ಶಾಸಕರು ನೀಡಿರುವ ನೆರವಿನಿಂದಾಗಿ ಅಜ್ಜಿ | Kannada Prabha
Image Credit: KP
ಮಗಳು ತನ್ನ ಹೆಸರಿನಲ್ಲಿ ಮಾಡಿದ ಸಾಲ ಮಗಳ ಅಕಾಲಿಕ ನಿಧನದ ನಂತರ ತನಗೆ ಮರುಪಾವತಿಯ ಹೊಣೆ ಬಿದ್ದು, ಕಂಗಲಾಗಿದ್ದ ಅಜ್ಜಿಯ ವ್ಯಥೆಯ ಕತೆಯನ್ನು ಆಲಿಸಿದ ಪುತ್ತೂರು ಶಾಸಕರು ಬ್ಯಾಂಕ್ ಸಾಲವನ್ನು ತಾನೇ ಮರುಪಾವತಿ ಮಾಡಿ ಅಜ್ಜಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಮಗಳು ತನ್ನ ಹೆಸರಿನಲ್ಲಿ ಮಾಡಿದ ಸಾಲ ಮಗಳ ಅಕಾಲಿಕ ನಿಧನದ ನಂತರ ತನಗೆ ಮರುಪಾವತಿಯ ಹೊಣೆ ಬಿದ್ದು, ಕಂಗಲಾಗಿದ್ದ ಅಜ್ಜಿಯ ವ್ಯಥೆಯ ಕತೆಯನ್ನು ಆಲಿಸಿದ ಪುತ್ತೂರು ಶಾಸಕರು ಬ್ಯಾಂಕ್ ಸಾಲವನ್ನು ತಾನೇ ಮರುಪಾವತಿ ಮಾಡಿ ಅಜ್ಜಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ೩೪ ನೆಕ್ಕಿಲಾಡಿಯ ಬೀತಲಪ್ಪು ಎಂಬಲ್ಲಿಯ ಅಪ್ಪಿ ಅವರ ಹೆಸರಿನಲ್ಲಿ ಅವರ ಮಗಳು ಉಪ್ಪಿನಂಗಡಿಯ ಯೂನಿಯನ್ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡುತ್ತಿದ್ದರಾದರೂ, ಕೆಲ ಸಮಯದ ಹಿಂದೆ ಅವರ ಮಗಳು ಅನಾರೋಗ್ಯದಿಂದ ನಿಧನರಾದರು. ಬಳಿಕ ದುಡಿಯಲು ಸಾಧ್ಯವಾಗದ ಅಜ್ಜಿಗೆ ಸಾಲ ಮರುಪಾವತಿಯ ಹೊಣೆ ಬಿತ್ತು. ಇತ್ತ ಬ್ಯಾಂಕ್ ಸಾಲ ಬೆಳೆಯುತ್ತಲೇ ಹೋಗಿತ್ತು. ಸಾಲ ಬಾಕಿಯಾಗಿದ್ದರಿಂದ ಬ್ಯಾಂಕ್‌ನವರು ಅಪ್ಪಿಯವರ ಉಳಿತಾಯ ಖಾತೆಯನ್ನು ಬ್ಲಾಕ್ ಮಾಡಿದ್ದರು. ಇದರಿಂದ ಅಪ್ಪಿಯವರಿಗೆ ತಿಂಗಳಿಗೆ ಬರುತ್ತಿದ್ದ ಒಂದು ಸಾವಿರ ರು. ಪೆನ್ಶನ್ ಹಣವನ್ನೂ ಅವರಿಗೆ ಪಡೆದುಕೊಳ್ಳಲು ಅಸಾಧ್ಯವಾಯಿತು. ಬ್ಯಾಂಕ್‌ನವರು ಒಟಿಎಸ್ (ಒನ್ ಟೈಂ ಸಟ್ಲ್ಮೆಂಟ್)ಗೆ ಅವಕಾಶ ಮಾಡಿಕೊಟ್ಟರೂ ಅಜ್ಜಿಯ ಕೈಯಲ್ಲಿ ಅದನ್ನು ಕಟ್ಟಲು ದುಡ್ಡಿರಲಿಲ್ಲ. ಅಜ್ಜಿಯು ತನ್ನ ಸಂಕಷ್ಟ ಸ್ಥಿತಿಯನ್ನು ೩೪ ನೆಕ್ಕಿಲಾಡಿಯ ಸಾಮಾಜಿಕ ಕಾರ್ಯಕರ್ತೆ ಅನಿ ಮಿನೇಜಸ್, ಶಾಸಕ ಅಶೋಕ್ ಕುಮಾರ್ ರೈಯವರ ಗಮನಕ್ಕೆ ತಂದಿದ್ದರು. ಕೂಡಲೇ ಸ್ಪಂದಿಸಿದ ಶಾಸಕರು ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದಲ್ಲದೆ, ಅಪ್ಪಿಯವರ ಸಾಲವನ್ನು ಚುಕ್ತಾಗೊಳಿಸಲು ಬೇಕಾದ ೧೩ ಸಾವಿರ ರುಪಾಯಿಯನ್ನು ಶಾಸಕ ಅಶೋಕ್ ಕುಮಾರ್ ರೈಯವರು ಚೆಕ್ ಮೂಲಕ ನೀಡಿದರು. ಚೆಕ್ ಅನ್ನು ಅಪ್ಪಿಯವರು ಬ್ಯಾಂಕ್ ವ್ಯವಸ್ಥಾಪಕರಿಗೆ ನೀಡಿದ್ದು, ತನ್ನ ಸಾಲವನ್ನು ಚುಕ್ತಾಗೊಳಿಸಿದ್ದಾರೆ. ಶಾಸಕರು ನೀಡಿರುವ ನೆರವಿನಿಂದಾಗಿ ಅಜ್ಜಿಯು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.