ಇಲ್ಲಿನ ಆದರ್ಶ ನಗರದಲ್ಲಿ ಸುಮಾರು 3 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಅಗ್ನಿಶಾಮಕ ದಳದ ಕಚೇರಿ ಕಾಮಗಾರಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.

ಮಣಿಪಾಲ: ಇಲ್ಲಿನ ಆದರ್ಶ ನಗರದಲ್ಲಿ ಸುಮಾರು 3 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಅಗ್ನಿಶಾಮಕ ದಳದ ಕಚೇರಿ ಕಾಮಗಾರಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಕೈಗಾರಿಕಾ ಪ್ರದೇಶ, ಬೃಹತ್ ವಸತಿ ಸಮುಚ್ಚಯಗಳಿರುವ ಮಣಿಪಾಲದ ಬಹು ವರ್ಷಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ದಳ ಘಟಕಕ್ಕೆ ನನ್ನ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಅಗ್ನಿ ಶಾಮಕ ದಳವನ್ನು ಮಂಜೂರು ಮಾಡಿದ್ದು, ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಚೇರಿಯು ಶೀಘ್ರ ಪೂರ್ಣಗೊಂಡು ಕಾರ್ಯಾರಂಭಗೊಳ್ಳುವ ಮೂಲಕ ಜನರ ಸೇವೆಗೆ ಲಭ್ಯವಾಗಲಿದೆ ಎಂದರು.

ಮಣಿಪಾಲ ವಾರ್ಡಿನ ಮಾಜಿ ನಗರಸಭಾ ಸದಸ್ಯರಾದ ಮಂಜುನಾಥ ಮಣಿಪಾಲ ಮಣಿಪಾಲ ಭಾಗಕ್ಕೆ ಅತೀ ಅವಶ್ಯಕವಾಗಿದ್ದ ಅಗ್ನಿಶಾಮಕ ದಳ ಘಟಕ ಆರಂಭಕ್ಕೆ ವಿಶೇಷ ಮುತುವರ್ಜಿವಹಿಸಿ ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಶಾಸಕ ಯಶ್ ಪಾಲ್ ಸುವರ್ಣ ಅವರಿಗೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಕಲ್ಪನಾ ಸುಧಾಮ, ಹರೀಶ್ ಶೆಟ್ಟಿ, ಟಿ. ಜಿ. ಹೆಗಡೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಈಶ್ವರ ನಗರ ವಾರ್ಡ್ ಅಧ್ಯಕ್ಷ ಸುರೇಶ್ ಆಚಾರ್ಯ, ಕಾರ್ಯದರ್ಶಿ ಕೃಷ್ಣ ನಾಯ್ಕ್, ಪ್ರಮುಖರಾದ ನರಸಿಂಹ ನಾಯಕ್, ಪೃಥ್ವಿರಾಜ್, ನಿತಿನ್ ಪೈ, ಗುರುರಾಜ್ ಭಂಡಾರಿ, ಸತೀಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.