ಸಾರಾಂಶ
ರಟ್ಟೀಹಳ್ಳಿ: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್‌ದಿಂದ ಪ್ರತಿ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳ ಪಟ್ಟಿ ದೊಡ್ಡದಿದ್ದು, ಪಕ್ಷದ ಹಿರಿಯರು ಯಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತಾರೋ ಅವರ ಪರವಾಗಿ ಎಲ್ಲರೂ ಒಮ್ಮತದಿಂದ ದುಡಿದು ಪಕ್ಷ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಮನವಿ ಮಾಡಿದರು.ಸೋಮವಾರ ಪಟ್ಟಣದ ಬಂಟೇಶ್ವರ ದೇವಸ್ಥಾನದಲ್ಲಿ ನಡೆದ ರಟ್ಟೀಹಳ್ಳಿ ಪಪಂ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ 5 ವರ್ಷಗಳ ನಂತರ ಮೊದಲ ಚುನಾವಣೆ ನಡೆಯುತ್ತಿದೆ. ಇದು ತಾಲೂಕಿನ ಪ್ರಮುಖ ಚುನಾವಣೆಯಾಗಿದ್ದು, ರಟ್ಟೀಹಳ್ಳಿ ಪಪಂ ಚುನಾವಣೆಯ ಫಲಿತಾಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಮನಿಸುತ್ತಿದ್ದು, ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಪರ ಹಗಲಿರುಳು ಪ್ರಾಮಾಣಿಕವಾಗಿ ದುಡಿದು 15 ವಾರ್ಡ್‌ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದರು.15 ವಾರ್ಡ್‌ಗಳಲ್ಲೂ ಚುನಾವಣೆಗೆ ಸ್ಪರ್ಧಿಸಲು ಅನೇಕರು ಟಿಕೆಟ್‌ಗಾಗಿ ಮನವಿ ಮಾಡುತ್ತಿದ್ದು, ಸದ್ಯದಲ್ಲೆ ಚುನಾವಣಾ ವೀಕ್ಷಕರನ್ನು ನೇಮಿಸಿ ಮಾಹಿತಿ ಪಡೆಯಲಾಗುವುದು. ವಾರ್ಡ್‌ಗಳಲ್ಲಿನ ಜನಪ್ರಿಯತೆ, ಜನಪರ ಕಾಳಜಿ ಹಾಗೂ ಆಯಾ ವಾರ್ಡ್‌ಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಕಾರ್ಯಕರ್ತರೇ ಆಯ್ಕೆ ಮಾಡಿ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಬೇಕು ಹಾಗೂ ಪಕ್ಷದ ಮಾನದಂಡಗಳ ಆಧಾರದ ಮೇಲೆ ಟಿಕೆಟ್ ಗೋಷಣೆ ಮಾಡಲಾಗುವುದು ಎಂದರು.ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ರಟ್ಟೀಹಳ್ಳಿ ಪಪಂ ಚುನಾವಣೆ ಹಿನ್ನೆಲೆ ಆ. 17ರಂದು ಮತದಾನ ನಡೆಯಲಿದ್ದು, ಎಲ್ಲ ಅಭ್ಯರ್ಥಿಗಳು ಆಯಾ ವಾರ್ಡ್‌ಗಳ ಮತದಾರರನ್ನು ಮನೆ ಮನೆಗೆ ಭೇಟಿ ನೀಡಿ ಸರ್ಕಾರದ ಎಲ್ಲ ಸಾಧನೆಗಳು ಹಾಗೂ ಮಹತ್ವಾಕಾಂಕ್ಷಿ ಯೋಜನೆಗಳಾದ 5 ಗ್ಯಾರಂಟಿಯ ಲಾಭಗಳನ್ನು ಮತದಾರರಿಗೆ ಮನ ಮುಟ್ಟುವಂತೆ ಮಾಹಿತಿ ನೀಡಬೇಕು ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, 5 ವರ್ಷಗಳ ನಂತರ ಪಟ್ಟಣ ಪಂಚಾಯಿತಿ ಮೊದಲ ಚುನಾವಣೆ ನಡೆಯುತ್ತಿದ್ದು, ಇದು ಈ ಭಾಗದ ಅಭಿವೃದ್ದಿಗಾಗಿ ಪ್ರಮುಖ ಚುನಾವಣೆಯಾಗಿದ್ದು, 15 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವಿಗೆ ದುಡಿಯೋಣ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ಬನ್ನಿಕೋಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ಬಾಬುಸಾಬ್ ಜಡದಿ, ರಿಯಾಜಹಮ್ಮದ ತಡಕನಹಳ್ಳಿ, ರವೀಂದ್ರ ಮುದಿಯಪ್ಪನವರ, ಹನುಮಂತಗೌಡ ಭರಮಣ್ಣನವರ, ಮಹೇಶ ಗುಬ್ಬಿ, ಸರ್ಫರಾಜ ಮಾಸೂರ, ಮಹಮ್ಮದ ಖಾಜಿ, ಎಸ್.ಬಿ. ತಿಪ್ಪಣ್ಣನವರ, ಬೀರೇಶ ಕರಡೆಣ್ಣನವರ, ವಿಜಯ ಅಂಗಡಿ, ಅಬ್ಬಾಸ್ ಗೋಡಿಹಾಳ, ಮಂಜು ಮಾಸೂರ, ಮಂಜು ಅಸ್ವಾಲಿ ಮುಂತಾದವರು ಇದ್ದರು.