ಮಂಗಳೂರು: ವಿಬಿ- ಜಿ ರಾಮ್‌ ಜಿ (ವಿಕಾಸ್‌ ಭಾರತ್‌- ಜಿ ರಾಮ್‌ ಜಿ ) ಯಾಗಿ ಪುನರ್‌ ನಾಮಕರಣಗೊಂಡಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ ನರೇಗಾ)ದಡಿ ಹೊಸ ಕಾಮಗಾರಿಗಳಿಗೆ ಇನ್ನೂ ಅನುಮೋದನೆ ದೊರಕಿಲ್ಲ. ಹಾಗಾಗಿ ಕಳೆದ ವರ್ಷದಲ್ಲಿ ಅನುಮೋದನೆಗೊಂಡಿರುವ ಕೆಲಸ ಕಾರ್ಯಗಳು ಮುಂದಿನ ಆರು ತಿಂಗಳವರೆಗೆ ಮುಂದುವರಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಯೋಜನೆಯಡಿ ಹೊಸ ಸಾಲಿನ ಕ್ರಿಯಾ ಯೋಜನೆಯನ್ನು ಹಿಂದಿನ ವರ್ಷದ ಅಕ್ಟೋಬರ್‌ 2ರಿಂದಲೇ ಸಿದ್ಧಪಡಿಸಲಾಗುತ್ತದೆ. ಜಿಲ್ಲೆಯ ಕ್ರಿಯಾ ಯೋಜನೆಯನ್ನೂ ತಯಾರಿಸಲಾಗಿದೆ. ಆದರೆ ಪುನರ್‌ ನಾಮಕರಗೊಂಡಿರುವ ಯೋಜನೆಯು ಇನ್ನಷ್ಟೇ ಅಧಿಸೂಚನೆಗೊಂಡು ಹೊಸ ಕಾಮಗಾರಿಗಳಿಗೆ ಕಾರ್ಯಾದೇಶ ದೊರೆಯಬೇಕಿದೆ. ಅಲ್ಲಿಯವರೆಗೆ ಹಿಂದಿನ ವರ್ಷದಲ್ಲಿ ಅನುಮೋದನೆಗೊಂಡ ಯೋಜನೆಗಳು ಮುಂದಿನ ಆರು ತಿಂಗಳವರೆಗೆ ಮುಂದುವರಿಯಲಿವೆ. 2025-26ನೆ ಸಾಲಿನಲ್ಲಿ ಈ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಶೇ. 90ರಷ್ಟು ಸಾಧನೆಯಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ತಿಳಿಸಿದರು.


ಬೆಳ್ತಂಗಡಿಯಲ್ಲಿ 94ಸಿ ಯಡಿ 419 ಅರ್ಜಿಗಳು ಬಾಕಿ!: 94 ಸಿ ಅಡಿಯಲ್ಲಿ ದ.ಕ. ಜಿಲ್ಲೆಯಲ್ಲಿ ಮೂಡುಬಿದಿರೆ, ಕಡಬ ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳಲ್ಲಿ ಬಾಕಿ ಇರುವ ಅರ್ಜಿಗಳ ಸಂಖ್ಯೆ ಶೂನ್ಯ. 94 ಸಿ (ಗ್ರಾಮಾಂತರ) ಪ್ರದೇಶಗಳಲ್ಲಿ ಬೆಳ್ತಂಗಡಿಯಲ್ಲಿ 419 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಬೆಳ್ತಂಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಇರುವ ಅರ್ಜಿಗಳು ಯಾವಾಗ ಇತ್ಯರ್ಥವಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್‌, 2025ರ ಅಕ್ಟೋಬರ್‌ ಅಂತ್ಯಕ್ಕೆ ದ.ಕ. ಜಿಲ್ಲೆಯಲ್ಲಿ 2,041 ಅರ್ಜಿಗಳು 94 ಸಿಯಡಿ ವಿಲೇವಾರಿಗೆ ಬಾಕಿ ಇದ್ದುದೆ. ಭಾಗಶ: ಅರಣ್ಯ ಇರುವ ಅರ್ಜಿಗಳನ್ನು ಹೊರತುಪಡಿಸಿ ಎಲ್ಲ ಅರ್ಜಿಗಳನ್ನು ಡಿಸೆಂಬರ್‌ ಒಳಗೆ ವಿಲೇವಾರಿಗೆ ತಹಶೀಲ್ದಾರ್‌ಗೆ ನಿರ್ದೇಶನ ನೀಡಲಾಗಿತ್ತು. ಅದರಂತೆ ಮೂಡುಬಿದಿರೆಯಲ್ಲಿ 43, ಕಡಬದಲ್ಲಿ 20 ಹಾಗೂ ಬೆಳ್ತಂಗಡಿಯಲ್ಲಿ 419 ಅರ್ಜಿಗಳು ವಿಲೇಗೆ ಬಾಕಿ ಇವೆ. ಬಾಕಿ ರುವ ಪ್ರಕರಣಗಳಲ್ಲಿ 480 ಅರಣ್ಯ ಅಭಿಪ್ರಾಯದಿಂದ ಬಾಕಿಯಾಗಿದ್ದು, ಬೆಳ್ತಂಗಡಿಯ 2 ಅರ್ಜಿಗಳು ತಕರಾರು ಆಕ್ಷೇಪದಿಂದ ಬಾಕಿಯಾಗಿವೆ ಎಂದರು.

ಮಂದಿನ ಕೆಡಿಪಿ ಸಭೆಯೊಳಗೆ ಎಲ್ಲ ಅರ್ಜಿಗಳನ್ನು ವಿಲೇ ಮಾಡಿ ಶೂನ್ಯ ಬಾಕಿ ಆಗುವಂತೆ ಕ್ರಮ ವಹಿಸಿ ಎಂದು ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.

ಅಧಿಕಾರಿಗಳಿಗೆ ಶಾಸಕ ತರಾಟೆ: ಧರ್ಮಸ್ಥಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜೋಡು ಸ್ಥಾನದಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಕುರಿತಂತೆ ಗಂಭೀರ ಚರ್ಚೆ ನಡೆಯಿತು. ಶಾಸಕ ಹರೀಶ್‌ ಪೂಂಜಾ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಅತಿಕ್ರಮಣ ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವರು ಸೂಚನೆ ನೀಡಿದರು. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಉಸ್ತುವಾರಿ ಕಾರ್ಯದರ್ಶಿ ಸಮೀರ್‌ ಶುಕ್ಲ, ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌, ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ, ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕುಮಾರ್‌ ಇದ್ದರು.