನ ದಿನಗಳಲ್ಲಿ ತೊಂದರೆ ಯಾಗಲಿದೆ. ಈ ಭಾಗದಲ್ಲಿ ಲಿಂಕ್ ಲೈನ್ ಮಾಡಿಸಿಕೊಡುವಂತೆ ಮನವಿ ಸಲ್ಲಿಸಿದ್ದರು.
ರೈತರ ಮನವಿಗೆ ಸ್ಪಂದಿಸಿದ ಶಾಸಕ ರಾಜೇಗೌಡ ಇಂಧನ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಭಾಗಕ್ಕೆ ಪ್ರತ್ಯೇಕ ಫೀಡರ್ ಹಾಗೂ ಹೊಸ ಊಖಿ/ಐಖಿ ಮಾರ್ಗಕ್ಕೆ ಕೋಟ್ಯಂತರ ರು. ಅನುದಾನ ಬಿಡುಗಡೆ ಮಾಡಿಸಿದ್ದರು. ಭಂಡಿಗಡಿಯಿಂದ ಬೊಮ್ಲಪುರ ಬಾಗಕ್ಕೆ, ಕೊಡ್ಲುರಿನಿಂದ ನಿಲುವಾಗಿಲು, ಶಾನುವಳ್ಳಿ, ಕಮ್ಮರಡಿ ಭಾಗಗಳ ಸಂಪೂರ್ಣ ಗ್ರಾಮಗಳಿಗೆ ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ರೈತರ ಕಣ್ಣೀರು ಒರೆಸುವುದೇ ನನ್ನ ಮೊದಲ ಆದ್ಯತೆ. ವಿದ್ಯುತ್ ಇಲ್ಲದೆ ಕೃಷಿ ಮಾಡಲು ಸಾಧ್ಯವಿಲ್ಲ. ಇನ್ನು ಮುಂದೆ ಈ ಭಾಗದ ರೈತರಿಗೆ ವಿದ್ಯುತ್ ಸಮಸ್ಯೆ ಆಗುವುದಿಲ್ಲ. ಟ್ರಾನ್ಸ್ಫಾರ್ಮರ್ ಸಮಸ್ಯೆ ಇದ್ದರೂ ತಕ್ಷಣ ಸರಿಪಡಿಸಲು ಮೆಸ್ಕಾಂಗೆ ಸೂಚಿಸಿದ್ದೇನೆ ಶಾಸಕ ರಾಜೇಗೌಡ ತಿಳಿಸಿದರು.ಸ್ಥಳೀಯ ರೈತ ಮುಖಂಡರು ಮಾತನಾಡಿ, ೧೦ ವರ್ಷದ ಬೇಡಿಕೆ ಈಡೇರಿದೆ. ಶಾಸಕರಿಗೆ ಹಾಗೂ ಮೆಸ್ಕಾಂ ಅಧಿಕಾರಿ ಗಳಿಗೆ ವಿದ್ಯುತ್ ಗ್ರಾಮದ ಪರವಾಗಿ ಅಭಿನಂದನೆ ತಿಳಿಸಿದರು ಕಾರ್ಯಕ್ರಮದಲ್ಲಿ ವಿದ್ಯುತ್ ಗುತ್ತಿಗೆದಾರ ಎನ್.ಕೆ. ಸತೀಶ್‌ರವರನ್ನು ಗ್ರಾಮಸ್ಥರ ಪರವಾಗಿ ಶಾಸಕರು ಸನ್ಮಾನಿಸಿ ಗೌರವಿಸಿದರು. ಮೆಸ್ಕಾಂ ಕಾರ್ಯಪಾಲಕ ಅಭಿಯಂತರರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ನೂರಾರು ರೈತರು, ಕೂಲಿ ಕಾರ್ಮಿಕರು ಕಾರ್ಯಕ್ರಮದಲ್ಲಿದ್ದರು.