ಸಾರಾಂಶ
ದ್ವಿಚಕ್ರ ವಾಹನ ಸವಾರನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ದ್ವಿಚಕ್ರ ವಾಹನ ಸವಾರನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕಲ್ಕೆರೆ ಚಗಲಟ್ಟಿ ದೊಡ್ಡಯ್ಯ ಲೇಔಟ್ ನಿವಾಸಿ ಮುರುಗನ್ (33), ದೊಡ್ಡ ಬಾಣಸವಾಡಿ ಬಿ.ಚನ್ನಸಂದ್ರ ನಿವಾಸಿ ಅನಿಲ್ ಕುಮಾರ್ (31) ಹಾಗೂ ಕಲ್ಕೆರೆ ಪೂಜಾ ಗಾರ್ಡನ್ ನಿವಾಸಿ ತೇಜಸ್ (25) ಬಂಧಿತರು. ಆರೋಪಿಗಳಿಂದ ಒಂದು ಮೊಬೈಲ್ ಫೋನ್, ವಾಚ್ ಹಾಗೂ ₹3700 ನಗದು ಸೇರಿ ಸುಮಾರು ₹70 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರರು ಜು.7ರಂದು ತಡರಾತ್ರಿ 1 ಗಂಟೆಗೆ ಸ್ನೇಹಿತನ ಜತೆ ದ್ವಿಚಕ್ರ ವಾಹನದಲ್ಲಿ ಕಲ್ಕೆರೆಯ ಎನ್‌ಆರ್‌ಐ ಲೇಔಟ್‌ನ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೆ ಮೂವರು ಅಪರಿಚಿತರು ದ್ವಿಚಕ್ರ ವಾಹನ ಅಡ್ಡಗಟ್ಟಿ ದೂರುದಾರ ಮತ್ತು ಸ್ನೇಹಿತನಿಂದ ವಾಚ್, ಮೊಬೈಲ್ ಫೋನ್ ಸುಲಿಗೆ ಮಾಡಿದ್ದರು. ಅಂತೆಯೇ ದೂರುದಾರನಿಂದ ಫೋನ್ ಪೇ ಮುಖಾಂತರ ₹3,700 ವರ್ಗಾಯಿಸಿಕೊಂಡಿದ್ದರು. ಈ ಸಂಬಂಧ ದಾಖಲಾದ ದೂರು ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆರೋಪಿಗಳು ದುಶ್ಚಟಗಳ ದಾಸರಾಗಿದ್ದು, ತಮ್ಮ ಚಟಗಳಿಗೆ ಸುಲಭವಾಗಿ ಹಣ ಹೊಂದಿಸುವ ಸಲುವಾಗಿ ಅಪರಾಧ ಕೃತ್ಯಗಳನ್ನು ಎಸೆಗುತ್ತಿದ್ದರು. ರಾತ್ರಿ ವೇಳೆ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರು, ವಾಹನ ಸವಾರರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳ ಬಂಧನದಿಂದ ರಾಮಮೂರ್ತಿನಗರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.