ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟರ ಪ್ರಗತಿ ಸಹಿಸದ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಲಿಂಗಸೂಗೂರು ಸೀಮಿತಗೊಂಡು ಕ್ಷೇತ್ರದ ಅಭಿವೃದ್ಧಿಗೆ ಅಡ್ಡಗಾಲು ಆಗುತ್ತಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ತಮ್ಮದೇ ಪಕ್ಷದ ಎಂ ಎಲ್ ಸಿ ವಿರುದ್ಧ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟರ ಪ್ರಗತಿ ಸಹಿಸದ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಲಿಂಗಸೂಗೂರು ಸೀಮಿತಗೊಂಡು ಕ್ಷೇತ್ರದ ಅಭಿವೃದ್ಧಿಗೆ ಅಡ್ಡಗಾಲು ಆಗುತ್ತಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ತಮ್ಮದೇ ಪಕ್ಷದ ಎಂ ಎಲ್ ಸಿ ವಿರುದ್ಧ ಹರಿಹಾಯ್ದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದರು, ಇನ್ನೂ ಮುಂದೆ ಬಯ್ಯಾಪುರರವರ ಕುತಂತ್ರ ನಡೆಯುವುದಿಲ್ಲ. ಕುತಂತ್ರ ಮಾಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬೆನ್ನಿಗೆ ಚೂರಿ ಹಾಕುವ ಮೂಲಕ ಕಾಂಗ್ರೆಸ್ ಸೋಲಿಗೆ ಕಾರಣರಾದ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಕೆಪಿಸಿಸಿ ಉಪಧ್ಯಕ್ಷರಾಗಿರುವ ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಕಾಂಗ್ರೆಸ್ ಪಕ್ಷದ ಅಧಿಕೃತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿರುವ ನನಗೆ ಯಾವುದೇ ಮಾಹಿತಿ ನೀಡದೇ ಎಂಎಲ್ಸಿಯವರು ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲಾಗಿದ್ದು, ಬರುವ ದಿನಗಳಲ್ಲಿ ಅವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

ರಾಯಚೂರು-ಕೊಪ್ಪಳ ಜಿಲ್ಲಾ ವ್ಯಾಪ್ತಿ ಹೊಂದಿರುವ ಎಂಎಲ್ಸಿಯವರು ಲಿಂಗಸುಗೂರಿಗೆ ಸೀಮಿತವಾಗಿದ್ದಾರೆ. ಕಾಂಗ್ರೆಸ್‌ಗೆ ಬಗೆದಿರುವ ದ್ರೋಹ ಜನ ಮರೆತಿಲ್ಲ. ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟರು ರಾಜಕಾರಣ ಮಾಡಬಾರದೇ? ಪರಿಶಿಷ್ಟರ ಏಳಿಗೆ ಸಹಿಸದೇ ಬಯ್ಯಾಪೂರರು ವಿನಾಕಾರಣ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಕಟ್ಟುವ ಕೆಲಸವನ್ನು ಡಿ.ಎಸ್.ಹೂಲಗೇರಿ ನೇತೃತ್ವದಲ್ಲಿ ಮಾಡುತ್ತಿದ್ದೇವೆ. ಎರಡು ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷನಾಗಿ ಪಕ್ಷ ಹಾಗೂ ಕಾರ್ಯಕರ್ತರ ವಿಶ್ವಾಸದೊಂದಿಗೆ ಕೆಲಸ ಮಾಡುತ್ತಿದ್ದೇನೆ. ಬಯ್ಯಾಪುರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳನ್ನು ಅನಧಿಕೃತವಾಗಿ ರಚನೆ ಮಾಡಿ ಪದಗ್ರಹಣ ಕಾರ್ಯಕ್ರಮ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಹೈಕಮಾಂಡ್‌ಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಅಧಿಕಾರ ಮೇಲ್ವರ್ಗದವರ ಸ್ವತ್ತಲ್ಲ ದಲಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ಆದರೆ ಹತ್ತಾರು ವರ್ಷ ಅಧಿಕಾರ ಅನುಭವಿಸಿದ ಮೇಲ್ವರ್ಗದವರನ್ನೇ ಯಾಕೆ ನೇಮಕ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಜಾತ್ಯಾತೀತ ಪಕ್ಷ ಒಂದು ಧರ್ಮ ವರ್ಗಕ್ಕೆ ಸೀಮಿತಗೊಂಡಿಲ್ಲ. ಬಯ್ಯಾಪುರರ ಪಕ್ಷ ನಿಷ್ಠೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೊತ್ತಾಗಿದೆ ಎಂದು ಹೇಳಿದರು.

ಈ ವೇಳೆ ಮುದಗಲ್ ಬ್ಲಾಕ್ ಅಧ್ಯಕ್ಷ ಶಿವಶಂಕರಗೌಡ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಾಜಾ ಹುಸೇನ್ ಫೂಲವಾಲೆ, ಪುರಸಭೆ ಸದಸ್ಯರಾದ ಮಹ್ಮದ್ ರಫಿ, ರುದ್ರಪ್ಪ ಬ್ಯಾಗಿ, ಎಸ್ಸಿ ಘಟಕದ ಅದ್ಯಕ್ಷ ಉಮೇಶ ಐಹೊಳೆರ್, ಎಸ್ ಟಿ ಮೋರ್ಚಾ ತಾಲೂಕು ಅಧ್ಯಕ್ಷ ಸಂಗಮೇಶ ನಾಯಕ, ನೀಲಪ್ಪ ಪವಾರ್, ಸಂಜೀವಪ್ಪ ಚಲುವಾದಿ, ಗದ್ದೆನಗೌಡ ಸೇರಿದಂತೆ ಇದ್ದರು.