ರೇವಣ್ಣ ಕುಟುಂಬದ ವಿರುದ್ಧ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಆಕ್ರೋಶ

| Published : Jul 13 2024, 01:47 AM IST / Updated: Jul 13 2024, 10:36 AM IST

ಸಾರಾಂಶ

 ರೇವಣ್ಣ ಕುಟುಂಬದವರು ಕಳೆದ 20 ವರ್ಷಗಳಿಂದ ಅಧಿಕಾರದ ಸಾಮ್ರಾಜ್ಯವನ್ನು ಸ್ಥಾಪಿಸಿ ಆಡಳಿತ ಯಂತ್ರ ತಾವು ಹೇಳಿದಂತೆ ಕೇಳುವಂತೆ ಮಾಡುವ ಜತೆಗೆ ರಾಜಕೀಯ ದೌರ್ಜನ್ಯ ಮಾಡಿ, ವೈಯಕ್ತಿಕ ದ್ವೇಷ, ಅಧಿಕಾರ ದುರ್ಬಳಕೆ ಮಾಡಿಕೊಂಡು, ಸುಳ್ಳು ಕೇಸುಗಳನ್ನು ದಾಖಲಿಸಿ, ನಮ್ಮ ಸಮುದಾಯವನ್ನು ತುಳಿಯುತ್ತಾ ಬಂದಿದ್ದಾರೆ  

  ಹೊಳೆನರಸೀಪುರ  : ಶಾಸಕ ರೇವಣ್ಣ ಕುಟುಂಬದವರು ಕಳೆದ ೨೦ ವರ್ಷಗಳಿಂದ ಅಧಿಕಾರದ ಸಾಮ್ರಾಜ್ಯವನ್ನು ಸ್ಥಾಪಿಸಿ, ಆಯಕಟ್ಟಿನ ಸ್ಥಾನಗಳಲ್ಲಿ ತಮ್ಮವರನ್ನು ಕೂರಿಸಿ, ಆಡಳಿತ ಯಂತ್ರವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು, ಆಡಳಿತ ಯಂತ್ರ ತಾವು ಹೇಳಿದಂತೆ ಕೇಳುವಂತೆ ಮಾಡುವ ಜತೆಗೆ ರಾಜಕೀಯ ದೌರ್ಜನ್ಯ ಮಾಡಿ, ವೈಯಕ್ತಿಕ ದ್ವೇಷ, ಅಧಿಕಾರ ದುರ್ಬಳಕೆ ಮಾಡಿಕೊಂಡು, ಸುಳ್ಳು ಕೇಸುಗಳನ್ನು ದಾಖಲಿಸಿ, ನಮ್ಮ ಸಮುದಾಯವನ್ನು ತುಳಿಯುತ್ತಾ ಬಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು. 

ಪಟ್ಟಣದ ಕನಕ ಭವನದ ಮುಂಭಾಗದಲ್ಲಿ ತಾಲೂಕು ಕುರುಬರ ಸಂಘ, ಅಹಿಂದಾ ಸಂಘಟನೆ ಹಾಗೂ ಕುರುಬ ಸಮಾಜದ ಸಹಕಾರದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಡಿ.ದೇವರಾಜ್ ಅರಸ್ ಹೊರತುಪಡಿಸಿದರೆ, ಹಿಂದುಳಿದ ವರ್ಗದ ನಾಯಕರಲ್ಲಿ ಸಿದ್ದರಾಮಯ್ಯ ಮಾತ್ರ ಈ ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು, ಹೆಜ್ಜೆ ಹೆಜ್ಜೆಗೂ ತಪ್ಪು ಹುಡುಕುವ ಕೆಲಸ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯನವರ ರಾಜ್ಯ ರಾಜಕೀಯ ಸೂಕ್ಷ್ಮತೆಯನ್ನು ಅವಲೋಕಿಸಿದರು.

ನಿಮ್ಮೆಲ್ಲರ ಬೆಂಬಲದಿಂದಾಗಿಯೇ ಸಿದ್ದರಾಮಯ್ಯನವರು ರಾಜ್ಯದಲ್ಲಿ ಎರಡನೇ ಬಾರಿಯೂ ಮುಖ್ಯಮಂತ್ರಿಯಾಗಿರಲು ಸಾಧ್ಯವಾಗಿದೆ. ಹಿಂದುಳಿದ ವರ್ಗದ ರಾಜಕಾರಣಿಗಳು ಇಂತಹ ರಾಜಕೀಯ ಬೆಳವಣಿಗೆ ಹೊಂದುವುದು ಅಷ್ಟು ಸುಲಭದ ಮಾತಲ್ಲ. ರಾಜ್ಯದಲ್ಲಿ ಡಿ.ದೇವರಾಜ್ ಅರಸು ಹೊರತುಪಡಿಸಿದರೆ ಹಿಂದುಳಿದ ವರ್ಗದ ನಾಯಕರಲ್ಲಿ ಸಿದ್ದರಾಮಯ್ಯನವರೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ ಮನೋಭಾವ ಇರಿಸಿಕೊಂಡಿದ್ದಾರೆ ಎಂದರು.

ನಿಮ್ಮ ತಾಲೂಕಿನಲ್ಲಿ ಅಭಿವೃದ್ಧಿ ತಾರತಮ್ಯ ಇದೆ, ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಕಳೆದ ೨೦ ವರ್ಷದಿಂದ ತುಳಿತಕ್ಕೊಳಗಾಗಿ, ತಾರತಮ್ಯದ ನೋವು ಅನುಭವಿಸಿದ್ದಾರೆ. ಹೆಚ್ಚಿನ ಅನುದಾನ ಅಗತ್ಯ ಇದೆ. ಹಲವಾರು ಅತ್ಯಗತ್ಯ ಕೆಲಸ ಆಗಬೇಕೆಂದು ಗಮನಕ್ಕೆ ತಂದಿದ್ದಾರೆ. ನಾನು ಮುಖ್ಯಮಂತ್ರಿಗಳ ಬಳಿ ಮಾತನಾಡಿ, ಅದರಲ್ಲೂ ಹಳ್ಳಿಮೈಸೂರು ಭಾಗಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಿದೆ ಎಂಬ ಭರವಸೆ ನೀಡಿದರು. 

ರಾಜಕೀಯ ಪ್ರಾಬಲ್ಯದ ಕುಟುಂಬದ ವಿರುದ್ಧ ಸ್ಪರ್ಧಿಸಿ, ಜಯಗಳಿಸಬೇಕಾದ ವ್ಯಕ್ತಿಯೂ ಬಹಳ ವರ್ಷಗಳಿಂದ ಸಂಘಟನೆ ಮಾಡುತ್ತಾ, ಅವರ ವಿರುದ್ಧ ಹೋರಾಟ ಮಾಡುವ ಜತೆಗೆ ಎಲ್ಲಾ ಸಮುದಾಯಗಳ ಜನರ ಪ್ರೀತಿ ವಿಶ್ವಾಸ ಹಾಗೂ ಗೌರವದಿಂದ ಮಾಡಿದಾಗ ಮಾತ್ರ ಮತ್ತು ಅವರನ್ನು ದರ್ಪ ಹಾಗೂ ದೌರ್ಜನ್ಯದಿಂದ ವರ್ತಿಸಲ್ಲ ಎಂಬ ಭಾವನೆ ಮೂಡವಂತಹ ಮನಸ್ಥಿತಿ ಅವರಲ್ಲಿ ಇದ್ದಾಗ ಮಾತ್ರ ಗೆಲುವು ಸಾಧ್ಯವೆಂದು ತಿಳಿಸಿ, ಇಂತಹ ವಿಶಾಲವಾದ ಹೃದಯ ಶ್ರೀಮಂತಿಕೆ ಹೊಂದಿರುವ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ನಿಮ್ಮ ಪ್ರೀತಿ ಹಾಗೂ ಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಆಡಳಿತ ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನಿಮ್ಮಿಂದ ಸನ್ಮಾನ ಸ್ವೀಕರಿಸುವ ಯಾವುದೇ ಸಾಧನೆ ಮಾಡದ ನಾವು ಸನ್ಮಾನ ಸ್ವೀಕರಿಸಲು ಅರ್ಹ ವ್ಯಕ್ತಿಗಳೇ ಎಂಬ ಪ್ರಶ್ನೆ ಮೂಡುತ್ತದೆ, ಆದರೆ ಐದಾರು ಸಲ ನಿಮ್ಮ ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀವು ತೋರಿದ ಪ್ರೀತಿ ಹಾಗೂ ಗೌರವ ಇಂದು ಪುನ: ನಿಮ್ಮನ್ನು ಭೇಟಿ ಮಾಡಲು ಪ್ರೇರೇಪಿಸಿದೆ ಎಂದರು. ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್ ಮಾತನಾಡಿ, ಹಳ್ಳಿಮೈಸೂರು ಹೋಬಳಿ ಬಹುತೇಕ ಈ ತಾಲೂಕಿನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ, ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಗಮನ ಸೆಳೆದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ, ತಾ. ಕುರುಬರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಾಗಿವಾಳು ಮಂಜೇಗೌಡ, ಕಾರ್ಯದರ್ಶಿ ಎಂ.ವಿ.ಧಾಶರತಿ, ಅಹಿಂದಾ ಹಿತರಕ್ಷಣ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಮಲ್ಲಪ್ಪನಹಳ್ಳಿ ಮೋಹ, ತಾ. ಕುರುಬ ಸಂಘದ ಮುಖಂಡರಾದ ವಕೀಲ ಹರೀಶ್, ಪುಟ್ಟರಾಜು ಪತ್ರಿಕಾ ವಿತರಕ ಮೋಹನ್ ಇತರರು ಇದ್ದರು.

ವರುಣ ಕ್ಷೇತ್ರ ಯತೀಂದ್ರ ಅವರಿಗೆ ಒಂದು ಕಣ್ಣಾದರೆ ಮತ್ತೊಂದು ಕಣ್ಣು ಹೊಳೆನರಸೀಪುರ ಆಗಬೇಕು. ಕಾರಣ ಇಲ್ಲಿನ ಬಹುತೇಕ ಹಳ್ಳಿಗಳು ಅಭಿವೃದ್ಧಿಯಾಗಬೇಕಿದೆ. ಇದಕ್ಕಾಗಿ ನಿಮ್ಮ ಕೃಪೆ ಇರಲಿ. ಸಿದ್ದರಾಮಯ್ಯನವರು ನನ್ನ ಮೇಲಿಟ್ಟಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ, ನನ್ನ ಕಡೇ ಉಸಿರು ಇರುವ ತನಕ ಅವರಿಗೆ ಮತ್ತು ನಿಮ್ಮೆಲ್ಲರ ಅಭಿಮಾನಕ್ಕೆ ಚಿರರುಣಿಯಾಗಿರುತ್ತೇನೆ.

- ಶ್ರೇಯಸ್‌ ಪಟೇಲ್‌, ಸಂಸದ