ಬಿಎಸ್‌ಎಸ್‌ಕೆ ‘ಪುನಾರಂಭಕ್ಕೆ’ ಶಾಸಕರ ಒಗ್ಗಟ್ಟು

| Published : Nov 21 2024, 01:00 AM IST

ಸಾರಾಂಶ

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಪುನಾರಂಭ 'ಗುತ್ತಿಗೆ' ಕೊಡುವದೊಂದೇ ದಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಪುನಾರಂಭ ''ಗುತ್ತಿಗೆ'' ಕೊಡುವದೊಂದೇ ದಾರಿ. ಈಗ ಅದರ ಮೇಲಿರುವ ಸಾಲ. ಕಾರ್ಮಿಕರ ಬಾಕಿ ಪಾವತಿ ಸೇರಿದಂತೆ ಮತ್ತಿತರ ವಿಷಯಗಳ ಕುರಿತಂತೆ ಜಿಲ್ಲೆಯ ಎಲ್ಲ ಶಾಸಕರುಗಳು ಸಕ್ಕರೆ ಸಚಿವರ ಬಳಿ ಸಭೆ ನಡೆಸಿ ಸಾಧಕ ಬಾಧಕಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳಿಗೆ ನಿಯೋಗ ತೆರಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅವರು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌ ಅವರು ಬಿಎಸ್‌ಎಸ್‌ಕೆ ಕಾರ್ಖಾನೆ ಯ ಪುನಶ್ಚೇತನ ಕುರಿತಾಗಿ ಮಾತೆತ್ತಿದಾಗ ಸಚಿವ ಖಂಡ್ರೆ ಅವರು ಉತ್ತರಿಸಿ, ಸಕ್ಕರೆ ಕಾರ್ಖಾನೆ ಇಡೀ ಜಿಲ್ಲೆಯ ರೈತರ ಜೀವನಾಡಿಯಾಗಿತ್ತು. ಇದೀಗ ಅಪಾರ ಹಾನಿ ಯಾಗಿದೆ. ಸದ್ಯ ಅದರ ಪುನಾರಂಭಕ್ಕೆ 300 ಕೋಟಿ ರು. ಬೇಕಾಗುತ್ತದೆ ಅಷ್ಟೊಂದು ಹಣ ಸರ್ಕಾರ ನೀಡುವದು ಅಸಾಧ್ಯ ಎಂದರು.

ಇನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದಲೂ ಹಣ ಹೊಂದಿಸುವುದು ಕಷ್ಟ ಎಂದ ಅವರು ಕಾರ್ಖಾನೆಯನ್ನು ಗುತ್ತಿಗೆ ನೀಡುವುದೊಂದೇ ದಾರಿ ಉಳಿದಿದೆ ಅದಾಗ್ಯೂ ಅದರ ಮೇಲೆ ನೂರಾರು ಕೋಟಿ ರು. ಸಾಲದ ಹೊರೆಯಿದೆ. ಸಾಲ ನೀಡಿರುವ ಡಿಸಿಸಿ ಬ್ಯಾಂಕ್‌ ಅಧಿಕಾರಿಗಳ ಜೊತೆ ಮಾತನಾಡಿ, ಏಕ ತಿರುವಳಿ ವ್ಯವಸ್ಥೆಯಡಿ ಬಡ್ಡಿ ಮನ್ನಾ ಮಾಡುವ ಕುರಿತಾಗಿ ಚರ್ಚಿಸೋಣ. ಅದಕ್ಕಾಗಿ ಸಕ್ಕರೆ ಸಚಿವರ ಬಳಿ ಮಾತನಾಡಿ ನಂತರ ಸಿಎಂ ಅವರ ಬಳಿ ನಿಯೋಗ ಹೋಗಿ ಸಮಸ್ಯೆ ಇತ್ಯರ್ಥಕ್ಕೆ ಕೋರೋಣ. ಕಾರ್ಖಾನೆಯನ್ನು ಗುತ್ತಿಗೆ ನೀಡುವುದಷ್ಟೇ ಅಲ್ಲ, ಅಲ್ಲಿ ಉಪ ಉತ್ಪನ್ನಗಳಾದ ಇಥೆನಾಲ್‌, ವಿದ್ಯುತ್‌ ಮತ್ತಿತರವನ್ನು ಉತ್ಪಾದಿಸಲೂ ಆಧ್ಯತೆ ನೀಡಬೇಕಿದೆ ಎಂದರು. ಇದಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ಪೌರಾಡಳಿತ ಸಚಿವ ರಹೀಮ್‌ ಖಾನ್‌ ಧ್ವನಿಗೂಡಿಸಿದರು.

ಆರಂಭದಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌, ಕೆಕೆಆರ್‌ಡಿಬಿಯಿಂದ ಬೀದರ್‌ನಲ್ಲಿ ನಾಗರಿಕ ವಿಮಾನಯಾನ ಆರಂಭಕ್ಕೆ 18 ಕೋಟಿ ರು. ಗಳನ್ನು ನೀಡಲಾಗಿದೆ. ನಮಗೆ ಇದಕ್ಕಿಂತ ಅತೀ ಜರೂರಿ ಇರೋದು ಬಿಎಸ್‌ಎಸ್‌ಕೆ ಪುನಾರಂಭ. ಅದಕ್ಕಾಗಿ ನಮ್ಮೆಲ್ಲ ಶಾಸಕರುಗಳ ಕೆಕೆಆರ್‌ಡಿಬಿ ಅನುದಾನವನ್ನು ಬಿಎಸ್‌ ಎಸ್‌ಕೆ ಪುನಾರಂಭಕ್ಕೆ ನೀಡಿ ರೈತರ ಸಮಸ್ಯೆ ಬಗೆಹರಿಸೋಣ. ನಾನು ಕೂಡ ರೈತನಾಗಿ ಕನಿಷ್ಠ 1 ಟನ್‌ ಕಬ್ಬು ಕಾರ್ಖಾನೆಗೆ ಸಾಗಿಸುವವನಿದ್ದೇನೆ, ಉಸ್ತುವಾರಿ ಸಚಿವರು ಇದಕ್ಕೆ ಒಪ್ಪಿಗೆ ಸೂಚಿಸುವಂತೆ ಮನವಿಸಿದರು.

ಮತ್ತೋರ್ವ ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗಿ ಕಬ್ಬು ಬೆಳೆ ಹೆಚ್ಚಿನ ಪ್ರಮಾಣದಲ್ಲಿದೆ. 28ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಬೆಳೆದಿರುವ ಅಂದಾಜಿದೆ. ಜಿಲ್ಲೆಯ ಎಲ್ಲ ಕಾರ್ಖಾನೆಗಳಲ್ಲದೆ ಮಹಾರಾಷ್ಟ್ರದ ನೆರೆ ಜಿಲ್ಲೆಯ ಕಾರ್ಖಾನೆಗಳು ಸಹ ಕಬ್ಬು ಕೊಂಡೊಯ್ದರೂ ಕನಿಷ್ಟ 5 ಟನ್‌ ಕಬ್ಬು ಉಳಿಯುವ ಸಾಧ್ಯತೆ ಇದೆ ಇದರಿಂದ ರೈತರಿಗೆ ಭಾರಿ ಆರ್ಥಿಕ ಹಾನಿ ಸಂಕಷ್ಟಕ್ಕೆ ಸಿಲುಕುತ್ತಾರೆ, ತಕ್ಷಣವೇ ಈ ಕುರಿತು ನಿರ್ಧಾರ ಕೈಗೊಂಡು ಕಾರ್ಖಾನೆ ಪುನಾರಂಭಿಸಲು ಕ್ರಮವಹಿಸುವಂತೆ ಮನವಿಸಿದರು.

ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಜಿಲ್ಲೆಯ ರೈತರ ಲಕ್ಷ್ಮಿ ಬಿಎಸ್‌ಎಸ್‌ಕೆ ಕಾರ್ಖಾನೆಯಾಗಿದೆ. ಅದರ ಪುನಾರಂಭ ಆಗಲೇಬೇಕು. ಇನ್ನು ವಿಮಾನಯಾನ ಸೇವೆಯೂ ಅಷ್ಟೇ ಅಗತ್ಯವಾಗಿದೆ ಎಂದರೆ, ಹುಮನಾಬಾದ್‌ ಶಾಸಕ ಡಾ.ಸಿದ್ದು ಪಾಟೀಲ್‌ ಸಹ ಇದಕ್ಕೆ ಧ್ವನಿಗೂಡಿಸಿ ಕೆಕೆಆರ್‌ಡಿಬಿಯಿಂದ ತಮ್ಮ ಪಾಲಿನ 10 ಕೋಟಿ ರು. ಅನುದಾನ ನೀಡಲು ಸಿದ್ಧ, ಆದರೆ ಅದಕ್ಕೆ ತಾಂತ್ರಿಕ ತೊಡಕುಗಳಾಗಬಹುದು. ಸರ್ಕಾರದ ಮಟ್ಟದಲ್ಲಿ ಶೀಘ್ರ ನಿರ್ಧಾರ ಕೈಗೊಂಡಲ್ಲಿ ರೈತರಿಗೆ ಅನುಕೂಲ ಆಗಲಿದೆ. ಡಿಸಿಸಿ ಬ್ಯಾಂಕ್‌ ನೀಡಿರುವ ಒಟ್ಟು ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದ್ದೆಯಾದಲ್ಲಿ ಅನುಕೂಲ ಎಂದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವಿಭಾಗೀಯ ಉಪಾಧ್ಯಕ್ಷ ಎಸ್‌ಆರ್‌ ಮೆಹರೋಜ್‌ ಖಾನ್‌, ಜಿಲ್ಲಾ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಂದೀಪ್‌, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ. ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಎಸ್‌ಪಿ ಪ್ರದೀಪ ಗುಂಟಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು.

ಕಬ್ಬಿನ ಬೆಲೆ ನಿಗದಿಗೆ ಶಾಸಕ ಡಾ.ಬೆಲ್ದಾಳೆ ಆಗ್ರಹಬೀದರ್‌: ನವೆಂಬರ್‌ ತಿಂಗೊಳಗಾಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ರೈತರ ಕಬ್ಬು ದರ ನಿಗದಿಗೊಳಿಸುವ ನಿಟ್ಟಿನಲ್ಲಿ ಎಲ್ಲ ಶಾಸಕರ ಹಾಗೂ ಕಾರ್ಖಾನೆಗಳ ಅಧಿಕಾರಿಗಳು ಸಭೆಯನ್ನು ಜರುಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.ಅವರು ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಆರಂಭಿಸಿಯಾಗಿವೆ ಆದರೆ ಇನ್ನೂ ರೈತರ ಕಬ್ಬಿಗೆ ಬೆಲೆ ನಿಗದಿಪಡಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದಾಗ ಸಚಿವರು ಶೀಘ್ರವೇ ಎಲ್ಲಾ ಶಾಸಕರು, ಕಾರ್ಖಾನೆ ಅಧ್ಯಕ್ಷರ ಸಭೆ ನಡೆಸಲು ತಯಾರಿಸಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸೂಚಿಸಿದರು.

ವಸೂಲಿಗಾಗಿ ರೈತನ ಮಾನ ಕಳೆದರೆ, ಬಹುಕೋಟಿ ವಂಚಕನಿಗೆ ಬಹುಪರಾಕ್‌

ಬೀದರ್‌: ಕೇವಲ ಒಂದು ಲಕ್ಷ ಸಾಲ ಮಾಡಿ ತೀರಿಸಲಾಗದ ರೈತನ ಮನೆ, ಹೊಲ ಹರಾಜು ಹಾಕುವ ಬ್ಯಾಂಕ್‌ ಅಧಿಕಾರಿಗಳು ಅನರ್ಹವಾಗಿದ್ದರೂ ನೂರಾರು ಕೋಟಿ ರು.ಗಳ ಸಾಲ ವನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡಿ ತಿಂದು ತೇಗುವಂತೆ ಮಾಡುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಸಾಲ ಪಡೆದ ಕಾರ್ಖಾನೆ ಮುಖ್ಯಸ್ಥರು ಹಾಗೂ ಸಹಕರಿಸಿದ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ತನಿಖೆಯಾಗಿ ಶಿಸ್ತು ಕ್ರಮವಾಗಬೇಕು ಎಂದು ಪೌರಾಡಳಿತ ಸಚಿವ ರಹೀಮ್‌ ಖಾನ್‌ ಆಗ್ರಹಿಸಿದರು.

ಅವರು ಜಿಪಂ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಸಭೆಯಲ್ಲಿ ಬಿಎಸ್‌ಎಸ್‌ಕೆ ಕಾರ್ಖಾನೆ ಪುನಾರಂಭಕ್ಕೆ ಸರ್ಕಾರದಿಂದ ಕನಿಷ್ಟ 50 ಕೋಟಿ ರು.ಸಹಾಯ ಧನ ದೊರಕಿಸುವದು ಮತ್ತು ಡಿಸಿಸಿ ಬ್ಯಾಂಕ್‌ನಲ್ಲಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿಸಬೇಕೆಂಬ ಶಾಸಕರುಗಳ ಒಕ್ಕೊರಲಿನ ಆಗ್ರಹಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.ಕಾರ್ಖಾನೆಗಳ ಮುಖ್ಯಸ್ಥರು, ಅಧಿಕಾರಿಗಳು ತೆರಿಗೆ ಪಾವತಿದಾರರ, ರಾಜ್ಯದ ಜನರ ಹಣವನ್ನೇ ನೀಡುವ ಸರ್ಕಾರದ ಅನುದಾನವನ್ನು ಕೊಳ್ಳೆ ಹೊಡೆಯುತ್ತಾರೆ. ಅದಕ್ಕಾಗಿ ಹೊಂಚು ಹಾಕಿ ಕುಳಿತಿರುತ್ತಾರೆ. ಕಾರ್ಖಾನೆ ಹಾಗೂ ರೈತರ ಹಿತಕ್ಕಿಂತ ಅವರು ಮುಳುಗಿಸುವದರಲ್ಲಿಯೇ ನಿಸ್ಸೀಮರು. ಜನವಾಡ ಬಳಿಯ ಸಕ್ಕರೆ ಕಾರ್ಖಾನೆಗೆ 850 ಕೋಟಿ ರು. ಸಾಲ ನೀಡಿದ್ದು ಹೇಗೆ ಎಂಬ ಬಗ್ಗೆ ತನಿಖೆಯಾಗಲಿ. ಕಾರ್ಖಾನೆಗೆ ಡಿಸಿಸಿ ಬ್ಯಾಂಕ್‌ ನೀಡಿದ ಸಾಲದ ಸದ್ಬಳಕೆಯಾಗಿದೆಯೇ ಎಂಬ ಬಗ್ಗೆ ವರದಿ ನೀಡಲಿ ಎಂದು ಆಗ್ರಹಿಸಿದರು.ಹೀಗೆಯೇ ಸರ್ಕಾರದಿಂದ ಬಿಎಸ್‌ಎಸ್‌ಕೆಗೆ ಅನುದಾನ ನೀಡಿದ್ದೆಯಾದಲ್ಲಿ ಅದನ್ನು ಹೇಗೆ ಲಪಟಾಯಿಸಬೇಕು ಎಂದು ಹೊಂಚು ಹಾಕಿಕೊಂಡು ಕುಳಿತುಕೊಂಡವರೂ ಇದ್ದಾರೆ. ಸರ್ಕಾರದ ಅನುದಾನ ಜನರ ದುಡ್ಡು ಅದು ಸದ್ಬಳಕೆಯಾಗಬೇಕು ಎಂದು ರಹೀಮ್‌ ಖಾನ್‌ ತಿಳಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರಾದ ಮಂಜುಳಾ ಅವರು ಸಭೆಗೆ ಮಾಹಿತಿ ನೀಡಿ, ಬ್ಯಾಂಕ್‌ಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಭಾರಿ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿವೆ. ಶೇ. 87ರಷ್ಟು ಎನ್‌ಪಿಎ ಆಗಿದೆ ಎಂದ ಅವರು, ಬಿಎಸ್‌ಎಸ್‌ಕೆ ಕಾರ್ಖಾನೆಗೆ ನೀಡಲಾಗಿರುವ ಒಟ್ಟು 115 ಕೋಟಿ ರು. ಸಾಲ ಮತ್ತು ಅದರ ಬಡ್ಡಿ ಸೇರಿ 254ಕೋಟಿ ರು. ಆಗುತ್ತದೆ ಆದರೆ ಏಕ ತಿರುವಳಿ ಒಪ್ಪಂದ ಒಳಪಡಲು ಕನಿಷ್ಠ 195ಕೋಟಿ ರು.ಗಳನ್ನು ಭರಿಸಬೇಕಾಗುತ್ತದೆ ಎಂದರು.ಇದಕ್ಕೆ ಉಪಸ್ಥಿತರಿಂದ ಶಾಸಕರುಗಳು ಸಹಮತ ವ್ಯಕ್ತಪಡಿಸಿ ಡಿಸಿಸಿ ಬ್ಯಾಂಕ್‌ ಸಕ್ಕರೆ ಜಿಲ್ಲೆಯ ಕಾರ್ಖಾನೆಗಳಿಗೆ ನೀಡಿರುವ ಸಾಲದ ಬಗ್ಗೆ ತನಿಖೆಗೆ ಆದಶಿಸಲಿ ಮತ್ತು ಡಿಸಿಸಿ ಬ್ಯಾಂಕ್‌ ಬಿಎಸ್‌ಎಸ್‌ಕೆ ಕಾರ್ಖಾನೆಯ ಆಸ್ತಿ ಹರಾಜಿಗೆ ಮುಂದಾಗಿದ್ದು ಅದಕ್ಕೆ ತಾತ್ಕಾಲಿಕವಾಗಿ ತಡೆ ನೀಡುವದಕ್ಕೆ ಸೂಚಿಸುವಂತೆ ಸಚಿ‍ವ ಖಂಡ್ರೆ ಅವರಿಗೆ ಮನವಿಸಿದರು.ಸಚಿವ ಖಂಡ್ರೆ ಪ್ರತಿಕ್ರಿಯಿಸಿ, ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗಿರುವ ಸಾಲದ ಸದ್ಬಳಕೆ ಕುರಿತಂತೆ ತನಿಖೆಗೆ ಆದೇಶಿಸಲಾಗುವದು ಹಾಗೂ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿ ಬ್ಯಾಂಕ್‌ ಅಧ್ಯಕ್ಷರಿಗೂ ಮಾತನಾಡುವುದಾಗಿ ತಿಳಿಸಿದರು.ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಭಾರಿ ಸಾಲದ ಸುಳಿಗೆ ಸಿಲುಕಿವೆ. ಬಿಎಸ್‌ಎಸ್‌ಕೆ ಈಗಾಗಲೇ ಮುಚ್ಚಿದ್ದು ಜನವಾಡಾ ಬಳಿಯ ನಾರಂಜಾ ಸಕ್ಕರೆ ಕಾರ್ಖಾನೆಗೆ 200ಕೋಟಿ ರು. ಆಸ್ತಿಯಿದ್ದರೆ ಅದರ ಮೇಲೆ 850ಕೋಟಿ ರು. ಸಾಲದಲ್ಲಿದ್ದು ಇದೆಲ್ಲ ಬೀದರ್‌ ಜಿಲ್ಲಾ ಸಹಕಾರ ಬ್ಯಾಂಕ್‌ ಮುಳುಗಲು ಕಾರಣವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.ಸಾರಿಗೆ ಸಂಚಾರ ಸುಗಮಗೊಳಿಸಿ: ಶಾಸಕ ಡಾ.ಬೆಲ್ದಾಳೆ

ಬೀದರ್. ಶಕ್ತಿ ಯೋಜನೆ ಅನುಷ್ಠಾನಕ್ಕೆ ಬಂದ ಬಳಿಕ ಬಸ್‌ ಸಂಖ್ಯೆ ಕಡಿಮೆಯಾಗಿ ಇಂತಹ ಸಮಸ್ಯೆ ಎಲ್ಲಾ ಕಡೆ ಉದ್ಭವವಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿರುವ ದೂರು ಬರುತ್ತಿವೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಡಾ. ಬೆಲ್ದಾಳೆ ಒತ್ತಾಯಿಸಿದರು.ಜಿಪಂ ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ಕೆಡಿಪಿ ಸಭೆಯಲ್ಲಿ ಮಾತನಾಡಿ, ಬೀದರ್‌ ದಕ್ಷಿಣ ಕ್ಷೇತ್ರದ ಮನ್ನಳ್ಳಿ ರಸ್ತೆಯಿಂದ ಸಿಂದೋಲ್‌ ತಾಂಡಾದ ಜಾತ್ರಾ ಮಹೋತ್ಸವಕ್ಕೆಬುಧವಾರ ತಾವು ತೆರಳುವ ಮಾರ್ಗದಲ್ಲಿ ಬುಧೇರಾ, ಮನ್ನಳ್ಳಿ ಹೋಗುವ ಸರ್ಕಾರಿ ಬಸ್‌ನಲ್ಲಿ ಬಸ್‌ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ಬಾಗಿಲಿನಲ್ಲಿ ನೇತಾಡುತ್ತಾ ಸಾಗುತ್ತಿರುವುದನ್ನು ಕಂಡು ಬಸ್‌ ನಿಲ್ಲಿಸಿ ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಇನ್ನೂ ಒಂದು ಬಸ್‌ ವ್ಯವಸ್ಥೆ ಮಾಡಿ ಅನಾಹುತ ತಪ್ಪಿಸಲು ಸೂಚಿಸಿದರ ಬಗ್ಗೆ ಕೆಡಿಪಿ ಸಭೆಯಲ್ಲಿ ಚಿತ್ರದ ಸಮೇತ ಉಸ್ತುವಾರಿ ಸಚಿವರಿಗೆ ತಿಳಿಸಿದರು.

ಅಂಗನವಾಡಿ ಸಹಾಯಕಿ ಹುದ್ದೆ ನೇಮಕ ತಾತ್ಕಾಲಿಕ ಪಟ್ಟಿ ಈಗಾಗಲೇ ಪ್ರಕಟಿಸಿದ್ದಾರೆ ಅದರಲ್ಲಿ ಹಲವು ಗೊಂದಲಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಬೇಕೆಂದು ಶಾಸಕರು ತಿಳಿಸಿದರು.

ಬೇಮಳಖೇಡಾ ಗ್ರಾಮದ ಹೊರವಲಯದಲ್ಲಿರುವ ಆದರ್ಶ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗದ್ದು ಖಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮನವಿ ಮಾಡಿದರು ಇದಕ್ಕೆ ಸಚಿವರು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

* ಕೆಡಿಪಿ ಸಭೆಯ ಹೈಲೈಟ್ಸ್‌

ಬೆಲ್ದಾಳೆ ಭರಾಟೆ, ಗ್ಯಾರಂಟಿ ಶಾಕ್‌

ಬೀದರ್‌: ಕಳಪೆ ಬೀಜ ಪೂರೈಸಿದ್ದ ಕಂಪನಿಗಳಿಗೆ ಪುನಾ ಬೀಜ ಪೂರೈಕೆಗೆ ಆದೇಶ ನೀಡಿರುವ ಕುರಿತಾಗಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆರೋಪಿಸಿದಾಗ, ಕೃಷಿ ಅಧಿಕಾರಿ ವಿರುದ್ಧ ಸಚಿವ ಖಂಡ್ರೆ ಗರಂ ಆಗಿ ಸರ್ಕಾರಕ್ಕೆ ತಕ್ಷಣವೇ ಕೆಡಿಪಿ ಸಭೆಯಲ್ಲಿ ಸದರಿ ಕಂಪನಿಗಳಿಗೆ ಕಾರ್ಯಾದೇಶ ನೀಡದಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವರದಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಆರಂಭದಲ್ಲಿಯೇ ಬಿಜೆಪಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವಿರೋಧಾಭಾಸದ ಧ್ವನಿಯ ಮೂಲಕ ಸ್ವಾಗತಿಸಿದ ಘಟನೆ ನಡೆಯಿತು.

ಕೆಡಿಪಿ ಸಭೆಯ ವೇದಿಕೆಯ ಮೇಲೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್‌ಆರ್‌ ಮೆಹೆರೋಜ್‌ ಖಾನ್‌ ಅವರು ಆಸೀನರಾಗಿದ್ದಕ್ಕೆ ಬಿಜೆಪಿ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಹಾಗೂ ಶರಣು ಸಲಗರ ಅವರು ಆಕ್ಷೇಪ ವ್ಯಕ್ತಪಡಿಸಿ ದರು. ರಾಜ್ಯ ಸಚಿವ ದರ್ಜೆಯ ಸ್ಥಾನ ಮಾನ ಹೊಂದಿದ್ದಾರೆ ಶಿಷ್ಠಾಚಾರದಂತೆ ಅಧಿಕಾರಿಗಳು ಆಸನ ವ್ಯವಸ್ಥೆ ಮಾಡಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಮನವೊಲಿಸಿದರು.

ಶಾಸಕ ಶರಣು ಸಲಗರ ಗರಂ :

ಬಸವಕಲ್ಯಾಣ ರಿಫಾ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಸಿಜರಿಯನ್‌ ಹೆರಿಗೆಗಳೇ ಹೆಚ್ಚು, ತನಿಖೆಗೆ ಆದೇಶಿಸುವಂತೆ ಶಾಸಕ ಶರಣು ಸಲಗರ ಅವರ ಆಗ್ರಹಕ್ಕೆ ಮನ್ನಣೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಡಿಎಚ್‌ಒ ಅವರಿಗೆ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಸೂಚಿಸಿದರು.ಬಸವಕಲ್ಯಾಣ ಕ್ಷೇತ್ರದಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಖಾಸಗಿ ಅವರು ಅನಗತ್ಯ ದಾವೆ ಹೂಡಿ ವಿಳಂಬಕ್ಕೆ ಕಾರಣವಾಗ್ತಿದ್ದಾರೆ ಎಂದು ಶಾಸಕ ಶರಣು ಸಲಗರ ಸಭೆಯ ಗಮನಕ್ಕೆ ತರುತ್ತಿದ್ದಂತೆ, ಸರ್ಕಾರದ ಜಮೀನು ಕಬಳಿಸುವ ಕುತಂತ್ರಿಗಳನ್ನು ಜೈಲಿಗೆ ಕಳುಹಿಸಲು ಸಚಿವ ಖಂಡ್ರೆ ಸೂಚನೆ ನೀಡಿದರು. ಈ ಕುರಿತಾಗಿ ಸ್ಥಳೀಯ ಸಂಸ್ಥೆಗಳು, ತಹಸೀಲ್ದಾರ್‌ ಸೇರಿದಂತೆ ಸಂಬಂಧಿತರಿಗೆ ಆದೇಶ ಹೊರಡಿಸುವಂತೆ ಡಿಸಿಗೆ ಸೂಚಿಸಿ, ನಿರ್ಲಕ್ಷಿಸುವವರನ್ನು ಅಮಾನತ್ತುಗೊಳಿಸಲು ತಿಳಿಸಿದರು.

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಹುದ್ದೆಯನ್ನು ಎಂಜಿನಿಯರ್‌ ಪದವೀಧರರಿಗೆ ನೀಡಬೇಕು ಅಥವಾ ಜಿಪಂ, ಪಿಡಬ್ಲುಡಿ ಎಂಜಿನಿಯರ್‌ಗಳನ್ನು ನಿಯುಕ್ತಿಗೊಳಿಸುವಂತೆ ಶಾಸಕರುಗಳು ಆಗ್ರಹಿಸಿದಾಗ ಈ ಬಗ್ಗೆ ಕ್ರಮವಹಿಸಲು ಡಿಸಿಗೆ ಸಚಿವರು ಸೂಚನೆ ನೀಡಿದರು.ಬಸವಕಲ್ಯಾಣ ಗೋಶಾಲೆಯನ್ನು ಆರಂಭಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಸರ್ಕಾರದಿಂದ ಅನುದಾನ ಬಂದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಅವರ ಮನವಿಗೆ ಸಚಿವ ಖಂಡ್ರೆ ಸ್ಪಂದಿಸಿ ತಕ್ಷಣ ಕ್ರಮ ಕೈಗೊಳ್ಳಲು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಶಾಸಕ ಪಾಟೀಲ್‌ ಸಹೋದರರ ಸವಾಲಿಗೆ ತತ್ತರ:ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ಅವರು ಹುಮನಾಬಾದ್‌ ಪುರಸಭೆಗೆ ಕೇಳಿರುವ ಮಾಹಿತಿಯನ್ನು ನೀಡಲು ಅನಗತ್ಯ ವಿಳಂಬ ಮಾಡಲಾಗ್ತಿದೆ ಎಂಬ ಆರೋಪಕ್ಕೆ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದರು. ಹಾಗೂ ಹೈಮಾಸ್ಟ್‌ ಬೀದಿ ದೀಪಗಳ ಪೂರೈಕೆಯಲ್ಲಿ ಅಕ್ರಮದ ತನಿಖೆಯ ಬಗ್ಗೆ ಕೇಳಿದಾಗ ಅಧಿಕಾರಿಗಳು ಉತ್ತರಿಸಲಾಗದೇ ಮೌನವಾದರು. ಹುಮನಾಬಾದ್‌ ತಾಲೂಕು ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ ಎಂಬ ದೂರು ಮುಂದಿನ ದಿನಗಳಲ್ಲಿ ಬಾರದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಖಂಡ್ರೆ ತಿಳಿಸಿದರಲ್ಲದೆ ಶಾಸಕರಿಗೆ ಮಾಹಿತಿ ನೀಡಲು ನಿರ್ಮಿತಿ ಕೇಂದ್ರದ ತನಿಖೆಯ ವರದಿ ನೀಡಲು ಅಧಿಕಾರಿಗಳಿಗೆ 3 ದಿನಗಳ ಗಡುವು ನೀಡಿದರು. ಆಗ ಬಿಜೆಪಿ ಶಾಸಕರಾದ ಡಾ. ಬೆಲ್ದಾಳೆ ಹಾಗೂ ಸಲಗರ ಅವರು ಶಾಸಕರಾದ ಪಾಟೀಲ್‌ ಸಹೋದರರಿಗೆ ಹುಮನಾಬಾದ್‌ ಬಿಟ್ಟು ಹೊರಬನ್ನಿ, ನಿಮಗೆ ಇಡೀ ಕಲ್ಯಾಣ ಕರ್ನಾಟಕವೇ ಕ್ಷೇತ್ರ. ನಮ್ಮ ಕಡೆಗೂ ಬನ್ನಿ ಇಲ್ಲಿಯೂ ಅಭಿವೃದ್ದಿ ಮಾಡಿ ಅದರ ಬಗ್ಗೆ ಮಾತನಾಡಿ ಎಂದು ಕಾಲೆಳೆದರೆ ಡಾ. ಬೆಲ್ದಾಳೆ ಎಲ್ಲರೂ ಸಹೋದರರಂತೆ ಇರೋಣ ಕ್ಷೇತ್ರದ ಅಭಿವೃದ್ಧಿಯ ಗುರಿ ಮಾತ್ರ ಇಟ್ಟುಕೊಳ್ಳೋಣ ಎಂದು ಕಿವಿ ಮಾತು ಹೇಳಿದ ಪ್ರಸಂಗ ನಡೆಯಿತು.

-

₹10 ಕೋ.ಮುಂಗಾರು ಬೆಳೆ ಪರಿಹಾರ ಬಿಡುಗಡೆ: ಸಚಿವ ಈಶ್ವರ ಖಂಡ್ರೆ ಕನ್ನಡಪ್ರಭ ವಾರ್ತೆ ಬೀದರ್‌ ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 17,460 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸರ್ಕಾರವು 13.76ಕೋಟಿ ರು.ಗಳ ಪೈಕಿ 10 ಕೋಟಿ ರು. ಪರಿಹಾರ ಬಿಡುಗಡೆ ಮಾಡಿದ್ದು ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಜಮೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಹೇಳಿದರು.

ಅವರು ಬುಧವಾರ ಜಿಪಂ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಅದಾಗ್ಯೂ ಸಾಕಷ್ಟು ಬೆಳೆ ಹಾನಿಯಾಗಿದೆ. ಸರ್ಕಾರವು 10 ಕೋಟಿ ರು. ಪರಿಹಾರ ಬಿಡುಗಡೆ ಮಾಡಿದ್ದು ಇನ್ನೂ 3.76 ಕೋಟಿ ರು. ಬರಲಿದೆ ಜಿಲ್ಲೆಯ 15 ಸಾವಿರ ರೈತರ ಖಾತೆಗಳಿಗೆ ಮುಂಗಾರು ಬೆಳೆ ಪರಿಹಾರ ನೇರವಾಗಿ ಜಮೆಯಾಗಲಿದೆಯೆಂದು ತಿಳಿಸಿದರು.

ಕೆಡಿಪಿ ಸಭೆಯಲ್ಲಿ ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳ ಸಮಗ್ರ ಕಾರ್ಯಕ್ರಮಗಳನ್ನು ಪರಿಶೀಲಿಸಿದರು. ಮುಂಗಾರು ಬೆಳೆ ವಿಮೆ ಯೋಜನೆಯಡಿ 774 ಬೆಳೆ ಕಟಾವು ಪ್ರಯೋಗಗಳನ್ನು ಹಮ್ಮಿಕೊಳ್ಳಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಕಡಲೆ, ಜೋಳ, ಕೂಸುಬಿ ಶೇ. 87ರಷ್ಟು ಬಿತ್ತನೆಯಾಗಿದ್ದು ಈ ವಾರದಲ್ಲಿ ಶೇ. 100ರಷ್ಟು ಬಿತ್ತನೆಯಾಗಲಿದೆ. ಸಧ್ಯ ಜಿಲ್ಲೆಯಲ್ಲಿ ಬೀಜ, ಗೊಬ್ಬರಗಳ ಯಾವುದೇ ಸಮಸ್ಯೆ ಇಲ್ಲವೆಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

7 ತಾಸು ವಿದ್ಯುತ್‌ ಪೂರೈಸಲು ಸೂಚನೆ :

ರೈತರಿಗೆ ಅನುಕೂಲವಾಗುವಂತೆ ಬೆಳಿಗ್ಗೆ ಅವಧಿಯಲ್ಲಿ 7 ತಾಸು ವಿದ್ಯುತ್‌ ಸರಬರಾಜು ಮಾಡುವಂತೆ ಜೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ಸಚಿವರು ಸೂಚಿಸಿದರು.ರೈತರ ಆತ್ಮಹತ್ಯೆ ಪ್ರಕರಣಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಈಗಾಗಲೇ ಚೆಕ್‌ ವಿತರಿಸಿದ್ದು ಖಾತೆಗೆ ಹಣ ಜಮೆ ಆಗದೇ ಇರುವುದಕ್ಕೆ ಅಸಾಮಾಧಾನ ವ್ಯಕ್ತಪಡಿಸಿದ ಸಚಿವರು ಕಂದಾಯ ಹಾಗೂ ಕೃಷಿ ಅಧಿಕಾರಿಗಳು ತಕ್ಷಣವೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರಿಗೆ 2 ಸಾವಿರ ಮಾಸಿಕ ವೇತನ ಸರಿಯಾಗಿ ಜಮೆ ಆಗುತ್ತಿರುವ ಬಗ್ಗೆ ಕಂದಾಯ ಅಧಿಕಾರಿಗಳು ಸೂಕ್ತ ಗಮನ ಇಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಶೈಕ್ಷಣಿಕ ಶುಲ್ಕವನ್ನು ಇಲಾಖೆಯು ಭರಿಸಬೇಕು. ಸಾಮಾಜಿಕ ಬದ್ಧತೆ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಸೂಕ್ತ ವರದಿ ನೀಡುವಂತೆ ಸಚಿವರು ಸೂಚಿಸಿದರು.ಭಾಲ್ಕಿಯಲ್ಲಿ ಕೋಲ್ಡ್‌ ಸ್ಟೋರೇಜ್‌ :ತೋಟಗಾರಿಕೆ ಬೆಳೆ ಆಧಾರಿತ ಹಣ್ಣುಗಳ ಶೀತಲ ಘಟಕ ನಿರ್ಮಾಣಕ್ಕೆ ಖಾಸಗಿ ಕಂಪನಿಗಳು ಸಿದ್ಧರಿದ್ದು 4 ಎಕರೆ ಭೂಮಿ ಗುರುತಿಸಲು ಹಾಗೂ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಿಚವರಾದ ಈಶ್ವರ ಖಂಡ್ರೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ದಾಳಿಂಬೆ ಹಾಗೂ ಮಾವು ಹಣ್ಣುಗಳ ರಪ್ತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.