ಸಾರಾಂಶ
ಗಜೇಂದ್ರಗಡ: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳನ್ನು ಶಾಸಕರು ಅನುಷ್ಠಾನಗೊಳಿಸಲು ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮೊದಲಾದ್ಯತೆ ನೀಡುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಹೇಳಿದರು.ಸ್ಥಳೀಯ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ನ್ಯಾಕ್ ಬಿ++ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡಾ, ಸಾಂಸ್ಕೃತಿಕ, ಯುವ ರೆಡ್‌ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳ ಉದ್ಭಾಟನಾ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಭವಿಷ್ಯವಾಗಿರುವ ಯುವ ಸಮೂಹ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಕಾಂಗ್ರೆಸ್ ಸರ್ಕಾರಗಳು ಹಿಂದಿನಿಂದಲೂ ಸಹ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ವ್ಯಾಸಂಗ ಮಾಡಲು ಉಚಿತ ಶಿಕ್ಷಣ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಈ ದೆಸೆಯಲ್ಲಿ ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸಹ ಎಲ್ಲ ಕ್ಷೇತ್ರಗಳಲ್ಲಿಯೂ ಪಟ್ಟಣ ಸೇರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಯೋಜನೆಗಳ ಸದ್ಬಕೆಗೆ ವಿದ್ಯಾರ್ಥಿಗಳು ಮುಂದಾಗುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿನ ಹಾಗೂ ಊರಿನ ಹೆಸರನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಬೇಕು ಎಂದರು.ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡಪ್ರಾಧ್ಯಾಪಕಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಹಾಗೂ ಸಮಯ ಪಾಲನೆ ಅಳವಡಿಸಿಕೊಂಡರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸರಳ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶಿಸ್ತು ಮೆಚ್ಚುವಂತದ್ದು ಎಂದು ಕಾಲೇಜಿನ ಪ್ರಾಚಾರ್ಯರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಕಾಲೇಜಿನ ಪ್ರಾಚಾರ್ಯ ಮಹೇಂದ್ರ ಜಿ ಮಾತನಾಡಿ, ಪಟ್ಟಣ ಸೇರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರಸಿ ಬರುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸರ್ವಾಂಗೀಣ ಅಭಿವೃದ್ಧಿಗೆ ಕಾಲೇಜು ಸಂಪೂರ್ಣವಾಗಿ ಶ್ರಮಿಸುತ್ತಿದೆ. ಹೀಗಾಗಿ ಪ್ರತಿ ವರ್ಷವು ಸಹ ವಿದ್ಯಾರ್ಥಿಗಳು ಫಲಿತಾಂಶವು ಹೆಚ್ಚಾಗುತ್ತಿದೆ ಎಂದರು.ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ಉಪನ್ಯಾಸಕ ಎಫ್.ಎಸ್. ಕರಿದುರಗನವರ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಕ್ಷೇತ್ರದಲ್ಲಿ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಶೈಕ್ಷಣಿಕ ಅಭಿವೃದ್ಧಿ ಜತೆಗೆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರಶಾಂತ ರಾಠೋಡ, ಶಿವು ಚವ್ಹಾಣ, ಉಮೇಶ ರಾಠೋಡ ಸೇರಿ ಇತರರು ಮಾತನಾಡಿದರು.ಸುರೇಂದ್ರಸಾ ರಾಯಬಾಗಿ, ಅಜಪ್ಪ ವಂದಕುದರಿ, ಡಾ.ಎಂ.ವೈ. ಜೀವಣ್ಣವರ, ಹಿತೇಶ ಬಿ., ಜೀವಿತಾ ಎಂ, ಸರಸ್ವತಿ ಕೆ., ಬಿ.ವಿ. ಮುನವಳ್ಳಿ ಸೇರಿ ಇತರರು ಇದ್ದರು.