ಶಾಸಕರ ಗ್ರಾಮ ಗಸ್ತು: ಸಮಸ್ಯೆಗಳ ಸುರಿಮಳೆ

| Published : Jul 25 2025, 01:10 AM IST

ಶಾಸಕರ ಗ್ರಾಮ ಗಸ್ತು: ಸಮಸ್ಯೆಗಳ ಸುರಿಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದೊಂದು ತಿಂಗಳಿನಿಂದ ಶಾಸಕ ಕೃಷ್ಣ ನಾಯ್ಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಜನ ಸಮಸ್ಯೆಗಳ ಸುರಿಮಳೆ ಸುರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಕಳೆದೊಂದು ತಿಂಗಳಿನಿಂದ ಶಾಸಕ ಕೃಷ್ಣ ನಾಯ್ಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಜನ ಸಮಸ್ಯೆಗಳ ಸುರಿಮಳೆ ಸುರಿಸುತ್ತಿದ್ದಾರೆ. ರಸ್ತೆ, ಚರಂಡಿ, ವಿದ್ಯುತ್‌ ದೀಪ, ಶುದ್ಧ ಕುಡಿವ ನೀರು, ನಿವೇಶನ ಮತ್ತು ವಸತಿ, ಸ್ಮಶಾನ, ಶಾಲಾ ಕೋಣೆಗಳ ದುರಸ್ತಿ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ನೋಡಿದ ಶಾಸಕರು ಸ್ಥಳದಲ್ಲೇ ಇದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆಗಳು ಜರುಗಿವೆ.

ತಾಲೂಕಿನಲ್ಲಿ ಯಾವ ಕಡೆಗೂ ಹೋದರೂ ಕೆಸರು ಗದ್ದೆಯಂತಿರುವ ರಸ್ತೆಗಳೇ ಸ್ವಾಗತಿಸುತ್ತಿವೆ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ತಗ್ಗು ಗುಂಡಿಗಳ ಮಧ್ಯೆಯೇ ಶಾಸಕರು ಸಂಚರಿಸುತ್ತಿದ್ದಾರೆ, ಗ್ರಾಮೀಣ ಪ್ರದೇಶದಲ್ಲಿ ಕಸ ಕಡ್ಡಿ ಹೂಳಿನಿಂದ ತುಂಬಿದ ಚರಂಡಿ ವ್ಯವಸ್ಥೆ, ಚರಂಡಿ ಪಕ್ಕದಲ್ಲೇ ಕುಡಿವ ನೀರಿನ ಪೈಪ್‌ಲೈನ್‌ ಸೋರಿಕೆಯಂತಹ ಸಮಸ್ಯೆ ಆಲಿಸಿದ ಶಾಸಕರು ಸಮಸ್ಯೆಗಳ ಪಟ್ಟಿ ಸಿದ್ದಪಡಿಸಿದ್ದಾರೆ. ಈ ಕುರಿತು ಕ್ರಿಯಾ ಯೋಜನೆ ಮಾಡಿ ನರೇಗಾ ಸೇರಿದಂತೆ ಇತರೆ ಅನುದಾನದಲ್ಲಿ ಹಳ್ಳಿಗಳ ಅಭಿವೃದ್ಧಿ ಮಾಡುವ ಪ್ರಯತ್ನ ಮಾಡುತ್ತೇನೆಂದು ಜನರಿಗೆ ಭರವಸೆ ನೀಡಿದ್ದಾರೆ.

ತಾಲೂಕಿನ ಕೊನೆ ಗ್ರಾಮ ಹರವಿ, ಸಿದ್ದಾಪುರ, ಬಸಾಪುರ ಗ್ರಾಮಗಳ ಸಮಸ್ಯೆ ಶಾಸಕ ಆಲಿಸಿದ್ದಾರೆ. ಹರವಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಹರವಿ ಪ್ಲಾಟ್‌ನಲ್ಲಿ ಚರಂಡಿ,ರಸ್ತೆ, ವಿದ್ಯುತ್‌ ದೀಪಗಳ ವ್ಯವಸ್ಥೆಯೇ ಮಾಯವಾಗಿವೆ. ಸಂಪೂರ್ಣ ಕೆಸರುಮಯವಾಗಿರುವ ರಸ್ತೆಯಲ್ಲೇ ಜನ ಬಂದು ಶಾಸಕರಿಗೆ ತಮ್ಮ ಗೋಳು ತೊಡಿಕೊಂಡಿದ್ದಾರೆ. ಕಣಗಳು ಮತ್ತು ಇತರೆ ಜಾಗಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ, ತಹಸೀಲ್ದಾರ್‌ ಮೂಲಕ ನೋಟಿಸ್‌ ಜಾರಿ ಮಾಡುವಂತೆ ಪಿಡಿಒಗೆ ಸೂಚಿಸಿದ್ದಾರೆ.

ಹರವಿ ಗ್ರಾಮ ಠಾಣಾ ವ್ಯಾಪ್ತಿ ಬಿಟ್ಟು ಹೊರಗಡೆ ನಿರ್ಮಾಣಗೊಂಡ ಹರವಿ ಪ್ಲಾಟ್‌ನಲ್ಲಿ 80ಕ್ಕೂ ಹೆಚ್ಚು ಮನೆಗಳಿವೆ, ಕಳೆದ 20 ವರ್ಷಗಳ ಹಿಂದೆ ಜನ ತುಂಡು ಭೂಮಿ ಖರೀದಿ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ, ಆದರೆ ಸರಿಯಾಗಿ ಲೇ ಔಟ್‌ ಆಗಿಲ್ಲ ಕೆಲವರು ರಸ್ತೆಯ ಮೇಲೆಯೇ ಮನೆ ನಿರ್ಮಿಸಿಕೊಂಡಿದ್ದಾರೆ. ಈ ಭಾಗಕ್ಕೆ ಸಾಕಷ್ಟು ಬಾರಿ ನರೇಗಾ ಯೋಜನೆಯಲ್ಲಿ ಸಿಸಿ ರಸ್ತೆ ಮಂಜೂರು ಮಾಡಿ ಕಾಮಗಾರಿ ಮಾಡಲು ಹೋದಾಗ ಜನರ ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದ ಈ ಭಾಗ ಅಭಿವೃದ್ಧಿ ಆಗಿಲ್ಲ, ಈ ಕುರಿತು ಸರ್ವೇ ಮಾಡಿಸಿ ರಸ್ತೆ, ಚರಂಡಿ ನಿರ್ಮಿಸಲು ಶಾಸಕ ಸೂಚಿಸಿದ್ದಾರೆ ಎಂದು ಪಿಡಿಒ ಗುತ್ತೆಪ್ಪ ಮಾಹಿತಿ ನೀಡಿದ್ದಾರೆ.

ಹರವಿ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಮೇಲ್ಛಾವಣಿ ದುರಸ್ಥಿಗೆ ಕ್ರಮ ಕೈಗೊಳ್ಳಲು ಪಿಡಿಒಗೆ ಸೂಚಿಸಿದರು, ಅಂಗನವಾಡಿ ಕೇಂದ್ರದಲ್ಲಿ ಮಳೆ ನೀರು ನುಗ್ಗುತ್ತಿದೆ. ಈ ಕಟ್ಟಡ ತೆರವುಗೊಳಿಸಿ ಸಾರ್ವಜನಿಕರ ಬಸ್‌ ನಿಲ್ದಾಣ ನಿರ್ಮಿಸುತ್ತೇವೆ, ಅಂಗನವಾಡಿ ಕಟ್ಟಡಕ್ಕೆ ಸೂಕ್ತ ನಿವೇಶನ ಪತ್ತೆ ಮಾಡಿ ಹೊಸ ಕಟ್ಟಡ ನಿರ್ಮಿಸಬೇಕಿದೆ. ಜತೆಗೆ ಸರ್ಕಾರಿ ಶಾಲಾ ಕಾಂಪೌಂಡ್‌ನ್ನು ನರೇಗಾ ಯೋಜನೆಯಲ್ಲಿ ನಿರ್ಮಿಸಲು ಪಿಡಿಒ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಈ ಸಂದರ್ಭ ಗ್ರಾಪಂ ಅಧ್ಯಕ್ಷ ಭರಮಪ್ಪ ಕುಂಚೂರ್, ಪಿಡಿಒ ಗುತ್ತೆಪ್ಪ ತಳವಾರ್, ಗ್ರಾಮಸ್ಥರಾದ ತಿರಕಪ್ಪ ಸಿಗ್ಲಿ. ಮಹೇಶಪ್ಪ ಲಕ್ಕಪ್ಪನವರ್. ಶಿವುಕುಮಾರ್ ಹಡಗಲಿ, ಶಿವು ಕಣಿವಿ, ಸಿದ್ದಪ್ಪ ಲಕ್ಕಪ್ಪನವರ್, ಶ್ರೀಕಾಂತ್ ಬಾವಿಹಳ್ಳಿ, ಮಹೇಶ್ ಚಂದಾಪುರ, ಲಕ್ಷ್ಮಣ ಇಟಗಿ ಸೇರಿದಂತೆ ಇತರರಿದ್ದರು.