ಸಾರಾಂಶ
ಕನ್ನಡಪ್ರಭವಾರ್ತೆ ಪಾವಗಡ
ಗುಜ್ಜನಡು ಕೋಣನಕುರಿಕೆ ಕಿರ್ಲಾಲಹಳ್ಳಿಯ ಮಾರ್ಗದ ರಸ್ತೆ ಕಾಮಗಾರಿ ಹಾಗೂ ಲಿಂಗದಹಳ್ಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಎಚ್. ವಿ. ವೆಂಕಟೇಶ್ ಚಾಲನೆ ನೀಡಿದರು.ಭಾನುವಾರ ತಾಲೂಕಿನ ದವಡಬೆಟ್ಟ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಶಾಸಕ ವೆಂಕಟೇಶ್ ಅವರು ಬಹುದಿನಗಳ ಬೇಡಿಕೆಯಾಗಿದ್ದ ತಾಲೂಕಿನ ದವಡಬೆಟ್ಟ ಕಿರ್ಲಾಲಹಳ್ಳಿ ರಸ್ತೆ ಮಾರ್ಗದ ಕೆರೆಯ ಹಿಂಭಾಗದಲ್ಲಿ 1.20 ಕೋಟಿ ರುಪಾಯಿಗಳ ವೆಚ್ಚದ ರಸ್ತೆ ಹಾಗೂ ರೈತರ ಬಾವಿ ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರೆವೇರಿಸಲಾಗಿದೆ. ಕಳೆದ ಎರಡು ವರ್ಷದ ಹಿಂದೆ ಮಳೆಯ ಪ್ರಭಾವದಿಂದ ತಾಲೂಕಿನ ಗುಜ್ಜನಡು ಕೋಣನಕುರಿಕೆ ಕಿರ್ಲಾಲಹಳ್ಳಿಯ ಮಾರ್ಗದ ರಸ್ತೆ ತಾ.ದವಡಬೆಟ್ಟ ಗ್ರಾಮದಲ್ಲಿ ಮಧ್ಯೆ ರೈತರ ಬಾವಿಗೆ ಕುಸಿದು ಬಿದ್ದು ಹಾಳಾಗಿತ್ತು. ಕರೆಕಟ್ಟೆ ಹಾಗೂ ಬಾವಿ ರಸ್ತೆಯ ಎರಡು ಬದಿ ಹರಿದುಹಂಚಿಹೋಗಿದ್ದ ಪರಿಣಾಮ ರಸ್ತೆ ಹಾಳಾಗಿ ಬಸ್ ಲಾರಿ ಅಟೋ ಇತರೆ ವಾಹನಗಳ ಸಂಚಾರ ಸ್ಥಗಿತವಾಗಿದ್ದ ಪರಿಣಾಮ ಈ ಭಾಗದ ಜನತೆಗೆ ಗ್ರಾಮಗಳಿಂದ ಬೇರೆಡೆ ತೆರಳಲು ತೀವ್ರ ಸಮಸ್ಯೆ ಆಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿ ಹಾಗೂ ಆಸ್ಪತ್ರೆಗೆ ತೆರಳಲು ಸಹ ಸಾಧ್ಯವಾಗುತ್ತಿರಲಿಲ್ಲ. ತಮ್ಮ ಗ್ರಾಮಗಳಿಂದ ಬೇರೆ ಊರುಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ವಾಹನಗಳ ಮೂಲಕ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದ ಜನತೆಯ ಸಮಸ್ಯೆ ಹಾಗೂ ಒತ್ತಡವನ್ನು ಗಂಭೀರವಾಗಿ ಪರಿಗಣಿಸಿ, ಲೋಕೋಪಯೋಗಿ ಇಲಾಖೆಯಿಂದ 1.20ಕೋಟಿ ಅನುದಾನ ಬಿಡುಗಡೆಯಾಗಿದ್ದು ಸುಸಜ್ಜಿತವಾದ ರಸ್ತೆ ಹಾಗೂ ರೈತರ ಬಾವಿಗೆ ತಡೆಗೋಡೆ ನಿರ್ಮಿಸಿಕೊಡುವಂತೆ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಆದೇಶಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಬಳಿಕ ಅಲ್ಲಿಂದ ತೆರಳಿದ ಶಾಸಕ ಎಚ್.ವಿ.ವೆಂಕಟೇಶ್ ತಾಲೂಕಿನ ಗಡಿ ಪ್ರದೇಶವಾದ ಲಿಂಗದಹಳ್ಳಿ ಗ್ರಾಮದಲ್ಲಿ 50 ಲಕ್ಷ ರು.ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ ಇದೇ ಗ್ರಾಮದಲ್ಲಿ 1.87 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ್ದ ನೂತನ ರಸ್ತೆಯನ್ನು ಟೆಪ್ ಕಟ್ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು. ತದ ನಂತರ ಇದೇ ಗ್ರಾಮದಲ್ಲಿ 10ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕರ ಬಸ್ ತಂಗುದಾಣಕ್ಕೆ ಚಾಲನೆ ಹಾಗೂ 9 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯದ ಉದ್ಘಾಟನೆ ನೆರೆವೇರಿಸಿ ಲೋಕಾರ್ಪಣೆ ಮಾಡಿದರು.ಈ ವೇಳೆ ಲೋಕೋಪಯೋಗಿ ಇಲಾಖೆಯ ಎಇಇ ಅನಿಲ್‌ಕುಮಾರ್ ಕೆಪಿಸಿಸಿ ಸದಸ್ಯ ಕೆ.ಎಸ್.ಪಾಪಣ್ಣ ಪುರಸಭಾ ಅಧ್ಯಕ್ಷ ಪಿ.ಎಚ್.ರಾಜೇಶ್,ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ ,ತೆಂಗಿನಕಾಯಿ ರವಿ,ಸಮಾಜ ಸೇವಕ ಬತ್ತಿನೇನಿ ನಾಗೇಂದ್ರ ರಾವ್ ,ಸಣ್ಣರಾಮರೆಡ್ಡಿ, ಮದನ್ ರೆಡ್ಡಿ,ಹನುಮೇಶ್ ,ವೇಣುಗೋಪಾಲ್ ರೆಡ್ಡಿ ವೈಎಸ್‌ಆರ್ ಕರಿಯಪ್ಪ ರೆಡ್ಡಿ ಹಾಗೂ ಇತರೆ ಅನೇಕ ಮಂದಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.