ಸಾರಾಂಶ
ಮರಳು ಸಮಸ್ಯೆಗೆ ಬಿಜೆಪಿ ನೀತಿಗೆ ಕಾರಣ: ಹರೀಶ್ಶ್ ಕುಮಾರ್ರ್
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತಲೆದೋರಲು ನಾಲ್ಕು ವರ್ಷ ಆಡಳಿತ ನಡೆಸಿದ ಬಿಜೆಪಿಯ ಮರಳು ನೀತಿಯೇ ಕಾರಣ ಹೊರತು ಕಾಂಗ್ರೆಸ್ ಸರ್ಕಾರವಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು ಸಮಸ್ಯೆಗೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಶಾಸಕರು ಹೇಳುತ್ತಿದ್ದಾರೆ. ಯು.ಟಿ. ಖಾದರ್ ಸಚಿವರಾಗಿದ್ದಾಗ ಸ್ಯಾಂಡ್ ಬಜಾರ್ ಆಪ್ ಮಾಡಿ ಕಡಿಮೆ ಬೆಲೆಗೆ ಕ್ಲಪ್ತ ಸಮಯದಲ್ಲಿ ಮರಳು ಸಿಗುವಂತೆ ಮಾಡಿದ್ದರು. ಬಿಜೆಪಿ ಅವಧಿಯಲ್ಲಿ ಅದನ್ನು ನಿಲ್ಲಿಸಿದ್ದು ಯಾಕೆ? ಮೊದಲ ಬಾರಿಗೆ ಅದೂ ಡ್ರೆಜ್ಜಿಂಗ್ ಮೂಲಕ ಸೇತುವೆ ಅಡಿಯ ನಿರ್ಬಂಧಿತ ಪ್ರದೇಶದಲ್ಲಿ ಮರಳುಗಾರಿಕೆ ನಡೆದಿದ್ದು ಬಿಜೆಪಿಯ ನಾಲ್ಕು ವರ್ಷಗಳ ಆಡಳಿತ ಅವಧಿಯಲ್ಲೇ ಎಂಬುದನ್ನು ಅವರು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಆಸ್ಕರ್ ಫರ್ನಾಂಡಿಸ್ ಕೇಂದ್ರ ಸಚಿವರಾಗಿದ್ದಾಗ ಸಿಆರ್‌ಝಡ್‌ನ ಕೆಲವು ನಿಯಮಗಳನ್ನು ಸರಳೀಕರಣ ಮಾಡಿದ್ದರು. ಆದರೆ 10 ವರ್ಷ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಈ ಬಗ್ಗೆ ಯಾವ ಪ್ರಯತ್ನವನ್ನೂ ಮಾಡಿಲ್ಲ. ಈಗ ಆರೋಪ ಮಾಡುವ ಬಿಜೆಪಿ ಶಾಸಕರು ತಮ್ಮ ಸರ್ಕಾರವೇ ಅಧಿಕಾರದಲ್ಲಿದ್ದಾಗ ಈ ಬಗ್ಗೆ ಒಂದು ಸಲವಾದರೂ ನಿಯೋಗ ತೆರಳಿ ಪ್ರಶ್ನೆ ಮಾಡಿದ್ದರೇ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.ಬಿಜೆಪಿ ಅವಧಿಯಲ್ಲಿ ಸ್ವತಃ ರಾಜ್ಯಾಧ್ಯಕ್ಷರು 2 ಸಾವಿರ ರು.ಗೆ ಒಂದು ಲೋಡ್ ಮರಳು ನೀಡುವುದಾಗಿ ಹೇಳಿದ್ದರು. ಅದನ್ನು ಅನುಷ್ಠಾನ ಮಾಡಿದ್ರಾ? ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ಮುಖಂಡರಾದ ಪದ್ಮನಾಭ ನರಿಂಗಾನ, ಟಿ.ಕೆ. ಸುಧೀರ್, ಗಣೇಶ್ ಪೂಜಾರಿ, ಅಬ್ದುಲ್ ಸಲೀಂ, ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ಲಾರೆನ್ಸ್ ಡಿಸೋಜ, ಸುಭಾಶ್ ಶೆಟ್ಟಿ, ನೀರಜ್ ಪಾಲ್, ಯೋಗೇಶ್ ಕುಮಾರ್ ಇದ್ದರು.ಸುರತ್ಕಲ್ ಟೋಲ್ ಆರಂಭದ ಬಗ್ಗೆ ಸ್ಪಷ್ಟನೆ ಕೊಡಿ
ಸುರತ್ಕಲ್‌ನಲ್ಲಿ ಟೋಲ್‌ಗೇಟ್ ಮತ್ತೆ ಕಾರ್ಯಾರಂಭ ಆಗುವ ಸುದ್ದಿ ಕೇಳಿಬರುತ್ತಿದೆ. ಅದು ಆರಂಭ ಆಗುತ್ತದೋ, ಇಲ್ಲವೋ ಮೊದಲು ಸ್ಪಷ್ಟಪಡಿಸಬೇಕು. ಹೋರಾಟದ ಮೂಲಕ ಆ ಟೋಲ್ ಗೇಟ್ ಬಂದ್ ಆಗಿದ್ದು, ಈಗ ಮತ್ತೆ ತೆರೆಯಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಸಂಸದರು ನಿಜ ವಿಷಯ ಹೇಳಲಿ ಎಂದು ಹರೀಶ್ ಕುಮಾರ್ ಹೇಳಿದರು.