ಹಾಸ್ಟೆಲ್‌ಗೆ ಎಂಎಲ್‌ಸಿ ನಾಗರಾಜ್ ಯಾದವ್ ದಿಢೀರ್ ‌ಭೇಟಿ

| Published : Jan 24 2025, 12:46 AM IST

ಹಾಸ್ಟೆಲ್‌ಗೆ ಎಂಎಲ್‌ಸಿ ನಾಗರಾಜ್ ಯಾದವ್ ದಿಢೀರ್ ‌ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಯ ಸಂಗಮೇಶ್ವರ ನಗರದಲ್ಲಿರುವ ಡಾ.ಅಂಬೇಡ್ಕರ್ ‌ಮೆಟ್ರಿಕ್‌‌ ನಂತರದ ಬಾಲಕರ ವಸತಿ ನಿಲಯಕ್ಕೆ ಪರಿಷತ್ ಸದಸ್ಯ ನಾಗರಾಜ್ ಯಾದವ್ ದಿಢೀರ್ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ಸಂಗಮೇಶ್ವರ ನಗರದಲ್ಲಿರುವ ಡಾ.ಅಂಬೇಡ್ಕರ್ ‌ಮೆಟ್ರಿಕ್‌‌ ನಂತರದ ಬಾಲಕರ ವಸತಿ ನಿಲಯಕ್ಕೆ ಪರಿಷತ್ ಸದಸ್ಯ ನಾಗರಾಜ್ ಯಾದವ್ ದಿಢೀರ್ ಭೇಟಿ ನೀಡಿದರು.

ಬುಧವಾರ ರಾತ್ರಿ 10 ಕ್ಕೆ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು, ವಸತಿ ನಿಲಯದಲ್ಲಿನ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಊಟದ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದು ಕೆಲಹೊತ್ತು ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು. ವಸತಿ ನಿಲಯಗಳಿಗೆ ಸರ್ಕಾರ ಸಾಕಷ್ಟು ‌ಪ್ರಮಾಣದಲ್ಲಿ ವೆಚ್ಚ ಮಾಡ್ತಿದೆ. ವಸತಿ ನಿಲಯದ ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು. ಸಾಮಾನ್ಯ ವರ್ಗದ ಜನರ ಜತೆಗೆ ಸ್ಪರ್ಧೆ ಮಾಡಲು ಸಿದ್ಧರಾಗಬೇಕು. ಎಂಜಿನಿಯರಿಂಗ್, ಕಾನೂನು ವಿದ್ಯಾರ್ಥಿಗಳು ಕೌಶಲ ವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಶೌಚಗೃಹಗಳ‌ ಸ್ವಚ್ಚತೆಗೆ ಆದ್ಯತೆ ನೀಡ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ಈ ಬಗ್ಗೆ ಗಮನ ಹರಿಸುವಂತೆ ನಿಲಯ ಪಾಲಕ ವಿನೋದ್ ಗೆ ಎಂಎಲ್‌ಸಿ ನಾಗರಾಜ್ ಯಾದವ್ ನಿರ್ದೇಶನ ನೀಡಿದರು.

ಡಿಜಿಟಲ್ ‌ಲೈಬ್ರರಿ ವ್ಯವಸ್ಥೆ: ವಸತಿ ನಿಲಯದ ಲೈಬ್ರರಿಗೂ ಭೇಟಿ ನೀಡಿದ‌ ಎಂಎಲ್‌ಸಿ ನಾಗರಾಜ್, ವಸತಿ ನಿಲಯಕ್ಕೆ ಸುಸಜ್ಜಿತ ‌ಡಿಜಿಟಲ್ ಲೈಬ್ರರಿ ‌ಹಾಗೂ ಜಿಮ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸುವೆ. ನನ್ನ ಬಳಿ ಮೀಸಲಿರುವ ಅನುದಾನದಲ್ಲಿ ಈ ಎರಡೂ ಸೌಲಭ್ಯ ಕಲ್ಪಿಸುವೆ. ನನಗೊಂದು ಮನವಿ ಕೊಡಿ, ಆ ಬಳಿಕ ನಾನು ಕ್ರಮ ವಹಿಸುವೆ. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮೂಲಕವೂ ಅನುದಾನ ಕೊಡಿಸಲಾಗುವುದು ಎಂದು ಭರವಸೆ ‌ನೀಡಿದರು.