ಸಾರಾಂಶ
ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಗಳಲ್ಲಿ ಪೋಷಕರು ಎಷ್ಟೇ ಹೇಳಿದರೂ ಮೊಬೈಲ್ ವೀಕ್ಷಣೆ ಕಡಿಮೆ ಮಾಡದೆ, ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ, ರಾತ್ರಿ ವೇಳೆ ಮಲಗುವಾಗ ತಲೆ ಬಳಿ ಮೊಬೈಲ್ ಇರಿಸಿಕೊಂಡು ಮಲಗುವುದು, ಅತಿಯಾಗಿ ಮೊಬೈಲ್ ನೋಡುವುದು ಕ್ಯಾನ್ಸರ್‌ಗೆ ಕಾರಣವಾಗಬಹುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ವೀಕ್ಷಣೆ ಮಾರಕವಾಗಿದೆ ಎಂದು ಡಯಟ್ ನಿವೃತ್ತ ಉಪನ್ಯಾಸಕ ಗುರುಮೂರ್ತಿ ಹೇಳಿದರು.ನಗರದಲ್ಲಿರುವ ಮಾಜಿ ಪುರಸಭೆ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ಸಿಂಧುಶ್ರೀ ಕಲಾ ಸಂಸ್ಥೆ ಹೆಮ್ಮಿಗೆ, ಸಂಧ್ಯಾ ಸಾಂಸ್ಕೃತಿಕ ವೇದಿಕೆ ಸಾದೊಳಲು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ಮೊಬೈಲ್‌ನಿಂದ ದೂರವಿರಿ-ಪುಸ್ತಕ ಓದಿ-ಜಾಣರಾಗಿ- ದೊಡ್ಡವರಾಗಿ’ ವಿಚಾರ ಸಂಕಿರಣ ಮತ್ತು ವಿಶ್ವರತ್ನ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಾಲಾ- ಕಾಲೇಜು ಹಂತದ ವಿದ್ಯಾರ್ಥಿ ಸಮೂಹ ಅತಿಯಾಗಿ ಮೊಬೈಲ್ ಬಳಕೆಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ, ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾರೆ, ಪಠ್ಯ ಪುಸ್ತಕ ಓದುವ- ಬರೆಯುವ ಸುಜ್ಞಾನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಿದರು.ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಗಳಲ್ಲಿ ಪೋಷಕರು ಎಷ್ಟೇ ಹೇಳಿದರೂ ಮೊಬೈಲ್ ವೀಕ್ಷಣೆ ಕಡಿಮೆ ಮಾಡದೆ, ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ, ರಾತ್ರಿ ವೇಳೆ ಮಲಗುವಾಗ ತಲೆ ಬಳಿ ಮೊಬೈಲ್ ಇರಿಸಿಕೊಂಡು ಮಲಗುವುದು, ಅತಿಯಾಗಿ ಮೊಬೈಲ್ ನೋಡುವುದು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಕಿವಿಮಾತು ಹೇಳಿದರು.
ಸಿಂಧುಶ್ರೀ ಕಲಾ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಶಿವಣ್ಣ ಮಾತನಾಡಿ, ಜನಪದ ಕಲಾವಿದನಾಗಿ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಜನಪದ, ನಾಟಕ, ಹಾಸ್ಯ- ಲಾಸ್ಯ ಕಲಿಸಿದ್ದೇವೆ, ಉತ್ತಮ ವಿದ್ಯಾರ್ಥಿಗಳಾಗಲು ಒಂದೊಂದು ಪ್ರತಿಭೆ ಪೂರಕ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ಸಹ ಶಿಕ್ಷಕ ಮಲ್ಲಿಕಾರ್ಜುನಯ್ಯ, ನಿವೃತ್ತ ಮುಖ್ಯ ಶಿಕ್ಷಕ ಜಯರಾಮು, ಯುವಕವಿ ಗುರುಗೌತಮ್, ಶಿಕ್ಷಕ ವೃಂದ ಹಾಜರಿದ್ದರು.
ಲೈಂಗಿಕ ಕಿರುಕುಳ ತಡೆಗಟ್ಟಲು ದೂರು ಸಮಿತಿ ರಚನೆಮಂಡ್ಯ:
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧಿಸುವಿಕೆ ಮತ್ತು ನಿವಾರಿಸುವಿಕೆ ಕಾಯ್ದೆಯ ಅನುಷ್ಠಾನಕ್ಕಾಗಿ ಸುಪ್ರೀಂ ಕೋರ್ಟ್ ಆದೇಶದಂತೆ 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಆಂತರಿಕ ದೂರು ಸಮಿತಿ ರಚಿಸಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಮಾಹಿತಿ ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.