ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕರಿಂದ ಚಾಲನೆ

| Published : Jul 10 2024, 12:42 AM IST

ಸಾರಾಂಶ

ಯೋಜನೆಯ ಬಲದಂಡೆ ಭಾಗದ ಕೆ.ಅಯ್ಯನಹಳ್ಳಿ ಮತ್ತು ಹಡಗಲಿ ಉಪ ಕಾಲುವೆಗಳಿಗೆ ನೀರು ಹರಿಸುವ ಮೂಲಕ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಮಲೆನಾಡಿನಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್‌ಗೆ ಒಳ ಹರಿವು ಹೆಚ್ಚಳವಾಗಿದೆ. ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು.

ಯೋಜನೆಯ ಬಲದಂಡೆ ಭಾಗದ ಕೆ.ಅಯ್ಯನಹಳ್ಳಿ ಮತ್ತು ಹಡಗಲಿ ಉಪ ಕಾಲುವೆಗಳಿಗೆ ನೀರು ಹರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಮಲೆನಾಡು ಪ್ರದೇಶದಲ್ಲಿ ಮಳೆಯಾಗುತ್ತಿದೆ. ತುಂಗಭದ್ರಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬಂದು, ಬ್ಯಾರೇಜ್‌ನಲ್ಲಿ ಸಂಗ್ರಹವಾಗುತ್ತಿದ್ದು, ತಾಲೂಕಿನಲ್ಲಿ ಮಳೆ ಇಲ್ಲದೇ ರೈತರು ಬಿತ್ತನೆ ಮಾಡಿರುವ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಈ ಹಿನ್ನೆಲೆಯಲ್ಲಿ ಯೋಜನೆಯ ನೀರನ್ನು ಕಾಲುವೆಗಳ ಮೂಲಕ ಹರಿಸಿ ರೈತರ ಜಮೀನುಗಳಿಗೆ ನೀರುಣಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಬಲದಂಡೆ ಭಾಗದ ಕೆ. ಅಯ್ಯನಹಳ್ಳಿ, ವಡ್ಡನಹಳ್ಳಿ ತಾಂಡಾ, ಶಿವಪುರ, ಹಾಲ್‌ ತಿಮ್ಲಾಪುರ ಮತ್ತು ಹೂವಿನಹಡಗಲಿ ಉಪ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಈ ನೀರು ಹರಿಸುವುದರಿಂದ ಸಾವಿರಾರು ರೈತರ ಬದುಕು ಹಸನವಾಗಲಿದೆ. ಮಳೆ ಕೈ ಕೊಟ್ಟಾಗ ಯೋಜನೆ ರೈತರಿಗೆ ವರದಾನವಾಗಿದೆ ಎಂದರು.

ಮಾಗಳ ಜಾಕ್ವೆಲ್‌ ಸ್ಟೀಲ್‌ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಮೋಟಾರ್‌ ಪಂಪ್‌ ದುರಸ್ತಿಗೆ ಬಂದಿದ್ದು, ಇದು ರಿಪೇರಿ ಆದ ಕೂಡಲೇ ಮಾಗಳ, ಹಿರೇಹಡಗಲಿ ಮತ್ತು ಹಗರನೂರು ಭಾಗದ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಯೋಜನೆಯ ಇಇ ಶಿವಮೂರ್ತಿ, ಎಇಇ ರಾಘವೇಂದ್ರ ಸೇರಿದಂತೆ ರೈತರು ಉಪಸ್ಥಿತರಿದ್ದರು.