ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಶಾಸಕರಿಂದ ಹಿಂದುಳಿದ ಸಮುದಾಯಕ್ಕೆ ನೋವಾಗಿದೆ. ಚುನಾವಣೆಯ ಸಮಯದಲ್ಲಿ ಜನರ ಮನೆ ಬಾಗಿಲಿಗೆ ಬರುತ್ತಾರೆ, ಆದರೆ ನಂತರ ಅವರನ್ನೇ ದೂರ ತಳ್ಳುತ್ತಾರೆ ಎಂದು ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಪ್ಪ ಹೇಳಿದರು.ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಣಾವರದಲ್ಲಿ ನಡೆದ ಆಶ್ರಯ ವಸತಿ ಯೋಜನೆಯ ಅವ್ಯವಹಾರ ಶಾಸಕರ ಗಮನಕ್ಕೆ ಬಂದಿಲ್ಲ ಎಂಬುದನ್ನು ನಂಬಲಾಗದು. ಅವರು ನಡೆಸುವ ಕೆಡಿಪಿ ಸಭೆಗಳಲ್ಲಿ ಈ ವಿಷಯ ಚರ್ಚೆಯಾಗಿಲ್ಲವೇ ಎಂದು ಪ್ರಶ್ನಿಸಿದರು. ಶಾಸಕರು ಹಿಂದುಳಿದ ಸಮುದಾಯದ ಪ್ರತಿಯೊಬ್ಬರಿಗೂ ಮನೆ ಒದಗಿಸುವೆನೆಂದು ಚುನಾವಣೆಯಲ್ಲಿ ಪ್ರಮಾಣ ಮಾಡುತ್ತಾರೆ. ಆದರೆ ವಾಸ್ತವದಲ್ಲಿ ತಾಲೂಕಿನಲ್ಲಿ ನಡೆಯುತ್ತಿರುವ ಕಾರ್ಯಗಳು ಆ ಮಾತಿಗೆ ವಿರುದ್ಧವಾಗಿವೆ ಎಂದು ಖಂಡಿಸಿದರು.ಯಾರಾದರೂ ಶಾಸಕರ ತಪ್ಪುಗಳ ಬಗ್ಗೆ ಪ್ರಶ್ನೆ ಮಾಡಿದರೆ, ಅವರು ಮಾನನಷ್ಟ ಎಂದು ಹೇಳುತ್ತಾರೆ. ಸಭಾಪತಿಗಳ ಬಗ್ಗೆ ಗೌರವವಿಲ್ಲ, ಕುರಿಗಾರರ ಬಗ್ಗೆ ಮಾತನಾಡಿದರೆ ನಿಂದಿಸುತ್ತಾರೆ. ಈ ಎಲ್ಲವೂ ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು. ಅವರದೇ ಸರ್ಕಾರ ಇದ್ದಾಗ, ಅವರ ಒಪ್ಪಿಗೆಯ ಮೂಲಕ ಇನ್ಸ್‌ಪೆಕ್ಟರ್, ಪಿಡಿಒ ಸೇರಿ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ನಂತರ, ಅಮಾಯಕ ಅಧಿಕಾರಿಗಳನ್ನು ಬಳಸಿಕೊಂಡು, ಅವರ ಮೇಲೆ ಹೊರೆ ಹಾಕಲಾಗುತ್ತಿದೆ ಎಂದು ಕ್ಷೇತ್ರದಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಎನ್‌ಎಚ್ ರಸ್ತೆಯಲ್ಲಿ 8 ಕೋಟಿ ರು. ಹಗರಣ ನಡೆದಿದೆ. ಯಾವುದೇ ಅಧಿಕಾರಿಗಳಿಗೆ ಇನ್ನು ಮುಂದೆ ತೊಂದರೆ ಆದರೆ ಶಾಸಕರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಯಾರಾದರೂ ಶಾಸಕರ ವಿರುದ್ಧ ಹೇಳಿಕೆ ನೀಡಿದರೆ, ಅವರನ್ನು ರೌಡಿಶೀಟರ್ ಎಂದು ಪ್ರತಿಬಿಂಬಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಎಂದು ಹೇಳಿದರು. ಶಾಸಕರು ಕ್ಷೇತ್ರಕ್ಕೆ ಬರುವ ಮುನ್ನವೇ ಅರಸೀಕೆರೆಯಲ್ಲಿ ದಲಿತರು, ಹಿಂದುಳಿದವರು ಜಿಪಂ, ತಾಪಂ, ಗ್ರಾಪಂ ಮಟ್ಟದಲ್ಲಿ ಗೆದ್ದ ಉದಾಹರಣೆಗಳು ಸಾಕಷ್ಟಿವೆ. ಆದರೆ ಈಗ ದುಡ್ಡು ಇರುವವರಿಗೆ ಮಾತ್ರ ಸೀಟು ನೀಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜೆಡಿಎಸ್ ಗ್ರಾಮ ಪಂಚಾಯಿತಿ ಸದಸ್ಯ ಬ್ಯಾಡ್ರಳ್ಳಿ ಜಯರಾಮ್ ಮಾತನಾಡಿ, ಶಾಸಕರು ಈ ಎಲ್ಲಾ ಹಗರಣಗಳಿಗೆ ಇಒ ಹೊಣೆಗಾರರಾಗಿದ್ದಾರೆ ಎಂದು ಅವರೇ ಹೇಳಿದ್ದಾರೆ. ಹಾಗಾದರೆ, ಅವರು ಶಿಫಾರಸ್ಸು ಮಾಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿಸಬೇಕು. ಇಲ್ಲದಿದ್ದರೆ, ಶಾಸಕರೇ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಪಂಚಾಯಿತಿಗಳನ್ನು ಸಂಪೂರ್ಣವಾಗಿ ಶಾಸಕರು ನಿರ್ವಹಿಸುತ್ತಿದ್ದಾರೆ ಎಂಬುದನ್ನು ದೃಢಪಡಿಸುವ ಆಡಿಯೋ ನಮ್ಮ ಬಳಿ ಇದೆ. ಅದನ್ನು ಶೀಘ್ರದಲ್ಲೇ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ರಾಜೇಂದ್ರ ನಿರಗುಂದ, ಬಾಗೇಶಪುರ ಕಾಂತರಾಜ್, ನಗರಸಭೆ ಸದಸ್ಯ ಭಾಸ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.