ಸಾರಾಂಶ
ರಾಮನಗರ: ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿಯವರು ₹1200 ಕೋಟಿ ಸಂಗ್ರಹ ಮಾಡಿದ್ದು, ಇದೇ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ನಾವೆಲ್ಲರೂ (ಶಾಸಕರು) ಒಗ್ಗಟ್ಟಾಗಿದ್ದು, ಸರ್ಕಾರ ಉರುಳಿಸಲು ಬಿಡುವುದಿಲ್ಲ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದರು.ತಾಲೂಕಿನ ಕೂಟಗಲ್ ಗ್ರಾಪಂಯ ನವೀಕರಣ ಕಟ್ಟಡ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿ ₹1200 ಕೋಟಿ ಸಂಗ್ರಹ ಮಾಡಿದೆ ಎಂದು ಅದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಒಪ್ಪಿಕೊಂಡಿದ್ದಾರೆ. ಇಂತಹ ಪ್ರಯತ್ನ ಖಂಡಿತಾ ನಡೆಯುತ್ತಿದೆ ಎಂದು ದೂರಿದರು.ಈ ಹಿಂದೆ ನಮ್ಮ ಮಂಡ್ಯ ಕ್ಷೇತ್ರ ಶಾಸಕ ಗಣಿಗ ರವಿ ಇದರ ಬಗ್ಗೆ ಹೇಳಿದ್ದರು. ಆವಾಗ ಬಿಜೆಪಿಯವರು ಇಲ್ಲ ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ ಅಂದಿದ್ದರು. ಈಗ ಅವರ ಪಕ್ಷದ ನಾಯಕರೇ ಇದನ್ನು ಹೇಳುತ್ತಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ಮೇಲೆ ಪ್ರಕರಣ ದಾಖಲಿಸಿರೋದು ಅದೇ ಉದ್ದೇಶಕ್ಕೆ. ಹೇಗಾದರು ಮಾಡಿ ಸರ್ಕಾರ ಉಳಿಸಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ. ಆ ಪ್ರಯತ್ನಕ್ಕೆ ಫಲ ಸಿಗಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ, ಸರ್ಕಾರ ಬೀಳಿಸಲು ಬಿಡಲ್ಲ ಎಂದು ಹೇಳಿದರು.
ಬಿಜೆಪಿಯವರು ಯಾವತ್ತೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಜನರಿಂದ ಆಯ್ಕೆಯಾಗಿ ಒಂದು ಬಾರಿಯೂ ಆಡಳಿತ ಮಾಡಿಲ್ಲ. ಯಾವಾಗಲೂ ವಾಮಮಾರ್ಗ ಬಳಸಿಯೇ ಅಧಿಕಾರ ಹಿಡಿದಿದ್ದಾರೆ. ಅವರ ಯಾವ ಪ್ರಯತ್ನಕ್ಕೂ ನಾವೂ ಅವಕಾಶ ಕೊಡಲ್ಲ. ಅವರ ಆಮಿಷಕ್ಕೆ ಯಾರೂ ಸೊಪ್ಪು ಹಾಕುತ್ತಿಲ್ಲ ಎಂದು ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಸ್ವಪಕ್ಷದಲ್ಲೇ ಪಿತೂರಿ ನಡೆಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಬಿಜೆಪಿ ಅವರು ಇನ್ನೇನು ಹೇಳೊಕೆ ಸಾಧ್ಯ. ನಮ್ಮ ನಮ್ಮಲ್ಲೇ ಜಗಳ ತಂದಿಡಬೇಕು ಅನ್ನೋದು ಅವರ ಉದ್ದೇಶ. ಅದು ಫಲಿಸೋದಿಲ್ಲ ಅಂತಾ ಅವರಿಗೆ ಗೊತ್ತಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಮುಖ್ಯಮಂತ್ರಿಗಳ ಪರವಾಗಿ ಇದ್ದೇವೆ ಎಂದರು.ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ನಂತರ ಅಭಿವೃದ್ಧಿಗಾಗಿ ರಾಜ್ಯದ್ಯಾಂತ ಹೋರಾಟ ಮಾಡುತ್ತಿದ್ದಾರೆ. ಈ ಹಿಂದೆ ಅವರು ವಹಿಸಿಕೊಂಡಿರುವ ಎಲ್ಲಾ ಇಲಾಖೆಗಳನ್ನು ಸಮಗ್ರವಾಗಿ ನಿಭಾಯಿಸಿದ್ದಾರೆ. ಇಂಧನ ಸಚಿವರಾಗಿದ್ದಾಗ ಮೋದಿ ಅವರೇ ಕರೆದು ಸನ್ಮಾನಿಸಿದ್ದಾರೆ. ಅಧ್ಯಕ್ಷರಾಗಿ ಕೂಡ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಎಡಿಜಿಪಿ ಚಂದ್ರಶೇಖರ್‌ರಿಂದ ಬರ್ನಾರ್ಡ್ ಶಾ ಮಾತು :ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ವಿರುದ್ಧ ಎಡಿಜಿಪಿ ಚಂದ್ರಶೇಖರ್ ಪದಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಾಲಕೃಷ್ಣ, ಏನಂತ ಪದಬಳಕೆ ಮಾಡಿದ್ದಾರೆ, ಯಾವ ಹಂದಿಗೆ ಹೋಲಿಕೆ ಮಾಡಿದ್ದಾರೆ. ಬರ್ನಾರ್ಡ್ ಶಾ ಹೇಳಿರುವ ಮಾತನ್ನು ಅವರು ಹೇಳಿದ್ದಾರೆ. ಅದನ್ನು ನಿಮಗೆ ಅಂತ ಯಾಕೆ ಅಂದು ಕೊಳ್ಳುತ್ತೀರಿ. ಹಂದಿ ಅಂದರೆ ವರಹಾ ಅಂತ. ಅದನ್ನು ಬೇರೆ ರೀತಿ ಯಾಕೆ ಅರ್ಥೈಸಿಕೊಳ್ಳುತ್ತೀರಿ. ಅವರ ಅಭಿಮಾನಿಗಳು ಬೇರೆ ರೀತಿ ಅರ್ಥಮಾಡಿಕೊಳ್ಳಬಾರದು. ಅವರ ಆಲೋಚನೆ ಹೇಗಿರುತ್ತೋ ಹಾಗೆ ತಿಳಿದುಕೊಳ್ಳುತ್ತಾರೆ ಎಂದರು.
ಬರ್ನಾರ್ಡ್ ಶಾ ಹೇಳಿರುವುದು ನೀವು ಗುದ್ದಾಡಿದರೆ ಒಳ್ಳೆಯವರ ಜೊತೆ ಗುದ್ದಾಡಿ ಅಂತ. ಒಬ್ಬ ಐಪಿಎಸ್ ಅಧಿಕಾರಿಯನ್ನು ಇವರು ಯಾವ ರೀತಿ ಸಂಬೋಧಿಸುತ್ತಿದ್ದಾರೆ ಅಂತ ನೋಡಿ. ಅವನು ಗೊತ್ತು, ಅವನ ಬೇಳೆಕಾಳು ಗೊತ್ತು ಅಂತ ಮಾತನಾಡುತ್ತಾರೆ. ಅವರು ಅಧಿಕಾರಿಗಳ ಜೊತೆ ಗುದ್ದಾಡೋಕೆ ಹೋಗುತ್ತಾರೆ. ಅದನ್ನು ಮೊದಲು ಬಿಡಲು ಹೇಳಿ. ಅವರ ಯೋಗ್ಯತೆ, ಘನತೆ, ಸ್ಥಾನಮಾನವನ್ನು ಅರಿತುಕೊಳ್ಳಲಿ. ಕೆಲಸಕ್ಕೆ ಬಾರದವರ ಜೊತೆ ಗುದ್ದಾಡಲು ಹೋದರೆ ಹೀಗೆಯೇ ಆಗುವುದು ಎಂದು ಎಡಿಜಿಪಿ ಹೇಳಿಕೆಯನ್ನು ಶಾಸಕ ಬಾಲಕೃಷ್ಣ ಸಮರ್ಥಿಸಿಕೊಂಡರು.ಎಡಿಜಿಪಿ ಪತ್ರ ಕೆಪಿಸಿಸಿ ಕಚೇರಿಯಲ್ಲಿ ತಯಾರಾಗಿದೆ ಎಂಬುದಕ್ಕೆ ಏನಾದರೂ ದಾಖಲೆ ಇದ್ದರೆ ತೋರಿಸಲಿ. ವಿಡಿಯೋ ಪೂಟೇಜ್ ಇದ್ದರೆ ತೋರಿಸಲು ಹೇಳಿ. ಸುಮ್ಮನೆ ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡುವುದು ಸರಿಯಲ್ಲ. ಎಲ್ಲದಕ್ಕೂ ಡಿ.ಕೆ.ಶಿವಕುಮಾರ್ ಹೆಸರು ಹೇಳುವುದು ಸರಿಯಲ್ಲ. ಪದೇ ಪದೇ ಡಿಕೆಶಿ ಹೆಸರು ಎಳೆದು ತಂದು ಒಕ್ಕಲಿಗ ಕಮ್ಯುನಿಟಿ ಲೀಡರ್ ಆಗಬೇಕು ಅಂತ ಮಾತನಾಡುತ್ತಾರೆ. ಅವರ ಬಳಿ ಕೆಪಿಸಿಸಿ ಕಚೇರಿ ಸಿಸಿಟಿವಿ ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ. ಇಲ್ಲದಿದ್ದರೆ ಕೂಡಲೇ ಡಿ.ಕೆ.ಶಿವಕುಮಾರ್ ಬಳಿ ಕ್ಷಮೆಯಾಚಿಸಲಿ ಎಂದು ಬಾಲಕೃಷ್ಣ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಎಲ್.ಸವಿತಾ ಶಿವಕುಮಾರ್, ಸದಸ್ಯರಾದ ನಂದೀಶ್. ವೈ.ಎಲ್, ಭಾಗ್ಯ ನಟರಾಜು, ಸುಶೀಲಮ್ಮ, ಗಂಗಾಧರ್‌ಗೌಡ, ಜಗದೀಶ್, ಮಂಚೇಗೌಡ, ಲಿಂಗಾಚಾರಿ, ಪಿಡಿಓ ಕೆ.ಎಸ್.ಸೋಮಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರಯ್ಯ, ಮುಖಂಡರಾದ ರವಿ, ರಾಮಕೃಷ್ಣಯ್ಯ, ಮಹದೇವಯ್ಯ, ವೇದಮೂರ್ತಿ, ಹೊಸೂರುಜಗದೀಶ್, ಅಂಕೂಗೌಡ, ರಮೇಶ್ ಹಾಜರಿದ್ದರು.ಸಿದ್ದರಾಮಯ್ಯ ನಂತರ ನಮ್ಮ ಜಿಲ್ಲೆಗೆ ಸಿಎಂ ಸ್ಥಾನ
ಸಿದ್ದರಾಮಯ್ಯರವರ ಬಳಿಕ ನಾವು ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕ್ಲೇಮ್ ಮಾಡುತ್ತೇವೆ. ಅಲ್ಲಿವರೆಗೂ ಸಿದ್ದರಾಮಯ್ಯ ಪರವಾಗಿ ಇರುತ್ತೇವೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಜೊತೆಗೂಡಿ ಕೆಲಸ ಮಾಡಿದ್ದಾರೆ. ಸರ್ಕಾರವನ್ನೂ ಅಸ್ತಿತ್ವಕ್ಕೆ ತಂದಿದ್ದಾರೆ. ನಮ್ಮ ಜಿಲ್ಲೆಗೆ ಸಿಎಂ ಸ್ಥಾನ ಸಿಗಲಿ ಅನ್ನುವುದು ನಮ್ಮ ಆಸೆಯಾಗಿದೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ಜಿಲ್ಲೆಗೆ ಆದಷ್ಟು ಬೇಗ ಸಿಎಂ ಸ್ಥಾನ ಸಿಗಲಿ ಅನ್ನೋದು ನನ್ನ ಅಭಿಪ್ರಾಯ ಎಂದು ಶಾಸಕ ಬಾಲಕೃಷ್ಣ ಪರೋಕ್ಷವಾಗಿ ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಹೇಳಿದರು.