ನೀತಿ ನಿಯಮ ಗಾಳಿಗೆ ತೂರಿ, ಶಿಷ್ಟಾಚಾರ ಉಲ್ಲಂಘಿಸಿದ ರಾಜ್ಯಾಡಳಿತ: ಶಾಸಕ ವೇದವ್ಯಾಸ್‌ ಕಾಮತ್‌ ಆರೋಪ

| Published : May 17 2025, 01:29 AM IST

ನೀತಿ ನಿಯಮ ಗಾಳಿಗೆ ತೂರಿ, ಶಿಷ್ಟಾಚಾರ ಉಲ್ಲಂಘಿಸಿದ ರಾಜ್ಯಾಡಳಿತ: ಶಾಸಕ ವೇದವ್ಯಾಸ್‌ ಕಾಮತ್‌ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲೆಯ ಹಲವಾರು ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಆಗಮಿಸಿರುವ ಸಂದರ್ಭದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಸಹಿತ ಹಲವಾರು ಲೋಪಗಳನ್ನು ಎಸಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮುಖ್ಯಮಂತ್ರಿಗಳು ಉದ್ಘಾಟನೆಗೊಳಿಸಿದ ಎಲ್ಲ ಕಾಮಗಾರಿಗಳು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಾಗಿದೆ. ಅಂದಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಿಶೇಷ ಮುತುವರ್ಜಿ ವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದು ಪ್ರಸ್ತುತ ಸಂಸದ ಕ್ಯಾ.ಬ್ರಿಜೇಶ್ ಚೌಟರವರು ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪ್ರಧಾನಿಗಳ ಕನಸಿನ ಕೂಸಾದ ಸ್ಮಾರ್ಟ್ ಸಿಟಿಯಿಂದ ಎಲ್ಲ ಅನುದಾನಗಳನ್ನು ಪಡೆದುಕೊಂಡು ಪ್ರಧಾನಿಗಳ ಭಾವಚಿತ್ರವನ್ನು ಹಾಕುವ ಸೌಜನ್ಯವನ್ನೂ ತೋರದೇ ಎಲ್ಲವೂ ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಟಿದೆ. ಜಿಲ್ಲಾಧಿಕಾರಿಗಳ ಕಚೇರಿಯನ್ನೂ ಸಹ ಸಂಪೂರ್ಣಗೊಳಿಸಲು ಸುಮಾರು 20 ಕೋಟಿ ರು.ಗೂ ಅಧಿಕ ಹಣವನ್ನು ಸ್ಮಾರ್ಟ್ ಸಿಟಿ ವತಿಯಿಂದಲೇ ಪಡೆದುಕೊಳ್ಳಲಾಗಿದೆ ಹೊರತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ್ದಲ್ಲ ಎಂದರು.

ಉರ್ವ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಜನಪ್ರತಿನಿಧಿಯೇ ಅಲ್ಲದ ಕಾಂಗ್ರೆಸ್‌ನ ವ್ಯಕ್ತಿಯೊಬ್ಬರು ಮೊನ್ನೆಯೇ ಅನಧಿಕೃತವಾಗಿ ಪೂಜೆ ನಡೆಸಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಿಯಮಗಳ ಹೆಸರಿನಡಿ ಮಂಗಳೂರು ನಗರದಲ್ಲಿ ಕೋಲ, ನೇಮ, ಬ್ರಹ್ಮಕಲಶ, ಭಜನಾ ಮಂಗಲೋತ್ಸವಗಳಿಗೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್-ಫ್ಲೆಕ್ಸ್‌ಗಳನ್ನು ಕಿತ್ತೆಸೆದಿದ್ದ ಅಧಿಕಾರಿಗಳೇ ಇದೀಗ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿ ಕಾಂಗ್ರೆಸ್ ನಾಯಕರು ಎಲ್ಲೆಂದರಲ್ಲಿ ಅನಧಿಕೃತವಾಗಿ ಹಾಕಿರುವ ಫ್ಲೆಕ್ಸ್‌ಗಳನ್ನು ಮುಟ್ಟುವ ಧೈರ್ಯ ತೋರದೇ ಕೈಕಟ್ಟಿ ಕುಳಿತಿದ್ದಾರೆ. ಅಭಿವೃದ್ಧಿ ಹಾಗೂ ಜನಕಲ್ಯಾಣ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕಾರಣವನ್ನು ಮಾಡದೇ, ಜನಪರ ಆಡಳಿತಕ್ಕೆ ವಿರೋಧ ಪಕ್ಷಗಳೊಂದಿಗೂ ಕೈಜೋಡಿಸಬೇಕು ಎಂದು ಶಾಸಕರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದರು.