ಸಾರಾಂಶ
ಕುಣಿಗಲ್ ಪಟ್ಟಣದ 19 20 21 ಮತ್ತು 22 ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಕುಣಿಗಲ್ ಶಾಸಕ ರಂಗನಾಥ್ ಜಾಗೃತಿ ಮೂಡಿಸುವ ಮುಖಾಂತರ ಖಾತೆ ಆಂದೋಲನಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ಪಟ್ಟಣದಲ್ಲಿ ಮೂರುವರೆ ಸಾವಿರಕ್ಕಿಂತ ಹೆಚ್ಚು ಅನಧಿಕೃತ ಹಾಗೂ ಕಂದಾಯ ಭೂಮಿಯಲ್ಲಿ ನಿರ್ಮಾಣ ಮಾಡಿಕೊಂಡಿರುವ ಮನೆ ಮತ್ತು ನಿವೇಶನಗಳು ಪುರಸಭೆಯಿಂದ ಯಾವುದೇ ದಾಖಲಾತಿ ಇಲ್ಲ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ ನಿಯಮಾನುಸಾರ ಎ ಖಾತೆ ಮತ್ತು ಬಿ ಖಾತೆ ಮಾಡುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು ಕುಣಿಗಲ್ ಪಟ್ಟಣದ 19 20 21 ಮತ್ತು 22 ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಕುಣಿಗಲ್ ಶಾಸಕ ರಂಗನಾಥ್ ಜಾಗೃತಿ ಮೂಡಿಸುವ ಮುಖಾಂತರ ಖಾತೆ ಆಂದೋಲನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಣಿಗಲ್ ಶಾಸಕ ಡಾ. ರಂಗನಾಥ್ ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುವ ಖಾತೆದಾರರಿಗೆ ಸರ್ಕಾರದಿಂದ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಈ ಖಾತೆ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಬಿ ಖಾತಾ ಮಾಡುವ ಸಂದರ್ಭದಲ್ಲಿ ದಂಡದ ರೂಪದಲ್ಲಿ ಎರಡು ಪಟ್ಟು ಹಣವನ್ನು ಕಟ್ಟಬೇಕಾಗುತ್ತದೆ ಈ ಸಂಬಂಧ ಸರ್ಕಾರದ ಜೊತೆ ಚರ್ಚೆ ಮಾಡುತ್ತಿದ್ದೇವೆ. ಆದರೆ ಕೇವಲ 90 ದಿನಗಳು ಮಾತ್ರ ಖಾತೆ ಮಾಡಲು ಸರ್ಕಾರದ ಕಾಲಾವಧಿ ನೀಡಿದೆ. ಈಗಾಗಲೇ ಒಂದು ತಿಂಗಳು ಮುಗಿದಿದ್ದು. ಇನ್ನುಳಿದ ದಿನಗಳಲ್ಲಿ ಆದಷ್ಟು ಪ್ರತಿಯೊಬ್ಬರೂ ಜಾಗೃತರಾಗಿ ಪುರಸಭೆಗೆ ತೆರಳಿ ತಮ್ಮ ಮೂಲ ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸಬೇಕೆಂದರು, ಪುರಸಭಾ ಮುಖ್ಯ ಅಧಿಕಾರಿ ಮಂಜುಳಾ ಮಾತನಾಡಿ ಕುಣಿಗಲ್ ಪಟ್ಟಣದಲ್ಲಿ ಇರುವ ಹಲವಾರು ಆಸ್ತಿದಾರರು ತಮ್ಮ ಮೂಲಾ ದಾಖಲಾತಿಗಳಾದ ನೋಂದಣಿ ಪ್ರಮಾಣ ಪತ್ರ, ಡಿಸಿ ಕನ್ವರ್ಷನ್, ಟೌನ್ ಪ್ಲಾನಿಂಗ್ ಸೇರಿದಂತೆ ತಮ್ಮಲ್ಲಿರುವ ದಾಖಲಾತಿಗಳನ್ನು ನೀಡುವ ಮುಖಾಂತರ ಖಾತೆಯ ವರ್ಗೀಕರಣ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದರು,ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಮಂಜುಳಾ ಮಾತನಾಡಿ ಸರ್ಕಾರ ನೀಡಿರುವ ಈ ಆದೇಶವನ್ನು ಸದ್ಬಳಕೆ ಮಾಡಿಕೊಂಡು ಪುರಸಭೆಯಲ್ಲಿ ತಮ್ಮ ದಾಖಲಾತಿಗಳನ್ನು ನೀಡುವ ಮುಖಾಂತರ ಅಧಿಕೃತ ಖಾತೆದಾರರಾಗಬೇಕು. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತವೆ ಎಂದರು,
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರಂಗಸ್ವಾಮಿ, ದೇವರಾಜು, ಕಾಂಗ್ರೆಸ್ ಮುಖಂಡ ಶಂಕರ್, ಪಾಪಣ್ಣ, ಜಬಿವುಲ್ಲಾ ಖಾನ್ ಸೇರಿದಂತೆ ಹಲವಾರು ಪುರಸಭಾ ಅಧಿಕಾರಿಗಳು ಮತ್ತು ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇದ್ದರು.