ರೈತರ ಬೇಡಿಕೆಗಳನ್ನು ಈಡೇರಿಕೆ

| Published : Jan 24 2025, 12:46 AM IST

ಸಾರಾಂಶ

ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಬೇಕು

ಕನ್ನಡಪ್ರಭ ವಾರ್ತೆ ನಂಜನಗೂಡು ತಾಲೂಕಿನ ತಾಂಡವಪುರದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಗುರುವಾರ ಸ್ಥಳೀಯ ಶಾಸಕರು, ಸಂಸದರು ರೈತ ಮುಖಂಡರ ಮುಖಾಮುಖಿ ರೈತ ಸ್ನೇಹಿ ಚರ್ಚಾ ಕಾರ್ಯಕ್ರಮ ನಡೆಯಿತು.ರೈತರು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆಯಿಂದ ಗ್ರಾಮಗಳನ್ನು ತೊರೆಯುತ್ತಿದ್ದಾರೆ, ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಬೇಕು, ಟನ್ ಕಬ್ಬಿಗೆ 5,500 ರು, ಭತ್ತಕ್ಕೆ 3,500 ರು ಬೆಲೆ ನಿಗದಿ ಮಾಡಬೇಕು, ಗ್ರಾಮ ಠಾಣಾ ಗಡಿಗಳನ್ನು ವಿಸ್ತರಣೆ ಮಾಡಬೇಕು, ಕಾಡು ಪ್ರಾಣಿಗಳ ಉಪಟಳಕ್ಕೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಪಚ್ಚೆ ನಂಜುಂಡಸ್ವಾಮಿ ಮನವಿ ಮಾಡಿದರು.ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ರೈತರ ಪರವಾದ ಸರ್ಕಾರ ಆಡಳಿತ ನಡೆಸುತ್ತಿದೆ, ರೈತ ಸಂಘ ರೈತರ ಸಮಸ್ಯೆ ನಿವಾರಿಸುವ ಸಲುವಾಗಿ ಹಲವಾರು ಹೋರಾಟಗಳನ್ನು ರೂಪಿಸಿದೆ, ಕಾರ್ಖಾನೆಗಳಿಗೆ ಜಮೀನು ನೀಡಿ, ಉದ್ಯೋಗ ನೀಡದೆ ವಂಚಿಸಿದ ಸಂದರ್ಭದಲ್ಲಿ ಹೋರಾಟ ನಡೆಸಿ 550 ಮಂದಿಗೆ ಉದ್ಯೋಗ ದೊರಕಿಸಿದೆ, ಮೈಕ್ರೋ ಫೈನಾನ್ಸ್ ಗಳ ಹಾವಳಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜ. 25 ರಂದು ಸಭೆ ಕರೆದಿದ್ದು, ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ, ತಾಲೂಕಿನಲ್ಲಿ ಅರ್ಜಿ ಸಲ್ಲಿಸಿದ ಬಹುತೇಕ ರೈತರಿಗೆ ಸಾಗುವಳಿ ಚೀಟಿ ವಿತರಿಸಲಾಗಿದೆ, ಬಾಕಿ ಉಳಿದಿರುವ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನಮ್ಮ ಕ್ಷೇತ್ರ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು, ಕಾಡಂಚಿನ ಭಾಗದಲ್ಲಿ ರೈಲ್ವೆ ಬ್ಯಾರಿಕೆಟ್, ಮೆಶ್ ಅನ್ನು ಅಳವಡಿಸಿ ರೈತರಿಗೆ ಬೆಳೆಗಳಿಗೆ ಹಾನಿಯಾಗುವುದನ್ನು ತಪ್ಪಿಸಲಾಗಿದೆ, ದೊಡ್ಡ ಕವಲಂದೆ ಭಾಗದಲ್ಲಿ ದೇವನೂರು ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಅನುದಾನ ಬಿಡುಗಡೆಯಾಗಿದೆ, ಹಳ್ಳದಕೇರಿಯಿಂದ ದೇವಸರನಹಳ್ಳಿ ವರ್ಗವಾಗಿ ಕಳಲೆ ಗೇಟ್ ಗೆ ಸೇರುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು, ಮೈಕ್ರೋ ಫೈನಾನ್ಸ್ ಹಾವಳಿಯನ್ನು ತಡೆಗಟ್ಟುವ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಸಂಸದ ಸುನೀಲ್ ಬೋಸ್ ಮಾತನಾಡಿ ರೈತರು ಕೃಷಿಯಿಂದ ನಷ್ಟ ಅನುಭವಿಸಿದರೂ ಕೃಷಿಯಿಂದ ವಿಮುಖರಾಗಿಲ್ಲ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಹಾಗೂ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹಂತ-ಹಂತವಾಗಿ ಪರಿಹಾರ ಕೊಡಿಸಲಾಗುವುದು, ಸರ್ಕಾರ ರೈತರ ಪರವಾಗಿದ್ದು, ರೈತರ ಹಿತ ಕಾಪಾಡಲು ಬದ್ದವಾಗಿದೆ ಎಂದು ಹೇಳಿದರು.ಶಾಸಕ ಗಣೇಶ್ ಪ್ರಸಾದ್ , ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಚನ್ನಪ್ಪ ಪೂಜಾರಿ , ಶರಣಪ್ಪ ದೊಡ್ಡಮನಿ, ಹಿಮ್ಮಾವುರಘು , ಸತೀಶ್ ರಾವ್, ಮೋಹನ್ , ಚುಂಚನಹಳ್ಳಿ ಮಲ್ಲೇಶ್, ಬಂಗಾರಸ್ವಾಮಿ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಶ್ವೇತಾ ಇದ್ದರು.