- ಚನ್ನಗಿರಿಯಲ್ಲಿ ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಒತ್ತಾಯ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಕ್ಷೇತ್ರದ ಜನರ ಜೀವನಾಡಿ ಉಬ್ರಾಣಿ ಏತನೀರಾವರಿ ಮತ್ತು ಸಾಸಿವೆಹಳ್ಳಿ ಏತನೀರಾವರಿ ಯೋಜನೆಗೆ ಒಳಪಡುವ ಎಲ್ಲ ಕೆರೆಗಳಿಗೆ ಸಮರ್ಪಕವಾಗಿ ನೀರನ್ನು ಹರಿಸದೇ, ನಿರ್ವಹಣೆ ಮಾಡದೇ ರೈತರಿಗೆ ವಂಚಿಸಲಾಗುತ್ತಿದೆ. ಈ ಕ್ಷೇತ್ರದ ಶಾಸಕರು ಸಮರ್ಪಕ ಆಡಳಿತ ನಡೆಸಲು ವಿಫಲರಾಗಿದ್ದಾರೆ. ಇಂತಹ ಅದಕ್ಷ ಶಾಸಕ ಕೂಡಲೇ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಆಗ್ರಹಿಸಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವರು ಉಬ್ರಾಣಿ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ನದಿಯಿಂದ ನೀರೆತ್ತುವ ಮೋಟರ್‌ಗಳು 20 ವರ್ಷಗಳಷ್ಟು ಹಳೆಯದಾಗಿವೆ. ಇವುಗಳನ್ನು ಬದಲಿಸಲು ಸರ್ಕಾರದಿಂದ ಹಣ ಮಂಜೂರು ಮಾಡಿಸಿ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಳಿಸಿದ್ದರು. ಅನಂತರ ಬಂದ ಶಾಸಕರು ಮೋಟರ್ ಖರೀದಿಸಿದ ಗುತ್ತಿಗೆದಾರನಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಇದುವರೆಗೂ ಹೊಸ ಮೋಟರ್‌ಗಳನ್ನು ಅಳವಡಿಸಿಲ್ಲ. ಉಬ್ರಾಣಿ ಏತನೀರಾವರಿ ಯೋಜನೆಯಲ್ಲಿ ಅರಾಜಕತೆ ಸೃಷ್ಠಿಯಾಗಿದೆ ಎಂದು ಆರೋಪಿಸಿದರು.
ಆಡಳಿತ ಪಕ್ಷದವರು ನಮ್ಮ ಮೇಲೆ ಆರೋಪ ಮಾಡಲಿ. ಆದರೆ ಜನರಿಗೆ ಸಮರ್ಪಕ ಕುಡಿಯುವ ನೀರು, ಕೆರೆಗಳಿಗೆ ಸಮರ್ಪಕ ನೀರನ್ನು ಹರಿಸಿ. ಇಲ್ಲದಿದ್ದರೆ ರಾಜೀನಾಮೆ ನೀಡಿ. ಅಧಿಕಾರ ಮುಖ್ಯವಲ್ಲ, ಜನರ ಹಿತಾಸಕ್ತಿ ಮುಖ್ಯ ಎಂದರು.
ಚುನಾಯಿತ ಪ್ರತಿನಿಧಿ ಬೇಜವಾಬ್ದಾರಿಯಿಂದ ಇದ್ದಾರೆ ಎಂದು ಅಧಿಕಾರಿಗಳು ಬೇಜವಾಬ್ದಾರಿ ತನದ ವರ್ತನೆ ಮಾಡಬೇಡಿ. ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯಲಿ ಎಂದು ನಾನು ಇಲ್ಲಿಯವರೆಗೂ ಸುಮ್ಮನಿದ್ದೇನೆ. ಇದೇ ರೀತಿ ಮುಂದುವರೆದರೆ ಕ್ಷೇತ್ರದ ಜನರ ಹಿತಾಸಕ್ತಿಗೋಸ್ಕರ ಉಗ್ರ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಪ್ರಾರಂಭಗೊಂಡು ವರ್ಷಗಳೇ ಕಳೆಯುತ್ತಿದ್ದರೂ ಕೆರೆಗಳಿಗೆ ನೀರು ಬರುತ್ತಿಲ್ಲ. ಎಲ್ಲಿಂದಲೋ ಬಂದು ರಾಜಕಾರಣ ಮಾಡುವವರಿಗೆ ಈ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಕ್ಷೇತ್ರದ ಮತದಾರರ ದಿಕ್ಕು ತಪ್ಪಿಸಿ ಮತಗಳನ್ನು ಕೊಡಿಸಿದ್ದಾರೆ. ನೀವಾದರೂ ಜವಾಬ್ದಾರಿ ತೆಗೆದುಕೊಂಡು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದರು.ಸೂಳೆಕೆರೆಯಿಂದ ಚನ್ನಗಿರಿ ಪಟ್ಟಣ ಸೇರಿದಂತೆ ಇತರೆ 80 ಹಳ್ಳಿಗಳಿಗೆ ಕುಡಿಯುವ ನೀರನ್ನು ವಿತರಣೆ ಮಾಡುವ ಯೋಜನೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಆದರೆ ಈಗ ಕಲುಷಿತ ನೀರು ವಿತರಣೆಯಾಗುತ್ತಿದೆ. ಸ್ಥಳೀಯ ಸರ್ಕಾರವಾಗಿರುವ ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಣವಿಲ್ಲದೇ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಡಿ.ಸಿ.ಕುಮಾರಸ್ವಾಮಿ, ಕೆ.ಆರ್.ಗೋಪಿ, ರಂಗನಾಥ್, ಗುರುಸಿದ್ದಯ್ಯ, ಜಗದೀಶ್, ಚಿಕ್ಕೂಲಿಕೆರೆ ಸಂಗಮೇಶ್ ಹಾಜರಿದ್ದರು.- - -
(ಬಾಕ್ಸ್) ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಕುಬೇಂದ್ರೋಜಿ ರಾವ್ ಮಾತನಾಡಿ, ಪುರಸಭೆ ಅಧಿಕಾರಿಗಳು ಪುಟ್ಪಾಟ್ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಫುಟ್ಪಾತ್ ಒತ್ತುವರಿ ತೆರವು ಸಂದರ್ಭ ಎಲ್ಲರಿಗೂ ಒಂದೇ ಮಾನದಂಡದಿಂದ ತೆರವುಗೊಳಿಸಬೇಕು. ಆದರೆ ರಾಜಕೀಯ ದ್ವೇಷದಿಂದ ಕೆಲವು ಕಡೆ ತೆರವುಗೊಳಿಸಿದರೆ ಇನ್ನು ಕೆಲವು ಕಡೆ ಹಾಗೆಯೇ ಬಿಟ್ಟಿರುವುದು ಯಾವ ಉದ್ದೇಶಕ್ಕಾಗಿ? ಜನವಸತಿ ಪ್ರದೇಶಗಳಲ್ಲಿಯೂ ಪುಟ್‌ಪಾತ್ ಒತ್ತುವರಿ ತೆರವು ಎಂದು ಮನೆಗಳ ಮುಂಭಾಗದ ಮೆಟ್ಟಿಲುಗಳನ್ನು ತೆಗೆದು ಹಾಕುವುದು ಯಾರನ್ನು ಮೆಚ್ಚಿಸಲು ಎಂದು ಪ್ರಶ್ನಿಸಿದರು.ನ್ಯಾಯಾಲಯದ ಆದೇಶ ನಾವು ಗೌರವನೀಡುತ್ತೇವೆ. ಆದರೆ ಎಲ್ಲರಿಗೂ ಒಂದೇ ಮಾನದಂಡದಲ್ಲಿ ಪುಟ್ ಪಾತ್ ಒತ್ತುವರಿ ತೆರವುಗೊಳಿಸಬೇಕು. ಕೆಲವರಿಗೆ ಒಂದು ಇನ್ನೊಬ್ಬರಿಗೆ ಇನ್ನೊಂದು ಕಾನೂನು ಮಾಡಿದರೆ ಸಹಿಸುವುದಿಲ್ಲ ಎಂದರು.
- - --9ಕೆಸಿಎನ್ಜಿ1:
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿದರು.