ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪ್ರಸ್ತುತ ವಿದ್ಯಾರ್ಥಿಗಳಿಗೆ ಕೇವಲ ಮೊಬೈಲ್ ಒಂದು ಕಾಲಹರಣ ಸಾಧನವಾಗಿದೆ ಎಂದು ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಹಾಯಕ ಪ್ರಾಧ್ಯಾಪಕ ಡಾ. ಭೀಮರಾಜು ಈರೇಗೌಡ ಬೇಸರ ವ್ಯಕ್ತಪಡಿಸಿದರು.ಭಾರತೀ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಭಾರತೀ ಪಿಯು ಕಾಲೇಜಿನ ವತಿಯಿಂದ ಕಲಾ ಮತ್ತು ವಾಣಿಜ್ಯ ವಿಭಾಗದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಮೊಬೈಲ್ ಅನ್ನು ಅದ್ಭುತವಾದ ಕಲಿಕಾ ಯಂತ್ರವಾಗಿ ವಿದ್ಯಾರ್ಥಿಗಳು ಬದಲಿಸಿಕೊಂಡರೆ ಅದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ವಿದ್ಯಾಥಿಗಳು ಕಾರ್ಯೋನ್ಮುಖರಾಗಬೇಕು ಎಂದು ಕಿವಿಮಾತು ಹೇಳಿದರು.ನಮ್ಮಲ್ಲಿ ಜ್ಞಾನ ಇಲ್ಲವಾದರೆ ಅದು ನಮ್ಮ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಿ ನಮ್ಮ ಆಲೋಚನಾ ಶಕ್ತಿಯನ್ನೇ ಹಾಳು ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿ ಮಿತ್ರರು ಯಾವುದೇ ವಸ್ತುವನ್ನಾಗಲಿ, ಯಂತ್ರವನ್ನಾಗಲಿ ಅಥವಾ ಕಲಿಕೆಯನ್ನಾಗಲಿ ವಿಭಿನ್ನ ರೀತಿಯಲ್ಲಿ ಬಳಸುವುದು, ಕಲಿಯುವುದರಿಂದ ಅದ್ಭುತ ಜೀವನವನ್ನು ರೂಪಿಸಿಕೊಳ್ಳಬಹುದು ಎಂದರು.
ಇಂದಿನ ಆಧುನಿಕ ಪ್ರಪಂಚಕ್ಕೆ ಹೊಸತನದ ಜತೆ ಜತೆಗೆ ಕ್ರಿಯಾಶೀಲತೆಯುಳ್ಳ ಆಲೋಚನಾ ಕ್ರಮಗಳ ಅಗತ್ಯತೆ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಕೇವಲ ಜ್ಞಾನಾರ್ಜನೆಗಾಗಿ ವಿದ್ಯಾಭ್ಯಾಸ ಮಾಡುವ ಜತೆಗೆ ಹೊಸ ರೀತಿಯ ಆಲೋಚನಾ ಕ್ರಮಗಳನ್ನು ಬೆಳೆಸಿಕೊಂಡು ಉನ್ನತ ಮಟ್ಟದ ಕನಸುಗಳನ್ನು ಕಾಣುತ್ತಾ ಅವುಗಳನ್ನು ಬೆನ್ನಟ್ಟಿ ಹೋದಾಗ ಮಾತ್ರ ಸಾರ್ಥಕ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಸಲಹೆ ನೀಡಿದರು.ನಾವು ಜ್ಞಾನರ್ಜನೆ ಹೊಂದಿಲ್ಲದಿದ್ದರೆ ಈ ಆಧುನಿಕ ಪ್ರಪಂಚಕ್ಕೆ ನಾವು ಯಾವ ಕಾಲಕ್ಕೂ ಲೆಕ್ಕಕ್ಕಿಲ್ಲದ ಸವಕಲು ನಾಣ್ಯಗಳಾಗುತ್ತೇವೆ. ನಾಣ್ಯ ಚಲಾವಣೆ ಇರಬೇಕೆಂದರೆ ಜ್ಞಾನ ಅಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯತ್ತ ತಮ್ಮ ಚಿತ್ತ ಹರಿಸಬೇಕು ಎಂದರು.
ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಎಸ್. ಜವರೇಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿ ಕೊಳ್ಳುವತ್ತ ಗಮನ ಹರಿಸಬೇಕು. ಗ್ರಂಥಾಲಯಕ್ಕೆ ತೆರಳಿ ಸಾಮಾನ್ಯ ಜ್ಞಾನದ ಬಗ್ಗೆ ಅಧ್ಯಯನ ಮಾಡಿದರೆ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಲಿತವಾಗಿ ಎದುರಿಸಬಹುದು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಜಿ.ಬಿ. ಪಲ್ಲವಿ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಟಿ. ಗಣೇಶ್, ಬಿ.ಕೆ. ಕೃಷ್ಣ, ಸಾಂಸ್ಕೃತಿಕ ಸಂಚಾಲಕಿ ಮಾನಸ, ಟಿ.ಎಚ್. ದಿವ್ಯಶ್ರೀ, ಸಿ. ಸುಮಿತ್ರಾ ಸೇರಿ ಹಲವರಿದ್ದರು.