ಯಾವುದೇ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿಲ್ಲ. ನಮ್ಮ ರೈತರ ಬದುಕು ಉಳಿಸಲು, ಕಾವೇರಿ ಹಕ್ಕನ್ನು ರಕ್ಷಿಸಲು ಒಂದಾಗಿದ್ದೇವೆ. ನೀರಿನ ಮೇಲೆ ಲಕ್ಷಾಂತರ ರೈತರ ಬದುಕು, ಸಾವಿರಾರು ಕುಟುಂಬಗಳ ಭವಿಷ್ಯ ಅಡಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ಖಂಡಿಸಿ, ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಒತ್ತಾಯಿಸಿ ಎಂ.ಎಂ.ಫೌಂಡೇಶನ್ ನೇತೃತ್ವದಲ್ಲಿ ಪದಾಧಿಕಾರಿಗಳು, ಯುವ ಮುಖಂಡರು, ರೈತ ಕಾರ್ಯಕರ್ತರು ನಗರದಲ್ಲಿ ಭಾನುವಾರ ಹೆದ್ದಾರಿಯಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಫೌಂಡೇಷನ್ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು ಖಾಲಿ ಬಿಂದಿಗೆ, ಒಣಗಿದ ಕಬ್ಬಿನ ಜೊಲ್ಲೆ ಹಿಡಿದು ರಾಜ್ಯ ಸರ್ಕಾರ, ಸಮಿತಿ ಹಾಗೂ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಯಾವುದೇ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿಲ್ಲ. ನಮ್ಮ ರೈತರ ಬದುಕು ಉಳಿಸಲು, ಕಾವೇರಿ ಹಕ್ಕನ್ನು ರಕ್ಷಿಸಲು ಒಂದಾಗಿದ್ದೇವೆ. ನೀರಿನ ಮೇಲೆ ಲಕ್ಷಾಂತರ ರೈತರ ಬದುಕು, ಸಾವಿರಾರು ಕುಟುಂಬಗಳ ಭವಿಷ್ಯ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮಹಾಲಿಂಗೇಗೌಡ ಮುದ್ದನಘಟ್ಟ, ನಮ್ಮ ಹೋರಾಟ ಶಾಂತಿಯುತ ಹಾಗೂ ಧ್ವನಿ ಪ್ರಬಲವಾಗಿಬೇಕು. ಯಾವುದೇ ಪ್ರಚೋದನೆಗೆ ಒಳಗಾಗದೆ ಕಾನೂನು ಬದ್ಧ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಮ್ಮ ಹಕ್ಕಿಗಾಗಿ ಒತ್ತಾಯವಾಗಿದೆ ಎಂದರು.

ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ, ಮಳೆ ಪರಿಸ್ಥಿತಿ ಹಾಗೂ ಬೆಳೆಗಳ ಅಗತ್ಯವನ್ನು ವೈಜ್ಞಾನಿಕವಾಗಿ ಪರಿಗಣಿಸದೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ ಸಿ) ಮತ್ತು ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ವು ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಆದೇಶ ರೈತರ ಹಿತಕ್ಕೆ ಧಕ್ಕೆ ತಂದಿದೆ ಎಂದು ಕಿಡಿಕಾರಿದರು.

ಕಾವೇರಿ ನದಿ ನೀರು ಉಳಿಸಿ ಜಿಲ್ಲೆಯ ರೈತರ ಬದುಕನ್ನು ಕಾಪಾಡಬೇಕಿದೆ. ರೈತರು ಉಳಿದರೆ ದೇಶ ಉಳಿಯುತ್ತದೆ. ತಮಿಳುನಾಡಿಗೆ ನೀರು ಬಿಡುಗಡೆ ಆದೇಶ ರೈತರ ಬದುಕಲ್ಲಿ ಆತಂಕ ಮೂಡಿಸಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡ್ಯ ಜಿಲ್ಲೆಯ ರೈತರ ಹಿತಕ್ಕೆ ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ನೀರಿನ ಪರಿಸ್ಥಿತಿ ಮತ್ತು ಬೆಳೆಗಳ ಅವಶ್ಯಕತೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರೈತಪರ ಸಂಘಟನೆಗಳ ಹೋರಾಟಗಾರರ ಅಭಿಪ್ರಾಯ ಆಲಿಸಿ ನ್ಯಾಯ ಸಮ್ಮತ ಕ್ರಮ ಕೈಗೊಳ್ಳಬೇಕು. ತಮಿಳುನಾಡಿಗೆ ನೀರು ಬಿಡುವ ಸಂದರ್ಭ ಬಂದಾಗ ಯಾವುದೇ ತ್ಯಾಗಕ್ಕೂ ಸಿದ್ದರಾಗಬೇಕು ಮುಖ್ಯಮಂತ್ರಿ ಹಾಗೂ ಸರ್ಕಾರವನ್ನು ಒತ್ತಾಯಿಸಿದರು.

ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು, ಸಂವಿಧಾನಬದ್ಧ ಹಕ್ಕುಗಳಿಗಾಗಿ ನಡೆಯುವ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಹೋರಾಟ ಅಗತ್ಯವಾಗಿದೆ. ಎಂ.ಎಂ.ಫೌಂಡೇಶನ್ ರೈತ, ಬಡವರ ಹಾಗೂ ಸಮಾಜದ ಪರ ಸದಾ ನಿಲ್ಲುತ್ತದೆ ಎಂದು ಕರೆ ನೀಡಿದರು.

ಇದೇ ವೇಳೆ ಹೋರಾಟ ಗೀತೆಯೊಂದಿಗೆ ಸಮಿತಿ, ಪ್ರಾಧಿಕಾರ, ತಮಿಳುನಾಡು ಸರ್ಕಾರ, ರಾಜ್ಯ ಸರ್ಕಾರದ ವಿರುದ್ಧ ನಾಲ್ಕು ದಿಕ್ಕುಗಳಿಂದ ರೈತರನ್ನು ಕುಣಿಕೆಯಾಗಿ ಎಳೆಯುವ ವಿಡಂಬನಾತ್ಮಕ ದೃಶ್ಯ ಪ್ರದರ್ಶಿಸಿ ಗಮನ ಸೆಳೆಯಲಾಯಿತು.

ಪ್ರತಿಭಟನೆಯಲ್ಲಿ ಎಂ.ಎಂ.ಫೌಂಡೇಶನ್ ಪದಾಧಿಕಾರಿಗಳಾದ ವಿವೇಕ್, ರವಿಕುಮಾರ್, ಅಮಿತ್ ಗೌಡ, ತೇಜಸ್ ಗೌಡ, ಮೋಹನ್, ರವಿ ಗೌಡ, ಗೌತಮ್, ಅನಿಲ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದರು.