ಶಾಸಕ ಯತೀಂದ್ರ ರಾಜಕಾರಣದಲ್ಲಿ ಪ್ರಬುದ್ಧನಲ್ಲ: ಶಾಸಕ ಕೆ.ಎಂ.ಉದಯ್

| Published : Oct 27 2025, 12:00 AM IST

ಶಾಸಕ ಯತೀಂದ್ರ ರಾಜಕಾರಣದಲ್ಲಿ ಪ್ರಬುದ್ಧನಲ್ಲ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಹೈಕಮಾಂಡ್ ಅಥವಾ ಸ್ವಂತ ಸಿಎಂ ಸಿದ್ದರಾಮಯ್ಯ ನಾಯಕತ್ವದ ಬದಲಾವಣೆ ಬಗ್ಗೆ ಅಧಿಕೃತವಾಗಿ ಹೇಳಬೇಕು. ಯಾರೋ ಆದಿ ಬೀದಿಯಲ್ಲಿ ಹೋಗುವವರು ಕೇವಲ ಚಟಕ್ಕೆ ಮಾತನಾಡಿದಕ್ಕೆಲ್ಲ ಬೆಲೆ ಕೊಡುವ ಅಗತ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರ ರಾಜ್ಯ ರಾಜಕಾರಣದ ಆಗು-ಹೋಗುಗಳನ್ನು ನಿರ್ಧರಿಸುವಷ್ಟು ಪ್ರಬುದ್ಧನಲ್ಲ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಲೇವಡಿ ಮಾಡಿದರು.

ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಈ ರಾಜ್ಯದ ನಾಯಕರೆ ಹೊರತು ಪುತ್ರ ಯತೀಂದ್ರ ನಾಯಕನಲ್ಲ. ಆತ ತಮ್ಮ ವರುಣ ಕ್ಷೇತ್ರಕ್ಕೆ ಸೀಮಿತವಾದ ಶಾಸಕ ಎಂದು ಕುಹಕವಾಡಿದರು.

ರಾಜ್ಯ ರಾಜಕಾರಣದಲ್ಲಿ ನವಂಬರ್ ವೇಳೆಗೆ ಕ್ರಾಂತಿಯಾಗುತ್ತದೆ ಎಂದು ನಿರುದ್ಯೋಗಿಗಳಾಗಿರುವ ಬಿಜೆಪಿ ನಾಯಕರ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಕ್ರಾಂತಿ ಆಗುತ್ತದೆ ಎಂಬ ವಿಪಕ್ಷದವರು ಊಹಿಸಿದ್ದರೆ ಅದು ಅವರ ಬ್ರಾಂತಿ ಎಂದು ಟೀಕಿಸಿದರು.

ಹೈಕಮಾಂಡ್ ಅಥವಾ ಸ್ವಂತ ಸಿಎಂ ಸಿದ್ದರಾಮಯ್ಯ ನಾಯಕತ್ವದ ಬದಲಾವಣೆ ಬಗ್ಗೆ ಅಧಿಕೃತವಾಗಿ ಹೇಳಬೇಕು. ಯಾರೋ ಆದಿ ಬೀದಿಯಲ್ಲಿ ಹೋಗುವವರು ಕೇವಲ ಚಟಕ್ಕೆ ಮಾತನಾಡಿದಕ್ಕೆಲ್ಲ ಬೆಲೆ ಕೊಡುವ ಅಗತ್ಯವಿಲ್ಲ ಎಂದರು.

ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಸರ್ಕಾರ ವಿವಿಧ ಇಲಾಖೆಗಳ ಮೂಲಕ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಈ ಎಲ್ಲಾ ಕಾಮಗಾರಿಗಳ ಬಗ್ಗೆ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ನಂತರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಈ ವೇಳೆ ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ರಾಘವ, ಗ್ರಾಮದ ಮುಖಂಡರಾದ ಚನ್ನವೀರ ಗೌಡ, ಸತೀಶ್ ಹಾಗೂ ಗ್ರಾಮದ ಮುಖಂಡರು ಇದ್ದರು.

ಇಂದಿನಿಂದ ವಿಶೇಷ ಪೂಜಾ ಕಾರ್ಯಕ್ರಮಗಳು

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಪುರಾಣಪ್ರಸಿದ್ಧ ಶ್ರೀವೈದ್ಯನಾಥೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಅ.27ರಿಂದ ನ.17ರವರೆಗೆ ಪ್ರತಿ ಸೋಮವಾರ ವಿಶೇಷ ಪೂಜಾ ಕಾರ್ಯಗಳು ನೆರವೇರಲಿವೆ. ಅ.27, ನ.3, ನ.10 ಹಾಗೂ17 ರಂದು ಕಾರ್ತಿಕ ಸೋಮವಾರದ ಅಂಗವಾಗಿ ಶ್ರೀವೈದ್ಯನಾಥೇಶ್ವರ ದೇಗುಲದಲ್ಲಿ ಮುಂಜಾನೆ ಶಿವಲಿಂಗಕ್ಕೆ ಕ್ಷೀರ ಅಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ಯೊಂದಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಲಿವೆ.

ಕಾರ್ತಿಕ ಮಾಸದ ಅಂಗವಾಗಿ 4 ಸೋಮವಾರಗಳಂದು ಭಕ್ತಾದಿಗಳಿಗೆ ದಾನಿಗಳಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ವೈದ್ಯನಾಥ ಪುರಕ್ಕೆ ಬರುವ ಭಕ್ತಾದಿಗಳಿಗೆ ಮದ್ದೂರು ಬಸ್ ನಿಲ್ದಾಣದಿಂದ ವಿಶೇಷ ಬಸ್ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಶ್ರೀ ಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರ ಟ್ರಸ್ಟ್ ಅಧ್ಯಕ್ಷ ವಿ.ಟಿ.ಶಿವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ

ಮದ್ದೂರು:

ಕಾರ್ತಿಕ ಮಾಸದ ಅಂಗವಾಗಿ ತಾಲೂಕಿನ ಕೊಪ್ಪ ಹೋಬಳಿ ಆಬಲವಾಡಿ ಗ್ರಾಮದಲ್ಲಿ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆ ದೇವಾಲಯದಲ್ಲಿ ಹೋಮ, ಪಂಚಾಮೃತ, ಕ್ಷೀರ ಬೀಷೆಕ, ಬೆಣ್ಣೆ ಅಲಂಕಾರ ದೊಂದಿಗೆ ಪುಷ್ಪಾಲಂಕಾರ ಸೇವೆ ಮಹಾಮಂಗಳಾರತಿ ನೆರವೇರಿಸಲಾಯಿತು. ಶ್ರೀ ಮಹದೇಶ್ವರಸ್ವಾಮಿ ವಿಗ್ರಹವನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹುಲಿವಾಹನೋತ್ಸವ ಜರುಗಿತು. ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.