ಏತ ನೀರಾವರಿ ಸೇರಿದಂತೆ ಯಾವುದೇ ಯೋಜನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಹಿರಿಯ ಅಧಿಕಾರಿಗಳು ಅತ್ಯಗತ್ಯವಾಗಿ ಯೋಜನೆಗಳ ಪ್ರಗತಿ ಕುರಿತಂತೆ ಮೇಲ್ವಿಚಾರಣೆ ನಡೆಸಬೇಕು. ಯೋಜನೆಗಳಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾದರೆ ನಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಏತ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎಂ ಉದಯ್ ಗುರುವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ಶಾಸಕರು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮಂಡ್ಯ ಜಿಲ್ಲೆಯ ಇಂಜಿನಿಯರ್ ಗಳ ಸಭೆಯಲ್ಲಿ ಏತ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮದ್ದೂರು ತಾಲೂಕಿನ ಆತಗೂರು ಹೋಬಳಿ, ಬನ್ನಹಳ್ಳಿ, ಚಿಕ್ಕ ಅರಸಿನಕೆರೆ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.

ನೀರಾವರಿ ಯೋಜನೆಯ ಕಾಮಗಾರಿಗಳ ವೇಗವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಅಡೆತಡೆಗಳು ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ನಿಗಮದ ಅಧಿಕಾರಿಗಳು ಆದ್ಯತೆ ಮೇರೆಗೆ ಶೀಘ್ರ ಪರಿಹರಿಸಬೇಕು. ಯೋಜನೆಗಳ ವಿಳಂಬ ದಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಏತ ನೀರಾವರಿ ಸೇರಿದಂತೆ ಯಾವುದೇ ಯೋಜನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಹಿರಿಯ ಅಧಿಕಾರಿಗಳು ಅತ್ಯಗತ್ಯವಾಗಿ ಯೋಜನೆಗಳ ಪ್ರಗತಿ ಕುರಿತಂತೆ ಮೇಲ್ವಿಚಾರಣೆ ನಡೆಸಬೇಕು. ಯೋಜನೆಗಳಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾದರೆ ನಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಸೂಪರಿಂಡೆಂಟ್ ಇಂಜಿನಿಯರ್ ರಘು ರಾಮ್, ಚೀಫ್ ಇಂಜಿನಿಯರ್ ಗಣೇಶ್, ಎಇಇಗಳಾದ ಗಣೇಶ್, ಸೂಪರಿಂಡೆಂಟ್ ಇಂಜಿನಿಯರ್ ಎಲೆಕ್ಟ್ರಿಕ್ ಹರೀಶ್, ಮದ್ದೂರು ಕಾವೇರಿ ನೀರಾವರಿ ನಿಗಮದ ಉಪ ವಿಭಾಗದ ಎಇಇ ನಾಗರಾಜು ಪ್ರಶಾಂತ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.