ವರ್ಷಕ್ಕೆ 3 ಸಲ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶಾಸಕರ ವಿರೋಧ

| Published : Feb 24 2024, 02:36 AM IST / Updated: Feb 24 2024, 01:12 PM IST

Karnataka

ಸಾರಾಂಶ

 ಎಸ್ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ವರ್ಷಕ್ಕೆ ಮೂರು ಬಾರಿ ನಡೆಸುವ ಆದೇಶವನ್ನು ಹಿಂಪಡೆಬೇಕೆಂದು ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಧಾನಪರಿಷತ್ತು

ಮುಂದಿನ ತಿಂಗಳು ನಡೆಯಲಿರುವ ಎಸ್‌ಎಸ್ಎಲ್‌ಸಿ ಪರೀಕ್ಷೆಗಳಿಗೆ ಮೇಲ್ವಿಚಾರಕರಾಗಿ ಪ್ರೌಢಶಾಲಾ ಶಿಕ್ಷಕರ ಬದಲು ಪ್ರಾಥಮಿಕ ಶಿಕ್ಷಕರನ್ನು ನಿಯೋಜನೆ ಮಾಡಿರುವುದು, ಎಸ್ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ವರ್ಷಕ್ಕೆ ಮೂರು ಬಾರಿ ನಡೆಸುವ ಆದೇಶವನ್ನು ಹಿಂಪಡೆಬೇಕೆಂದು ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ  ದೇವೇಗೌಡ. ಚಿದಾನಂದಗೌಡ, ವೈ.ಎ. ನಾರಾಯಣಸ್ವಾಮಿ ಹಾಗೂ ಬಿಜೆಪಿಯ ಮರಿತಿಬ್ಬೇಗೌಡ ಅವರು, ಸರ್ಕಾರದ ಈ ಆದೇಶದಿಂದ 1.50 ಲಕ್ಷ ಪ್ರೌಢಶಾಲಾ ಶಿಕ್ಷಕರನ್ನು ಅಪಮಾನ ಮಾಡಿದಂತಾಗಿದೆ. ಅವರ ಆತ್ಮಸ್ಥೈರ್ಯ ಕುಗ್ಗಿಸುವಂತಾಗಿದೆ. ಹಾಗಾಗಿ ಮೊದಲಿನಂತೆ ಪ್ರೌಢಶಾಲಾ ಶಿಕ್ಷಕರನ್ನು ನಿಯೋಜಿಸಬೇಕು ಎಂದರು.

ಅದೇ ರೀತಿ ಸರ್ಕಾರ 10ನೇ ತರಗತಿ ಮತ್ತು ಪಿಯುಸಿ ಪರೀಕ್ಷೆಗಳನ್ನು ವರ್ಷಕ್ಕೆ ಮೂರು ಬಾರಿ ನಡೆಸುವುದು ಸೂಕ್ತವಾಗಿಲ್ಲ. ಇದರಿಂದ ಶಿಕ್ಷಕರು ಪರೀಕ್ಷೆ, ಮೌಲ್ಯಮಾಪನ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸರ್ಕಾರ ಈ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಸಂಜೆ ಈ ಕುರಿತು ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೇಲ್ವಿಚಾರಕರನ್ನಾಗಿ ಪ್ರೌಢಶಾಲಾ ಸಹ ಶಿಕ್ಷಕರನ್ನು ಹೊರಗಿಡುವ ಕುರಿತಂತೆ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧರಿಸಲಾಗಿದೆ. ಅದಕ್ಕಾಗಿ ಅವರನ್ನು ಈ ಬಾರಿ ಪರೀಕ್ಷಾ ಮೇಲ್ವಿಚಾರಕರನ್ನಾಗಿ ನೇಮಿಸುತ್ತಿಲ್ಲ ಎಂದರು.

ಅದರಿಂದ ಸಿಟ್ಟಾದ ಮರಿತಿಬ್ಬೇಗೌಡ, ನಾರಾಯಣಸ್ವಾಮಿ, ಎಸ್.ವಿ. ಸಂಕನೂರು, ಅ. ದೇವೇಗೌಡ ಸೇರಿದಂತೆ ಇತರರು ಸಚಿವರ ಉತ್ತರ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಕೊನೆಗೆ ಸ್ಪಷ್ಟ ಉತ್ತರ ನೀಡುತ್ತಿಲ್ಲವೆಂದು ಮರಿತಿಬ್ಬೇಗೌಡ, ನಾರಾಯಣಸ್ವಾಮಿ ಸಭಾತ್ಯಾಗ ಮಾಡಿದರು.