ಸಾರಾಂಶ
ಶಿರಸಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ ವೈದ್ಯಕೀಯ ಉಪಕರಣಗಳ ವಿಚಾರದಲ್ಲಿ ಹಣ ಕಡಿತಗೊಂಡಿರುವ ವಿಷಯವೇ ತಮಗೆ ಗೊತ್ತಿಲ್ಲ ಎಂದು ಶಾಸಕರು ಹೇಳಿದ್ದು ಶುದ್ಧ ಸುಳ್ಳು. ಈ ಕುರಿತು ಈಗಾಗಲೇ ಸಾಕಷ್ಟು ವರದಿಗಳು, ಹೋರಾಟ, ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸಲಾಗಿದೆ. ಆದರೂ ಶಾಸಕರಿಗೆ ತಿಳಿದಿಲ್ಲ ಎಂಬುದು ಸತ್ಯಕ್ಕೆ ದೂರದ ಸಂಗತಿ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹೇಳಿದರು.ಅವರು ಮಂಗಳವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಶಾಸಕರು ಆಸ್ಪತ್ರೆಗೆ ಉಪಕರಣಗಳಿಗೆ ಅನುದಾನ ಕಡಿತಗೊಂಡಿದ್ದರ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಹೇಳಿಕೆ ನೀಡಿರುವುದು ಶುದ್ಧ ಸುಳ್ಳು. ಆದರೂ ಆಸ್ಪತ್ರೆಗೆ ಅಗತ್ಯವಿರುವ ಸೂಕ್ತ ಅನುದಾನ ತರುವುದಾಗಿಯೇ ಭರವಸೆ ನೀಡಿದ ಶಾಸಕರ ಮಾತನ್ನು ಸ್ವಾಗತಿಸುತ್ತೇವೆ. ಶಾಸಕರು ತಮ್ಮ ಈ ಮಾತಿಗೆ ಬದ್ಧರಾಗಿ, ಆಸ್ಪತ್ರೆಗೆ ಮತ್ತು ಉಪಕರಣಕ್ಕೆ ಅಗತ್ಯ ಅನುದಾನವನ್ನು ಸರ್ಕಾರದಿಂದ ಕೇಳಿ, ತರಬೇಕಿದೆ ಎಂದು ಆಗ್ರಹಿಸಿದರು.
ಶಿರಸಿ ಬಸ್ ನಿಲ್ದಾಣಕ್ಕೆ ಸಂಬಂಧಿಸಿ ನಾವು ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಹಮ್ಮಿಕೊಂಡ ನಂತರ ಶಾಸಕರು ಬಸ್ ನಿಲ್ದಾಣ ಉದ್ಘಾಟನಾ ದಿನಾಂಕ ಪ್ರಕಟಿಸಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಈ ಹಿಂದೆಯೂ ಎರಡು ಬಾರಿ ಉದ್ಘಾಟನೆ ಆಗುತ್ತದೆ ಎಂದು ಹೇಳಿದ್ದರೂ ಅದು ಆಗಿರಲಿಲ್ಲ. ಈ ಬಾರಿ ಹಾಗಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಎಪ್ರಿಲ್ ಮೊದಲ ವಾರದಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಹಾಲಪ್ಪ, ಬಿಜೆಪಿ ಗ್ರಾಮೀಣ ಅಧ್ಯಕ್ಷೆ ಉಷಾ ಹೆಗಡೆ, ಪ್ರಮುಖರಾದ ನಂದನ ಸಾಗರ, ಜಯಶೀಲ ಗೌಡ ಬಾಶಿ, ನಾರಾಯಣ ಹೆಗಡೆ, ಚಿದಾನಂದ ಹರಿಜನ ಮತ್ತಿತರರು ಇದ್ದರು.