ಉಡುಪಿ: ಉಪ್ಪೂರು ಗ್ರಾಪಂ ವ್ಯಾಪ್ತಿಯ ನಾಗರಜಿಡ್ದ ಬಳಿ ನದಿಕೊರೆತ ಪ್ರದೇಶಕ್ಕೆ ಅಧಿಕಾರಿಗಳ ಜೊತೆ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಭಾಗದಲ್ಲಿ ನದಿಕೊರೆತ ತೀವ್ರಗೊಂಡ ಪರಿಣಾಮ ಹಲವಾರು ತೆಂಗಿನ ಮರಗಳು ಕೊಚ್ಚಿ ಹೋಗಿದ್ದು, ಕಾಂಕ್ರೀಟ್ ಸಂಪರ್ಕ ರಸ್ತೆ ಕಡಿದು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಕ್ಷಣ ತುರ್ತು ಕಾಮಗಾರಿ ನಡೆಸುವಂತೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.ನದಿಯ ಪಶ್ಚಿಮ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಹಾಕಿರುವ ಮಣ್ಣನ್ನು ತಕ್ಷಣ ತೆರವುಗೊಳಿಸಿ ಮಳೆಗಾಲದಲ್ಲಿ ನದಿಯ ನೀರಿನ ಸರಾಗ ಹರಿವಿಗೆ ಕ್ರಮ ವಹಿಸಿ ಪೂರ್ವ ಬದಿಯಲ್ಲಿ ನದಿ ಕೊರೆತ ನಿಯಂತ್ರಿಸಲು ಅಗತ್ಯ ಕ್ರಮವಹಿಸುವಂತೆ ಹೇಳಿದರು.ನಾಗರಜಿಡ್ಡ ಭಾಗದ ನದಿ ಕೊರೆತ ಸಮಸ್ಯೆ ಇರುವ ಸ್ಥಳಗಳಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ಈಗಾಗಲೇ ಮಂಜೂರಾಗಿದ್ದು ಶೀಘ್ರ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ತಿಳಿಸಿದರು.

ಸ್ಥಳೀಯ ಪ್ರಮುಖರಾದ ಸತೀಶ್ ಪೂಜಾರಿ, ಅವಿನಾಶ್ ಶೆಟ್ಟಿ, ಮಹೇಶ್ ಕೋಟ್ಯಾನ್, ರಾಜೇಶ್ ರಾವ್, ಉಮೇಶ್, ಗ್ರಾಮ ಲೆಕ್ಕಾಧಿಕಾರಿ ಪ್ರಮೋದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದರ್ಶ, ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುನೀಲ್, ಸಹಾಯಕ ಅಭಿಯಂತರ ಪ್ರೀತಮ್ ಹಾಗೂ ಸ್ಥಳೀಯರು ಇದ್ದರು.