ವಿದ್ಯಾರ್ಥಿಗಳು ಪರಿಶ್ರಮಿಸಿದರೆ ಮಾತ್ರ ಒಂದು ಶಿಕ್ಷಣ ಸಂಸ್ಥೆ ಹೆಮ್ಮೆ ಪಡಲು ಸಾಧ್ಯ.
ಕನ್ನಡಪ್ರಭ ವಾರ್ತೆ ಮೈಸೂರುಮೆಡಿಕಲ್, ಎಂಜಿನಿಯರಿಂಗ್ ಮಾತ್ರ ಶಿಕ್ಷಣವಲ್ಲ. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಿ. ಯುವಕರು ನವೋದ್ಯಮ ಸ್ಥಾಪಿಸುವ ಕಡೆಗೆ ಹೆಚ್ಚು ಒಲವನ್ನು ತೋರಿಸಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.ನಗರದ ಎಂಎಂಕೆ ಮತ್ತು ಎಸ್ ಡಿಎಂ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾಲೇಜಿನ 2025- 26ನೇ ಶೈಕ್ಷಣಿಕ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಹೊಗೆಯಾಡುವ ಕೊರಡಿನಂತೆ ನೂರು ವರ್ಷ ಬದುಕುವುದಕ್ಕಿಂತ ಪ್ರಜ್ವಲಿಸಿ ಉರಿದು ಉಪಯುಕ್ತವಾಗುವ ಬೆಂಕಿಯಂತೆ ಬದುಕಬೇಕು ಎಂದರು.ವಿದ್ಯಾರ್ಥಿಗಳು ಪರಿಶ್ರಮಿಸಿದರೆ ಮಾತ್ರ ಒಂದು ಶಿಕ್ಷಣ ಸಂಸ್ಥೆ ಹೆಮ್ಮೆ ಪಡಲು ಸಾಧ್ಯ. ನಿಮ್ಮ ಪರಿಶ್ರಮದ ಮೇಲೆ ವಿದ್ಯೆ ನಿಮಗೆ ದೊರಕುತ್ತದೆಯೇ ಹೊರತು, ನೀವು ಯಾವ ಹಿನ್ನೆಲೆಯಿಂದ ಯಾವ ಕೇರಿಯಿಂದ, ಯಾವ ಮೊಹಲ್ಲಾದಿಂದ ಬಂದಿರಿ ಎಂಬುದನ್ನು ವಿದ್ಯೆ ಕೇಳುವುದಿಲ್ಲ ಎಂದು ಅವರು ಹೇಳಿದರು.ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪ ನಿರ್ದೇಶಕಿ ಎಂ.ಪಿ. ನಾಗಮ್ಮ ಮಾತನಾಡಿ, ವಿದ್ಯಾರ್ಥಿನಿಯರ ಪ್ರತಿಭೆಯ ಅನಾವರಣಕ್ಕೆ ಶಿಕ್ಷಕರ ಪರಿಶ್ರಮವು ಸೇರಿದಾಗ ಸಾಧನೆ ಸುಗಮವಾಗುತ್ತದೆ. ಮುಂದೆ ಬರುವ ಪರೀಕ್ಷೆಗಳಿಗೆ ಚೆನ್ನಾಗಿ ತಯಾರಿ ಮಾಡಿಕೊಂಡು ಬರೆಯಿರಿ. ಒಳ್ಳೆಯ ಫಲಿತಾಂಶ ಗಳಿಸಿರಿ ಎಂದು ಶುಭ ಹಾರೈಸಿದರು.ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜು ಪ್ರಾಂಶುಪಾಲೆ ಪ್ರೊ.ಎನ್. ಭಾರತಿ ಮಾತನಾಡಿ, ಅವಕಾಶಗಳು ಎಲ್ಲರಿಗೂ ಸಿಗುತ್ತವೆ. ಆದರೆ ಪರಿಶ್ರಮದಿಂದ ಮಾತ್ರ ಸಾಧನೆ ಆಗುತ್ತದೆ. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಗುರುಕೃಪೆ, ಪೋಷಕರ ಪ್ರೋತ್ಸಾಹ ಇವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಯಶಸ್ಸು ಗಳಿಸಬೇಕು. ಅಂತಹ ವಿದ್ಯಾರ್ಥಿನಿಯರು ಕಾಲೇಜಿನ ಹೆಮ್ಮೆ ಆಗುತ್ತಾರೆ ಎಂದರು.ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ನಯನಕುಮಾರಿ ಮಾತನಾಡಿ, ವಿದ್ಯಾರ್ಥಿನಿಯರು ಅಧ್ಯಯನಶೀಲರಾಗಿ ಉನ್ನತ ವ್ಯಾಸಂಗ ಮಾಡಿ, ಕಾಲೇಜಿಗೂ ತಂದೆ- ತಾಯಿಯರಿಗೂ ಕೀರ್ತಿ ತರಬೇಕು. ಪಠ್ಯಪೂರಕ ಹಾಗೂ ಕ್ರೀಡಾ ಚಟುವಟಿಕೆಗಳು ಕೂಡ ಮುಖ್ಯವಾದವು. ಆ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ವಿದ್ಯಾರ್ಥಿ ದಿಸೆಯಲ್ಲಿ ಅದನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಇದೇ ವೇಳೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಲಾಯಿತು. ಪ್ರಸ್ತುತ ವರ್ಷದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಕೆ.ಎನ್. ಜಿತಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜ್ಯೋತಿ, ಕಾರ್ಯದರ್ಶಿ ಎಂ. ಕಲ್ಪಿತ ನಾಯಕ್ ಹಾಗೂ ಪದಾಧಿಕಾರಿಗಳು ಇದ್ದರು. ಲಿಖಿತಾ ತಂಡದವರು ಪ್ರಾರ್ಥಿಸಿದರು. ಅರ್ಪಿತಾ ಸ್ವಾಗತಿಸಿದರು. ರಕ್ಷಿತಾ ವಂದಿಸಿದರು. ತನುಜಾ ನಿರೂಪಿಸಿದರು.