ಅಸೂಟಿ ಗೆಲುವಿಗೆ ಶ್ರಮಿಸುವ ಲಿಂಗಾಯತರಿಗೆ ಎಂಎಲ್ಸಿ ಸ್ಥಾನ!

| Published : Mar 26 2024, 01:15 AM IST

ಸಾರಾಂಶ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಗೆಲುವಿಗೆ ಯಾವ ಲಿಂಗಾಯತ ಮುಖಂಡರು ಪ್ರಾಮಾಣಿಕವಾಗಿ ಶ್ರಮಿಸುತ್ತಾರೋ ಅವರಿಗೆ ಜಗದೀಶ ಶೆಟ್ಟರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್‌ ಸ್ಥಾನ ನೀಡಲಾಗುವುದು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಗೆಲುವಿಗೆ ಯಾವ ಲಿಂಗಾಯತ ಮುಖಂಡರು ಪ್ರಾಮಾಣಿಕವಾಗಿ ಶ್ರಮಿಸುತ್ತಾರೋ ಅವರಿಗೆ ಜಗದೀಶ ಶೆಟ್ಟರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್‌ ಸ್ಥಾನ ನೀಡಲಾಗುವುದು..!

ಇಂತಹದೊಂದು ಸ್ಪಷ್ಟ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಧಾರವಾಡ ಜಿಲ್ಲೆಯ ಲಿಂಗಾಯತ ಮುಖಂಡರಿಗೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಲಿಂಗಾಯತ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದೆ.

1998ರ ವರೆಗೆ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್‌ ಟಿಕೆಟ್ ಕೊಡುತ್ತಿತ್ತು. ತದನಂತರ 1999ರಲ್ಲಿ ನಡೆದ ಚುನಾವಣೆಯಿಂದ ತನ್ನ ತಂತ್ರಗಾರಿಕೆಯನ್ನು ಬದಲಿಸಿ ಲಿಂಗಾಯತ ಸಮುದಾಯಕ್ಕೆ ನೀಡಲು ಶುರು ಮಾಡಿತು. 1999ರಿಂದ ನಂತರ ನಡೆದ ಐದು ಚುನಾವಣೆಗಳಲ್ಲಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕ್ಷೇತ್ರದಲ್ಲಿ ಲಿಂಗಾಯತರೇ ಬಹುಸಂಖ್ಯಾತರು. ಬರೋಬ್ಬರಿ 5 ಲಕ್ಷ ಮತದಾರರಿದ್ದಾರೆ. ಹೀಗಾಗಿ ಲಿಂಗಾಯತರಿಗೆ ಕೊಟ್ಟರೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಇತ್ತು.

ಆದರೆ, ಇದು ಫಲಕಾರಿಯಾಗಲಿಲ್ಲ. ಲಿಂಗಾಯತರಿಗೆ ಟಿಕೆಟ್‌ ಕೊಟ್ಟರೂ ಕಾಂಗ್ರೆಸ್‌ ಗೆಲ್ಲುತ್ತಿರಲಿಲ್ಲ. ಹೀಗಾಗಿ ಈ ಸಲ ಮತ್ತೆ ತನ್ನ ತಂತ್ರಗಾರಿಕೆಯನ್ನು ಬದಲಿಸುವ ಉದ್ದೇಶದಿಂದ ಕುರುಬ ಸಮುದಾಯದ ವಿನೋದ ಅಸೂಟಿಗೆ ಟಿಕೆಟ್‌ ನೀಡಿದೆ. ಹಾಗೆ ನೋಡಿದರೆ ವಿನೋದ ಯುವ ರಾಜಕಾರಣಿ. ಸಂಘಟನಾ ಚತುರ. ನವಲಗುಂದ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿ ಎದುರಾಳಿಗಳಿಗೆ ಸರಿಯಾಗಿ ಠಕ್ಕರ್‌ ಕೊಟ್ಟವ. ಜತೆಗೆ ಕ್ಷೇತ್ರದಲ್ಲಿ ಲಿಂಗಾಯತರನ್ನು ಹೊರತುಪಡಿಸಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸಿದರೆ 11 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಈ ಅಹಿಂದ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧರಿಸಿ ಅಸೂಟಿಗೆ ಟಿಕೆಟ್‌ ನೀಡಿದೆ.

ಸ್ಪಷ್ಟ ಸೂಚನೆ:

ಧಾರವಾಡ ಕ್ಷೇತ್ರದಲ್ಲಿ ಎಷ್ಟೇ ಗಟ್ಟಿಕುಳ ನಿಂತರೂ ಬಿಜೆಪಿ ಎದುರಿಗೆ ಸೋಲುವುದು ಗ್ಯಾರಂಟಿ. ಇದಕ್ಕೆ ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ, ಹಣಕ್ಕಾಗಿ ತಮ್ಮನ್ನು ಮಾರಿಕೊಳ್ಳುವವರ ಒಳಹೊಡೆತವೇ ಕಾರಣ ಎಂಬುದು ಬಹಿರಂಗ ಸತ್ಯ. ಹೀಗಾಗಿಯೇ ಪ್ರತಿ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ ಎಂಬ ಮಾತು ಸಹಜವಾಗಿಯೇ ಕೇಳಿ ಬರುತ್ತದೆ. ಆತ್ಮವಿಮರ್ಶೆ ಸಭೆಗಳಲ್ಲೂ ಇದು ಗುನಗುನಾಯಿಸುತ್ತಲೇ ಇರುತ್ತದೆ. ಇದೀಗ ಯಾವುದೇ ಕಾರಣಕ್ಕೂ ಈ ಸಲ ಕಾಂಗ್ರೆಸ್‌ ಅಭ್ಯರ್ಥಿ ಸೋಲಬಾರದು. ಒಳಹೊಡೆತ ಆಗದಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ಜತೆಗೆ ಜಗದೀಶ ಶೆಟ್ಟರ ಕಳೆದ ವಿಧಾನಸಭೆ ಚುನಾವಣೆ ವೇಳೆ ಹೇಗೆ ಪಕ್ಷಕ್ಕೆ ಬಂದಿದ್ದರು. ಅದೇ ವೇಗದಲ್ಲಿ ಬಿಜೆಪಿಗೆ ಮರಳಿದ್ದರು. ಆದರೆ ಇವರಿಗೆ ವಿಧಾನಪರಿಷತ್‌ ಸದಸ್ಯರನ್ನಾಗಿ ಪಕ್ಷ ಮಾಡಿತ್ತು. ಅದನ್ನೇ ಇದೀಗ ದಾಳವನ್ನಾಗಿ ಮಾಡಿದೆ.

ಶೆಟ್ಟರ್‌ ರಾಜೀನಾಮೆಯಿಂದ ತೆರವಾಗಿರುವ ಎಂಎಲ್ಸಿ ಸ್ಥಾನವನ್ನು ಲಿಂಗಾಯತ ಮುಖಂಡರಿಗೆ ಕೊಡಬೇಕೆಂದರೆ ಅಸೂಟಿ ಪರವಾಗಿ ಪ್ರಾಮಾಣಿಕ ಕೆಲಸ ಮಾಡಬೇಕು. ದೊಡ್ಡ ಸಮುದಾಯವನ್ನು ಕಾಂಗ್ರೆಸ್ಸಿನತ್ತ ತಿರುಗಿಸುವ ಸಾಮರ್ಥ್ಯವನ್ನು ಆ ಮುಖಂಡ ಪ್ರದರ್ಶಿಸಬೇಕು. ಲಿಂಗಾಯತರಷ್ಟೇ ಅಲ್ಲ, ಅಸೂಟಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಇನ್ನುಳಿದ ಸಮುದಾಯದ ಮುಖಂಡರಿಗೆ ಎಂಎಲ್ಸಿ ಸ್ಥಾನ ನೀಡಲಾಗುವುದು ಎನ್ನುವ ಸಂದೇಶವನ್ನು ಕೆಪಿಸಿಸಿ ರವಾನಿಸಿದೆ.

ಕೆಪಿಸಿಸಿ ಕಣ್ಗಾವಲು:

ಈ ಮಹಾ ಸಮರದಲ್ಲಿ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಯಾರು ಒಳಹೊಡೆತ ಕೊಡುತ್ತಾರೆ ಎಂಬುದರ ಬಗ್ಗೆ ನಿಗಾ ಇಡಲೆಂದೇ ಕೆಪಿಸಿಸಿಯ ಇಬ್ಬರು ಪ್ರತಿನಿಧಿಗಳು ಚುನಾವಣೆ ಮುಗಿಯುವವರೆಗೆ ಧಾರವಾಡ ಕ್ಷೇತ್ರದಲ್ಲಿ ಬೀಡು ಬಿಡಲಿದ್ದಾರೆ. ಇಷ್ಟರಮಟ್ಟಿಗೆ ಕಾಂಗ್ರೆಸ್‌ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ.