ಎಂಎಲ್‌ಸಿ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ

| Published : May 22 2025, 12:48 AM IST

ಸಾರಾಂಶ

ಚಿತ್ರದುರ್ಗದಲ್ಲಿ ಮಾಜಿ ಸಚಿವ ಆಂಜನೇಯ ಸ್ಪಷ್ಟನೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ತಾವು ಎಂಎಲ್‌ಸಿ ಇಲ್ಲವೇ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲವೆಂದು ಮಾಜಿ ಸಚಿವ ಎಚ್.ಆಂಜನೇಯ ಸ್ವಷ್ಟ ಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಿಗರು ಸೇರಿದಂತೆ ಪರಿಶಿಷ್ಟ ಗುಂಪಿನಲ್ಲಿರುವ ಎಲ್ಲರಿಗೂ ಅವರವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಆಗಬೇಕೆಂಬುದು ನನ್ನ ಮೂಲ ಉದ್ದೇಶ. ಈ ಕಾರಣಕ್ಕೆ ಸಚಿವ ಸ್ಥಾನ ನನಗೆ ಬೇಕಿಲ್ಲ. ಒಳಮೀಸಲಾತಿ ಜಾರಿಗೊಂಡರೇ ಅದೇ ನನ್ನ ಪಾಲಿಗೆ ಬಹುದೊಡ್ಡ ಸ್ಥಾನಮಾನ ಎಂದರು.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಲು ಬಹುದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಹಾಗಾಗಿ ಚುನಾವಣೆಗೆ ಸ್ಪರ್ಧೆ ಮಾಡಬೇಡಿಯ ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರಕ್ಕೆ ಸಮಯ ಮೀಸಲಿಡಿ, ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಚಿವರನ್ನಾಗಿಸಿಕೊಳ್ಳಲಾಗುವುದು ಎಂದು ವರಿಷ್ಠರು ಸೂಚಿಸಿದ್ದರು.

ಹೋರಾಟದಿಂದಲೇ ಮೇಲೆ ಬಂದ ನನಗೆ ಚುನಾವಣೆಯಲ್ಲಿ ಗೆದ್ದೇ ಮಂತ್ರಿ ಆಗಬೇಕು ಎಂಬ ಮಹಾದಾಸೆ ಇತ್ತು. ಜೊತೆಗೆ ಗೆದ್ದೇ ಗೆಲ್ಲುತ್ತೇನೆ, ಹೊಳಲ್ಕೆರೆ ಕ್ಷೇತ್ರದ ಜನ ಕೈಬಿಡುವುದಿಲ್ಲವೆಂಬ ಭರವಸೆ ಇತ್ತು. ಆದರೆ, ವರಿಷ್ಠರ ಮಾತು ಕೇಳದೆ ಸ್ಪರ್ಧೆ ಮಾಡಿ ಸೋತಿದ್ದೇನೆ. ಈಗ ನಾನು ಹೇಗೆ ಎಂಎಲ್‌ಸಿ, ಸಚಿವ ಸ್ಥಾನ ಕೊಡಿ ಎಂದು ಕೇಳಲು ಸಾಧ್ಯ ಎಂದರು.

ಸಿದ್ದರಾಮಯ್ಯ ಅವರನ್ನು ಅಂಬೇಡ್ಕರ್ ಅವರಿಗೆ ಹೊಲಿಕೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆಂಜನೇಯ, ಅಂಬೇಡ್ಕರ್ ನೊಂದ ಜನ ಆಶಾಕಿರಣ. ಸಂವಿಧಾನ ರಚಿಸುವ ಮೂಲಕ ನಮಗೆ ಮೀಸಲಾತಿ ನೀಡಿದರು. ಅವರಂತೆಯೇ ಅಸ್ಪೃಶ್ಯರು, ಅಶಕ್ತ ಜನರ ಬದುಕು ಉತ್ತಮ ಪಡಿಸಲು ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿಯೇ ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾಯ್ದೆ ಸೇರಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.

ಹಸಿದ ಹೊಟ್ಟೆಗೆ ಅನ್ನ, ಬಡ ಮಕ್ಕಳಿಗೆ ಬಟ್ಟೆ, ಊಟ, ಗುತ್ತಿಗೆಯಲ್ಲಿ ಎಸ್‌ಸಿ, ಎಸ್‌ಟಿಗೆ ಮೀಸಲು ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಈ ಕಾರಣಕ್ಕೆ ಕೊಪ್ಪಳದಲ್ಲಿ ನಮ್ಮ ಪಾಲಿಗೆ ಸಿದ್ದರಾಮಯ್ಯ ಎರಡನೇ ಅಂಬೇಡ್ಕರ್ ಎಂದು ಹೇಳಿದ್ದೇನೆ. ಇದರಲ್ಲಿ ಹೊಗಳಿಕೆ ಏನು ಬಂತು, ಯಾರಿಗೆ ಅಪಮಾನ ಆಗಿದೆ ಹೇಳಿ ಎಂದರು.

ಅಂಬೇಡ್ಕರ್, ಬಾಬು ಜಗಜೀವನ್ ರಾಂ ರೀತಿಯಲ್ಲಿಯೇ ಶೋಷಿತ ವರ್ಗದ ಜನರ ಏಳ್ಗೆಗೆ ಸಿದ್ದರಾಮಯ್ಯ ತಮ್ಮ ಬದ್ಧತೆ ಪ್ರದರ್ಶಿಸುತ್ತಿದ್ದಾರೆ. ಅನೇಕ ವಿರೋಧ, ಷಡ್ಯಂತ್ರಗಳನ್ನು ಲೆಕ್ಕಿಸದೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಜನರ ಪ್ರಗತಿಗಾಗಿ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಆದ್ದರಿಂದಲೇ ಅವರನ್ನು ಅಂಬೇಡ್ಕರ್ ಎಂದು ಕರೆಯಲಾಗಿದೆ ಎಂದು ತಿಳಿಸಿದರು.