ಸಾರಾಂಶ
ತಿಮ್ಲಾಪುರ ಗ್ರಾಮದ ರೈತರು ಕಳೆದೆರೆಡು ವರ್ಷಗಳ ಹಿಂದಿ ನಿಂದಲೂ ಹೋರಾಟ
ಕನ್ನಡಪ್ರಭ ವಾರ್ತೆ, ಕಡೂರುಸೋಲಾರ್ ಘಟಕ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ತಾಲೂಕಿನ ಗಡಿ ಗ್ರಾಮ ತಿಮ್ಲಾಪುರ ಗ್ರಾಮದ ರೈತರ ಪರವಾಗಿ ನಮ್ಮ ಶಾಸಕ ಕೆ.ಎಸ್.ಆನಂದ್ ನಮ್ಮೊಂದಿಗೆ ಹೋರಾಟ ಮಾಡುವ ಮುಖೇನ ಸಮಸ್ಯೆ ಬಗೆಹರಿಸಿ ರೈತರಿಗೆ ಪರಿಹಾರ ಕೊಡಿಸಿದ್ದಾರೆ ಎಂದು ತಿಮ್ಲಾಪುರ ದಿನೇಶ್ ತಿಳಿಸಿದರು.ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಖಾಸಗಿ ಸೋಲಾರ್ ಕಂಪನಿಯವರು ರೈತರ ಜಮೀನಿನಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ ವಿರೋಧಿಸಿ ತಿಮ್ಲಾಪುರ ಗ್ರಾಮದ ರೈತರು ಕಳೆದೆರೆಡು ವರ್ಷಗಳ ಹಿಂದಿ ನಿಂದಲೂ ಹೋರಾಟ ಮಾಡಿದ್ದರು. ಆದರೆ ಸೋಲಾರ್ ಕಂಪನಿಯವರು ಅಂದು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರರು ಒಳಗೊಂಡಂತೆ ಕಂಪನಿಯವರ ಪರವಾಗಿರುವಂತೆ ನೋಡಿ ಕೊಂಡು ರೈತರ ವಿರುದ್ಧ ದೂರು ದಾಖಲಿಸಿ ರೈತರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆವರೆಗೂ ಕರೆದುಕೊಂಡು ಹೋಗಿ ರೈತರಿಗೆ ಬೆದರಿಕೆ ಹಾಕಿದ್ದರು ಎಂದು ದೂರಿದರು. ಅಂದು ಖಾಸಗಿ ಸೋಲಾರ್ ಕಂಪನಿ ವಿರುದ್ಧ ಧ್ವನಿ ಎತ್ತಿದ ನಮ್ಮ ನಾಯಕ ಕೆ.ಎಸ್.ಆನಂದ್ ಮತ್ತು ತಾವು ಸೇರಿದಂತೆ ಅನೇಕರು ರೈತರ ಪರವಾಗಿ ಹೋರಾಟ ಮಾಡಿದ್ದರ ಪರಿಣಾಮ ಇದೀಗ ಸೋಲಾರ್ ಕಂಪನಿ ಮಾಲೀಕರು ಪರಿಹಾರ ನೀಡಲು ಮುಂದಾಗಿದ್ದು, ನಮ್ಮ ಶಾಸಕರ ಮಧ್ಯಸ್ಥಿಕೆಯಲ್ಲಿ 66 ಗುಂಟೆ ಭೂಮಿಯನ್ನು ಕಳೆದುಕೊಂಡ 14 ಜನ ರೈತರಿಗೆ ಸುಮಾರು ₹1.50 ಕೋಟಿ ಹಣವನ್ನು ಪರಿಹಾರವಾಗಿ ಕೊಡಿಸಿದ್ದಾರೆ. ಇದಕ್ಕೆ ರೈತರ ಪರವಾಗಿ ಶಾಸಕರಿಗೆ ಧನ್ಯವಾದ ಹೇಳುತ್ತೇವೆ.ಆದರೆ ಅಂದೇ ಸಂಭಂಧಿಸಿದ ಅಧಿಕಾರಿಗಳು, ಜನ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿ ಸಲು ಅವಕಾಶ ಇದ್ದರೂ ರಾಜಕೀಯ ಪಿತೂರಿಯಿಂದ ರೈತರನ್ನು ಬಲಿಪಶು ಮಾಡಿದರು ಎಂದು ಆರೋಪಿಸಿದ ದಿನೇಶ್, ಆದರೆ ಇಂದು ಸತ್ಯಕ್ಕೆ ಜಯ ದೊರಕುವ ಮೂಲಕ ಶಾಸಕರ ಸ್ಪಂದನೆಯಿಂದ ರೈತರಿಗೆ ಉತ್ತಮ ಪರಿಹಾರ ದೊರಕಿದೆ ಎಂದು ಹೇಳಿದರು.ಪಂಚನಹಳ್ಳಿಯ ರವಿ, ಕುಮಾರ್, ಸೋಮಶೇಖರ್, ಎಸ್.ಮಾದಾಪುರ ಚಿದಾನಂದ, ಸುನಿಲ್,ಮಹೇಶ್ವರಪ್ಪ,ನವೀನ್,, ಬಸವರಾಜ್ ಮತ್ತಿತರರು ಇದ್ದರು.8ಕೆಕೆಡಿಯು2.
ಕಡೂರು ತಾಲೂಕು ತಿಮ್ಲಾಪುರ ಗ್ರಾಮದ ರೈತರಿಗೆ ಸೋಲಾರ್ ಕಂಪನಿಯಿಂದ ಶಾಸಕ ಕೆ.ಎಸ್.ಆನಂದ್ ಪರಿಹಾರದ ಚೆಕ್ಕುಗಳನ್ನು ಕೊಡಿಸಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ತಿಮ್ಲಾಪುರ ದಿನೇಶ್, ಹರೀಶ್, ಬಸವರಾಜ್, ಮರುಳಪ್ಪ, ಮಹೇಶ್ವರಪ್ಪ, ನವೀನ್ ಇದ್ದರು.